6.48 ಲಕ್ಷ ಫಲಾನುಭವಿಗಳಿಗೆ ಅನ್ನಭಾಗ್ಯ ನಗದು

CM Annabhagya
Published on

ಮೈಸೂರು: ಸಿದ್ದರಾಮಯ್ಯ ನೇತೃತ್ವದ ಸರ್ಕಾರದ ಮಹತ್ವಾಕಾಂಕ್ಷೆಯ ಅನ್ನಭಾಗ್ಯ ಯೋಜನೆಯಡಿ ಮೈಸೂರು ಜಿಲ್ಲೆಯ 6.48 ಲಕ್ಷ ಕಾರ್ಡ್‌ದಾರರಿಗೆ 31 ಕೋಟಿ ರೂ.ನಗದನ್ನು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ವಿತರಣೆ ಮಾಡಿದೆ.

ಅನ್ಯಭಾಗ್ಯ ಯೋಜನೆಯ ಫಲಾನುಭವಿಗಳಿಗೆ ನಗದು ವರ್ಗಾವಣೆ ಕಾರ್ಯ ಜು.11ರಿಂದಲೇ ನಡೆದಿದೆ. ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆಯ ತಂತ್ರಾಂಶದಲ್ಲಿ ಲಭ್ಯವಿರುವ ದತ್ತಾಂಶ ಮಾಹಿತಿಯನ್ನು ಇದಕ್ಕಾಗಿ ಬಳಸಿಕೊಳ್ಳಲಾಗುತ್ತಿದೆ. ಜುಲೈನಿಂದ ಅಂತ್ಯೋದಯ ಅನ್ನಯೋಜನೆ (ಎಎವೈ) ಹಾಗೂ ಆದ್ಯತಾ ಪಡಿತರ ಚೀಟಿ (ಪಿಎಚ್‌ಎಚ್) ಹೊಂದಿರುವ ಕುಟುಂಬಗಳಿಗೆ ನಗದು ವರ್ಗಾವಣೆ ಮಾಡಲಾಗುತ್ತಿದೆ.

ಆದ್ಯತಾ ಮತ್ತು ಅಂತ್ಯೋದಯ ಪಡಿತರ ಚೀಟಿಯ ಪ್ರತಿ ಫಲಾನುಭವಿಗೆ 5 ಕೆಜಿ ಅಕ್ಕಿ ವಿತರಿಸಲಾಗಿದೆ. ಹೆಚ್ಚುವರಿ 5 ಕೆಜಿ ಬದಲಿಗೆ ಪಡಿತರ ಚೀಟಿಯಲ್ಲಿರುವಂತೆ ಕುಟುಂಬದ ಪ್ರತಿ ಫಲಾನುಭವಿಗೆ (ಪ್ರತಿ ಕೆ.ಜಿ.ಗೆ 34 ರೂ.್ಡ5 ಕೆ.ಜಿ) 170 ರೂ.ಗಳನ್ನು ಪಡಿತರ ಕುಟುಂಬದ ಮುಖ್ಯಸ್ಥರ ಖಾತೆಗೆ ನೇರ ನಗದು ವರ್ಗಾವಣೆ ವ್ಯವಸ್ಥೆ ಮೂಲಕ ಪಾವತಿ ಮಾಡಲಾಗುತ್ತಿದೆ.

ಜಿಲ್ಲೆಯಲ್ಲಿ 50,432 ಅಂತ್ಯೋದಯ ಕಾರ್ಡ್‌ಗಳಿಂದ 2,17,199 ಸದಸ್ಯರು, ಆದ್ಯತಾ ಪಡಿತರ ಕುಟುಂಬಗಳು (ಪಿಎಚ್‌ಎಚ್) 6,61,290 ಕಾರ್ಡ್‌ದಾರರಿಂದ 20,83,627 ಸದಸ್ಯರಿಗೆ ಹಣ ನೀಡಲಾಗಿದೆ. ತಾಂತ್ರಿಕ ಸಮಸ್ಯೆ ಸೇರಿದಂತೆ ವಿವಿಧ ಕಾರಣಗಳಿಂದ 2,17,199 ಫಲಾನುಭವಿಗಳಿಗೆ ವರ್ಗಾವಣೆ ಬಾಕಿ ಉಳಿಸಿಕೊಳ್ಳಲಾಗಿದೆ.

ಅಂತ್ಯೋದಯ ಕಾರ್ಡ್‌ನ 3 ಸದಸ್ಯರು ಅಥವಾ ಮೂರಕ್ಕಿಂತ ಕಡಿಮೆ ಇರುವ ಸದಸ್ಯರಿಗೆ 35 ಕೆಜಿ ಅಕ್ಕಿ, ಧಾನ್ಯ ವಿತರಿಸಲಾಗಿದೆ. ಅನ್ನಭಾಗ್ಯ ಯೋಜನೆಯಡಿ ಪ್ರತಿ ಸದಸ್ಯನಿಗೆ 10 ಕೆಜಿ ಅಕ್ಕಿ ನೀಡಲಾಗುತ್ತದೆ. ಆದರೆ, ಅಕ್ಕಿ ಅಭಾವದಿಂದ 5 ಕೆಜಿ ಅಕ್ಕಿ ನೀಡಿದ್ದು, ಉಳಿದ 5 ಕೆಜಿಗೆ ಪ್ರತಿಯಾಗಿ 170 ರೂ.ಗಳನ್ನು ಬ್ಯಾಂಕ್ ಖಾತೆಗೆ ವರ್ಗಾವಣೆ ಮಾಡಲಾಗಿದೆ. ಐದು ಜನರಿಗಿಂತ ಹೆಚ್ಚಿರುವ ಕುಟುಂಬಕ್ಕೆ 510 ರೂ. ನೀಡಲಾಗಿದೆ.

ಬಿಪಿಎಲ್ ಕಾರ್ಡ್‌ದಾರರಿಗೆ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯಡಿ 5 ಕೆಜಿ ಅಕ್ಕಿಯನ್ನು ವಿತರಿಸಲಾಗಿದೆ. ಹಾಗೆಯೆ, ರಾಜ್ಯ ಸರ್ಕಾರದಿಂದ ಪ್ರತಿ ಸದಸ್ಯರಿಗೆ 170 ರೂ.ಬ್ಯಾಂಕ್ ಖಾತೆಗೆ ಜಮೆ ಮಾಡಲಾಗಿದೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಉಪ ನಿರ್ದೇಶಕಿ ಕುಮುದಾ ಶರತ್ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net