

ಮೂಗೂರು: ಗ್ರಾಮದ ಶ್ರೀದೇಶೇಶ್ವರಸ್ವಾಮಿ ಹಾಗೂ ಶ್ರೀಪಾರ್ವತಿ ಅಮ್ಮನವರ ಗಿರಿಜಾ ಕಲ್ಯಾಣ ಮಹೋತ್ಸವ ಮೇ 5 ರಿಂದ 11ರವರೆಗೆ ನಡೆಯಲಿದ್ದು, ಮೇ 8ರಂದು ಶ್ರೀಪಾರ್ವತಿ ಅಮ್ಮನವರ ಸಮೇತ ಶ್ರೀದೇಶೇಶ್ವರ ಸ್ವಾಮಿ ರಥೋತ್ಸವ ಜರುಗಲಿದೆ.
ಗ್ರಾಮದ ಶ್ರೀದೇಶೇಶ್ವರಸ್ವಾಮಿ ಹಾಗೂ ಶ್ರೀಪಾರ್ವತಿ ಅಮ್ಮನವರ ಧಾರ್ಮಿಕ ಆಚರಣೆಗೆ ಸಕಲ ಸಿದ್ಧತೆ ನಡೆಯುತ್ತಿದ್ದು, ಪ್ರತಿವರ್ಷ ಜರುಗಲಿರುವ ರಥೋತ್ಸವಕ್ಕೆ ರಾಜ್ಯದ ವಿವಿಧ ಭಾಗಗಳಲ್ಲಿ ನೆಲೆಸಿರುವ (ದೇವರ ಒಕ್ಕಲಿನ ಮನೆತನದವರು) ಅಪಾರ ಸಂಖ್ಯೆಯಲ್ಲಿ ಆಗಮಿಸುವ ನಿರೀಕ್ಷೆಯಿದೆ.
ಪಂಚಲಿಂಗವನ್ನು ಒಳಗೊಂಡಿರುವ ಈ ದೇಗುಲದಲ್ಲಿ ಕತ್ತಲೆ ಮನೆ ಸಿದ್ದೇಶ್ವರ, ಚಂಡಿಕೇಶ್ವರ, ವೀರಾಂಜನೇಯ, ನಾಗರಕಟ್ಟೆ, ಶ್ರೀಶನೈಶ್ಚರ ಸ್ವಾಮಿಯ ದೇವಾಲಯವಿದ್ದು, ರಥೋತ್ಸವಕ್ಕೂ ಮೊದಲು ಈ ದೇಗುಲಗಳಲ್ಲಿ ವಿಶೇಷ ಪೂಜಾ ಕೈಂಕರ್ಯಗಳು ನಡೆಯಲಿವೆ. ಮೇ 5ರಂದು ಆಶ್ಲೇಷ ಅಂಕುರಾರ್ಪಣ, ಧ್ವಜಾರೋಹಣ 6 ರಂದು ವೃಷಭವಾಹನ ಉತ್ಸವ, 7ರಂದು ಗಿರಿಜಾ ಕಲ್ಯಾಣೋತ್ಸವ 8ರಂದು ಶ್ರೀಮದ್ದಿವ್ಯ ಬ್ರಹ್ಮ ರಥೋತ್ಸವ, 9ರಂದು ಶಯನೋತ್ಸವ, 10ರಂದು ಅವಭೃತ ತೀರ್ಥ ಸ್ನಾನ, 11ರಂದು ಮಹಾ ರುದ್ರಾಭಿಷೇಕ ಹಾಗೂ ಶ್ರೀದೇಶೇಶ್ವರ ಸ್ವಾಮಿ ಹಾಗೂ ಶ್ರೀಪಾರ್ವತಿ ಅಮ್ಮನವರ ಹೂವಿನ ಪಲ್ಲಕ್ಕಿ ಉತ್ಸವ, ರಾತ್ರಿ ದೇವಾಲಯದಲ್ಲಿ ಪೂರ್ಣಾಭಿಷೇಕ ಹಾಗೂ ವಿಶೇಷ ಪೂಜೆ ಮಹಾಮಂಗಳಾರತಿಯೊಂದಿಗೆ ಗಿರಿಜಾ ಕಲ್ಯಾಣ ಧಾರ್ಮಿಕ ಆಚರಣೆಯ ಮಹೋತ್ಸವಕ್ಕೆ ತೆರೆ ಬೀಳಲಿದೆ.