

ವಿಕ್ರಮ ನಾಡಿಗೇರ ಧಾರವಾಡ ಗರ್ಭಿಣಿ ಮತ್ತು ಬಾಣಂತಿಯರಿಗೆ ಕೇಂದ್ರ ಸರ್ಕಾರ ಪ್ರಧಾನಮಂತ್ರಿ ಮಾತೃವಂದನಾ ಯೋಜನೆ ಜಾರಿಗೆ ತಂದಿದೆ. ಈ ಯೋಜನೆಗೆ ನೋಂದಾಯಿಸಿದ ಜಿಲ್ಲೆಯ ಫಲಾನುಭವಿಗಳಿಗೆ 6.57 ಕೋಟಿ ರೂ. ಸಹಾಯ ಧನ ಬಾಕಿ ಉಳಿದ ಪರಿಣಾಮ ಸಂಕಷ್ಟಕ್ಕೀಡಾಗಿದ್ದಾರೆ. ಕೂಲಿ, ಮನೆ ಕೆಲಸಕ್ಕೆ ತೆರಳುವ ಮಹಿಳೆಯರಿಗೆ ಹೆರಿಗೆಯಾದ ಸಮಯದಲ್ಲಿ ವಿಶ್ರಾಂತಿಗಾಗಿ, ಮಗುವಿನ ಪಾಲನೆಗೆ ಸಹಾಯವಾಗಲಿ ಎಂಬ ದೃಷ್ಟಿಯಿಂದ 2017ರಲ್ಲಿ ಕೇಂದ್ರ ಸರ್ಕಾರ ಯೋಜನೆಯನ್ನು ಜಾರಿಗೆ ತಂದಿದೆ. ಈ ಯೋಜನೆಗೆ ಜಿಲ್ಲೆಯಲ್ಲಿ ಈವರೆಗೆ 23,556 ಮಹಿಳೆಯರು ನೋಂದಣಿ ಮಾಡಿಸಿಕೊಂಡಿದ್ದಾರೆ. ಈ ಪೈಕಿ 5075 ಫಲಾನುಭವಿಗಳಿಗೆ 6,57,42,000 ರೂ. ಬಾಕಿ ಉಳಿದಿದೆ. 2022ರಲ್ಲಿ ಯೋಜನೆಯಲ್ಲಿ ಪರಿಷ್ಕರಣೆ ಮಾಡಲಾಯಿತು. ಆಗ ಸಾಫ್ಟ್ ವೇರ್ ಅಪ್ಡೇಟ್ ಸಹ ಮಾಡಲಾಗಿದೆ. ಆಗಿನಿಂದ ನೇರವಾಗಿ ಖಾತೆಗೆ ಹಣ ಹಾಕುವಲ್ಲಿ ಸಮಸ್ಯೆಯಾಗಿದೆ. ಸಹಾಯಧನ ಬಾರದ ಕಾರಣ ವಿಶ್ರಾಂತಿ ಪಡೆಯಬೇಕಾದ ಗರ್ಭಿಣಿ ಹಾಗೂ ಬಾಣಂತಿಯರು ಕೂಲಿ, ಮನೆ ಕೆಲಸಕ್ಕೆ ತೆರಳುವ ಸ್ಥಿತಿ ಎದುರಾಗಿದೆ. ಇದರಿಂದ ಯೋಜನೆಯ ನೈಜ ಉದ್ದೇಶ ಈಡೇರದಂತಾಗಿದ್ದು, ಪ್ರತಿ ತಿಂಗಳು ಬ್ಯಾಂಕ್ ಖಾತೆ ಪರಿಶೀಲಿಸುವಂತಾಗಿದೆ. ಫಲಾನುಭವಿ ಮೊದಲ ಬಾರಿಗೆ ಗರ್ಭಿಣಿಯಾದಲ್ಲಿ 2 ಕಂತುಗಳಲ್ಲಿ ಅವರ ಖಾತೆಗೆ ಒಟ್ಟು 5000 ರೂ. ಪಾವತಿಸಲಾಗುತ್ತದೆ. ಎರಡನೇ ಪ್ರಸವದಲ್ಲಿ ಹೆಣ್ಣು ಮಗು ಜನಿಸಿದರೆ 3 ತಿಂಗಳ ಬಳಿಕ 6000 ರೂ.ಗಳನ್ನು ಡಿಬಿಟಿ ಮೂಲಕ ಪಾವತಿಸಲಾಗುತ್ತದೆ. ಆದರೆ ಸುಮಾರು ಒಂದು ವರ್ಷದಿಂದ ಸಹಾಯ ಧನ ಪಾವತಿಸಿಲ್ಲ. ಇದರ ನಡುವೆ ಹೊಸದಾಗಿ ಫಲಾನುಭವಿಗಳು ಅರ್ಜಿ ಸಲ್ಲಿಸುತ್ತಿರುವುದರಿಂದ ಬಾಕಿ ಮೊತ್ತ ಹೆಚ್ಚುತ್ತಲೇ ಇದೆ. ಗರ್ಭಿಣಿ ಎಂದು ತಿಳಿದ ಬಳಿಕ ಅಂಗನವಾಡಿ, ಆಶಾ ಕಾರ್ಯಕರ್ತರ ಬಳಿ ಅಥವಾ ವೆಬ್ಸೈಟ್ ಮೂಲಕ ಹೆಸರು ನೋಂದಾಯಿಸಬಹುದು. ನೋಂದಣಿಗೆ ರೇಷನ್ ಕಾರ್ಡ್, ಆದಾಯ ಪ್ರಮಾಣಪತ್ರ, ಎನ್ಪಿಸಿಐ ಮ್ಯಾಪಿಂಗ್ ಆಗಿರುವ ಖಾತೆಯ ಪಾಸ್ಬುಕ್ ಸೇರಿ ಇತರ ದಾಖಲಾತಿಗಳನ್ನು ನೀಡಬೇಕು. ಬಳಿಕ ಆರೋಗ್ಯ ತಪಾಸಣೆ ಸೇರಿ ಇತರ ಅಂಶಗಳನ್ನು ಪರಿಶೀಲಿಸಿ ಹೆಸರು ದಾಖಲಿಸಿಕೊಳ್ಳುತ್ತಾರೆ.
ಪ್ರತಿ ತಿಂಗಳು ಮಕ್ಕಳ, ಮಹಿಳಾ ಗ್ರಾಮ ಸಭೆಗಳಲ್ಲಿ ಯೋಜನೆ ಬಗ್ಗೆ ಮಾಹಿತಿ ನೀಡಲಾಗುತ್ತಿದೆ. ಹೀಗಾಗಿ ಜಿಲ್ಲೆಯಲ್ಲಿ ಹೆಚ್ಚಿನ ಜನರು ನೋಂದಾಯಿಸಿಕೊಂಡಿದ್ದಾರೆ. ನೋಂದಣಿಯಾದ ಫಲಾನುಭವಿಗೆ ಸಹಾಯ ಧನವನ್ನು ನೇರವಾಗಿ ಇಲಾಖೆ ಕೇಂದ್ರ ಕಚೇರಿಯಿಂದಲೇ ಪಾವತಿಸಲಾಗುತ್ತದೆ. ಬಾಕಿ ಉಳಿದ ಹಣ ಶೀಘ್ರ ಪಾವತಿಯಾಗಲಿದೆ. * ಡಾ. ಎಚ್.ಎಚ್. ಕುಕನೂರ, ಉಪನಿರ್ದೇಶಕಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ