5ನೇ ರಾಜ್ಯ ಹಣಕಾಸು ಆಯೋಗ 8ಕ್ಕೆ ದುರ್ಗ ಭೇಟಿ

CTD MEETING- HANKASU AYUGA-----
Published on

ಚಿತ್ರದುರ್ಗ: ಐದನೇ ರಾಜ್ಯ ಹಣಕಾಸು ಆಯೋಗ ಶಿವಮೊಗ್ಗ ಹಾಗೂ ಚಿತ್ರದುರ್ಗ ಜಿಲ್ಲೆಗೆ ಭೇಟಿ ನೀಡಲಿದೆ. ಏ.7 ರಂದು ಶಿವಮೊಗ್ಗಕ್ಕೆ, 8 ರಂದು ಚಿತ್ರದುರ್ಗಕ್ಕೆ ಭೇಟಿ ನೀಡಿ, ಪಂಚಾಯತ್ ಹಾಗೂ ನಗರ ಸ್ಥಳೀಯ ಸಂಸ್ಥೆಗಳ ಕುರಿತು ಸಭೆ ನಡೆಸಲಿದೆ ಎಂದು ಡಿಸಿ ಟಿ.ವೆಂಕಟೇಶ್ ಹೇಳಿದರು.

ಆಯೋಗದ ಭೇಟಿ ಹಿನ್ನೆಲೆಯಲ್ಲಿ ಗುರುವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ಉತ್ತಮ ಪ್ರಾತ್ಯಕ್ಷಿಕೆಯೊಂದಿಗೆ ಆಯೋಗಕ್ಕೆ ನಿಖರ ಮಾಹಿತಿ, ಸಲಹೆಗಳನ್ನು ಕೊಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಜಿಪಂ,ತಾಪಂ,ಗ್ರಾಪಂ, ನಗರ ಸಭೆ, ಪುರಸಭೆ ಮತ್ತು ಪಪಂಗಳ ಆರ್ಥಿಕ ಸ್ಥಿತಿಗತಿಗಳನ್ನು ಪರಿಶೀಲಿಸಿ ವಿಮರ್ಶಿಸಲಿದೆ.

ಈ ಹಿನ್ನೆಲೆಯಲ್ಲಿ ಸ್ಥಳೀಯ ಸಂಸ್ಥೆಗಳ ಸಾಂಸ್ಥಿಕ ರಚನೆ, ಕಾರ‌್ಯಚಟುವಟಿಕೆ, ಆರ್ಥಿಕ ಸ್ಥಿತಿ, ಸಂಪನ್ಮೂಲಗಳ ಕ್ರೂಢೀಕರಣ, ಹಂಚಿಕೆ, ಮೂಲ ಸೌಕರ್ಯ ಹಾಗೂ ಸೇವೆಗಳು, ತಾಂತ್ರಿಕ ಕೌಶಲ ಹಾಗೂ ಸುಧಾರಣೆಗಳ ಕುರಿತು ವಿವರಗಳನ್ನು ಆಯೋಗಕ್ಕೆ ಸಲ್ಲಿಸಬೇಕು ಎಂದು ತಿಳಿಸಿದರು.

ಜಿಲ್ಲೆಯ ಜನಸಂಖ್ಯೆ ವಿವರ, ಸದ್ಯ ಮಂಜೂರಾದ ಹುದ್ದೆಗಳು, ಜನಸಂಖ್ಯೆಗೆ ಅನುಗುಣವಾಗಿ ನಗರಸಭೆ ಅಗತ್ಯ ಸಿಬ್ಬಂದಿ ಬೇಡಿಕೆಯನ್ನು ಆಯೋಗಕ್ಕೆ ಸಲ್ಲಿಸಬೇಕು. ಸದ್ಯ ಕೇಂದ್ರ ಹಾಗೂ ರಾಜ್ಯ ಹಣಕಾಸು ಆಯೋಗಗಳ, ನಗರೋತ್ಥಾನ, ಮನರೇಗಾ, ಸೇವಾ ಶುಲ್ಕ, ಕರ ಹಾಗೂ ಸುಂಕ, ಆಸ್ತಿಗಳಿಂದ ಲಭ್ಯವಾಗುತ್ತಿರುವ ಅನುದಾನ, ಬಾಡಿಗೆ ಇತ್ಯಾದಿ ಸಂಪನ್ಮೂಲ ಹಾಗೂ ಅದರ ಖರ್ಚು ವೆಚ್ಚಗಳ ವಿವರವನ್ನು ಸಲ್ಲಿಸಬೇಕು ಎಂದರು.

ಜಿಪಂ ಹಾಗೂ ಜಿಲ್ಲೆಯ ಎಲ್ಲ ನಗರಸಭೆ, ಪುರಸಭೆ ಹಾಗೂ ಪಪಂಗಳು ಪ್ರತ್ಯೇಕವಾಗಿ ಪ್ರಾತ್ಯಕ್ಷಿಕೆಗಳನ್ನು ಸಿದ್ಧಪಡಿಸಬೇಕು. ಅನುದಾನಗಳ ಬಳಕೆ ಹಾಗೂ ಆಡಳಿತ ಸುಧಾರಣೆ ಕುರಿತು ಸರ್ಕಾರದ ಮಟ್ಟದಲ್ಲಿ ತರಬೇಕಾದ ಧನಾತ್ಮಕ ಬದಲಾವಣೆಗಳ ಬಗ್ಗೆ ಸಲಹೆಗಳನ್ನು ಆಯೋಗಕ್ಕೆ ನೀಡುವಂತೆ ಡಿಸಿ ಹೇಳಿದರು.

8ರಂದು ಚಿತ್ರದುರ್ಗ ಜಿಲ್ಲೆಯ ನಗರಸಭೆಗಳಿಗೆ ಭೇಟಿ ನೀಡಿ ಚುನಾಯಿತ ಪ್ರತಿನಿಧಿಗಳು, ಅಧಿಕಾರಿಗಳೊಂದಿಗೆ ಆಯೋಗ ಸಭೆ ನಡೆಸಲಿದೆ ಎಂದು ತಿಳಿಸಿದರು.

ಜಿಪಂ ಸಿಇಒ ಎಸ್.ಜೆ. ಸೋಮಶೇಖರ್, ಮುಖ್ಯಯೋಜನಾಧಿಕಾರಿ ಗಾಯತ್ರಿ, ಎಡಿಸಿ ಬಿ.ಟಿ. ಕುಮಾರಸ್ವಾಮಿ, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಮಹೇಂದ್ರಕುಮಾರ್, ಪೌರಾಯುಕ್ತೆ ಎಂ. ರೇಣುಕಾ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net