ಸಿಹಿಯಾದ ಸಕ್ಕರೆ ನಮ್ಮ ಬದುಕಿನಲ್ಲಿ ಕಹಿಯಾಗುತ್ತಿದೆ

27 Dwd 2
Published on

ಧಾರವಾಡ: ಭಾರತದಲ್ಲಿ ಮಧುಮೇಹ ರೋಗದಿಂದ ಬಳಲುತ್ತಿರುವವರ ಸಂಖ್ಯೆ ಹೆಚ್ಚುತ್ತಿದೆ. ಸಿಹಿಯಾದ ಸಕ್ಕರೆ ನಮ್ಮ ಬದುಕಿನಲ್ಲಿ ಕಹಿಯಾಗುತ್ತಿದೆ. ಅತಿಯಾಗಿ ಕಬ್ಬನ್ನು ಬೆಳೆಯುತ್ತಿರುವುದರಿಂದ ಫಲವತ್ತಾದ ಭೂಮಿಯೂ ಬರಡಾಗುತ್ತಿದೆ ಎಂದು ಡಾ. ಸಂಜೀವ ಕುಲಕರ್ಣಿ ಹೇಳಿದರು.
ನಗರದ ಹಿರೇಮಲ್ಲೂರ ಈಶ್ವರನ್ ಪದವಿಪೂರ್ವ ಮಹಾವಿದ್ಯಾಲಯದಲ್ಲಿ ತೋಂಟದ ಸಿದ್ಧಲಿಂಗ ಸ್ವಾಮೀಜಿಗಳ 5ನೇ ಪುಣ್ಯಸರಣೆ ಅಂಗವಾಗಿ ಆಯೋಜಿಸಿದ್ದ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ `ಕಹಿ ಕಹಿ ಸಕ್ಕರೆ' ವಿಷಯ ಕುರಿತು ಅವರು ಉಪನ್ಯಾಸ ನೀಡಿದರು.
ಬೆಳಗಾವಿ ಹಾಗೂ ಮಂಡ್ಯ ಜಿಲ್ಲೆಗಳು ಸಕ್ಕರೆ ನಾಡು ಎಂದು ಖ್ಯಾತಿ ಗಳಿಸಿವೆ. ಕಬ್ಬು ಬೇಸಾಯ ಪಾರಂಪರಿಕ ಕೃಷಿಯನ್ನು ನಿರ್ಮೂಲನೆ ಮಾಡಿದೆ. ಪಾರಂಪರಿಕ ಕೃಷಿಯಲ್ಲಿ ಮಹಿಳೆಯರ ಪಾತ್ರವೂ ಮುಖ್ಯವಾಗಿತ್ತು. ಆದರೆ, ಕಬ್ಬು ಬೇಸಾಯದಲ್ಲಿ ಹೆಣ್ಣುಮಕ್ಕಳ ಅವಶ್ಯಕತೆಯಿಲ್ಲ. ಇದು ಮುಂದೆ ಸಾಮಾಜಿಕ ಸಮಸ್ಯೆಗಳಿಗೆ ಕಾರಣವಾಗಲಿದೆ ಎಂದರು.
ಹಿರಿಯ ಸಾಹಿತಿ ಡಾ. ಸಿದ್ಧಲಿಂಗ ಪಟ್ಟಣಶೆಟ್ಟಿ ಮಾತನಾಡಿ, ತೋಂಟದ ಶ್ರೀಗಳು ತಾಯಿಗುಣ ಹೊಂದಿದ್ದರು. ಜ್ಞಾನದ ಮೂಲಕ ಮಾತ್ರ ಸಮಾಜದಲ್ಲಿ ರೂಢಿಯಲ್ಲಿರುವ ಮೌಢ್ಯಗಳನ್ನು ಹೋಗಲಾಡಿಸಬಹುದೆಂದು ಬಲವಾಗಿ ನಂಬಿದ್ದರು ಎಂದರು.
ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಶಶಿಧರ ತೋಡಕರ ಅಧ್ಯಕ್ಷತೆ ವಹಿಸಿದ್ದರು. ದತ್ತಿದಾನಿಗಳಾದ ಡಾ. ಹೇಮಾ ಪಟ್ಟಣಶೆಟ್ಟಿ, ಉಪನ್ಯಾಸಕ, ಶಾಂತರಾಜ ವಿಭೂತಿ ವೇದಿಕೆಯಲ್ಲಿದ್ದರು.
ಚಂದ್ರಕಾ0ತ ಬೆಲ್ಲದ, ಜಿ.ಸಿ. ತಲ್ಲೂರ, ನಿಂಗಣ್ಣ ಕುಂಟಿ, ಬಸವಪ್ರಭು ಹೊಸಕೇರಿ, ಶಂಕರ ಹಲಗತ್ತಿ, ಮಲ್ಲಿಕಾರ್ಜುನ ಚಿಕ್ಕಮಠ, ಮಹಾವಿದ್ಯಾಲಯದ ಸಿಬ್ಬಂದಿ ಇದ್ದರು. ಗಾಯತ್ರಿ ಸರದೇಶಪಾಂಡೆ ಪ್ರಾರ್ಥಿಸಿದರು. ಭುವನೇಶ್ವರಿ ದಾನಪ್ಪಗೌಡರ ಪರಿಚಯಿಸಿದರು. ಡಾ. ಈರಣ್ಣ ಇಂಜಗನೇರಿ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net