

ವಿಜಯವಾಣಿ ಸುದ್ದಿಜಾಲ ದಾಬಸ್‌ಪೇಟೆ
ಯಾವುದೇ ಅಭಿವೃದ್ಧಿ ಕಾಮಗಾರಿ ಸಲಗೊಳ್ಳಲು ಗುಣಮಟ್ಟದ ಕಾಮಗಾರಿಗೆ ಆದ್ಯತೆ ನೀಡಬೇಕು ಎಂದು ಶಾಸಕ ಎಸ್.ಶ್ರೀನಿವಾಸ್ ತಿಳಿಸಿದರು.
ಸೋಂಪುರದ ಅಗಳಕುಪ್ಪೆ ರಸ್ತೆಯಲ್ಲಿ ಲೋಕೋಪಯೋಗಿ ಇಲಾಖೆಯಿಂದ 6.5ಕೋಟಿ ರೂ. ವೆಚ್ಚದ ರಸ್ತೆ ಕಾಮಗಾರಿ ಭೂಮಿ ನೆರವೇರಿಸಿ ಮಾತನಾಡಿದರು.
ಜನರ ಸೇವೆಗೆಂದೇ ಈ ಕ್ಷೇತ್ರ ಆಯ್ಕೆ ಮಾಡಿಕೊಂಡಿದ್ದು, ಕ್ಷೇತ್ರದ ಅಭಿವೃದ್ಧಿಗೆ ಬದ್ಧವಾಗಿದ್ದು, ಚಾಲನೆ ನೀಡುವ ಕಾಮಗಾರಿಯನ್ನು ವೈಜ್ಞಾನಿಕವಾಗಿ ಹಾಗೂ ಗುಣಮಟ್ಟದಿಂದ ನಡೆಸಲು ವೈಯಕ್ತಿಕವಾಗಿ ಮುತುವರ್ಜಿ ವಹಿಸಲಾಗುವುದು ಎಂದರು.
ಅವೈಜ್ಞಾನಿಕ ಕಾಮಗಾರಿಯಿಂದ ಈ ಭಾಗದಲ್ಲಿ ಮಳೆ ಬಂದರೆ ನೀರು ರಸ್ತೆಯಲ್ಲಿ ಸಂಗ್ರಹಗೊಂಡು ವಾಹನ ಸವಾರರು ಕಿರಿಕಿರಿ ಅನುಭವಿಸುವ ಜತೆಗೆ ಸ್ಥಳೀಯರು ಸಾಂಕ್ರಾಮಿಕ ಭೀತಿ ಎದುರಿಸುವಂತಾಗಿತ್ತು. ಹಲವರು ರಾಜಕಾಲುವೆ ಕಬಳಿಸಿ ಕಟ್ಟಡ ನಿರ್ಮಾಣ ಮಾಡಿಕೊಂಡಿರುವಿದರಿಂದ ಕೊಳಚೆ ಸರಾಗವಾಗಿ ಹರಿಯಲು ಸಮಸ್ಯೆಯಾಗಿ ಸಾರ್ವಜನಿಕರು ಸಂಕಷ್ಟ ಅನುಭವಿಸುವಂತಾಗಿತ್ತು. ಪ್ರಸ್ತುತ ಕಾಮಗಾರಿ ಮೂಲಕ ಎಲ್ಲ ಸಮಸ್ಯೆಗೂ ಪರಿಹಾರ ಕಲ್ಪಿಸಲಾಗಿದೆ ಎಂದರು.
ವಿಎಸ್ಸೆಸ್ಸೆನ್ ಮಾಜಿ ಅಧ್ಯಕ್ಷ ಲಕ್ಕೂರು ಸಿದ್ದರಾಜು, ಮುಖಂಡರಾದ ಕಮಾಲಪುರ ಹೊಸಳಯ್ಯ, ಸಿದ್ದರಾಮಯ್ಯ, ಬೆಂಕಿ ಮಹದೇವ, ಚಾಂದ್ ಪಾಷಾ, ಹೆಗ್ಗುಂದ ಲೋಕೇಶ್, ಹೆಗ್ಗುಂದ ನಾಗಭೂಷಣ್, ಪೆಮ್ಮನಹಳ್ಳಿ ದೇವರಾಜು ಇದ್ದರು.