

ರಾಯಚೂರು ನಮ್ಮ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯವು ವಿದ್ಯಾರ್ಥಿಗಳ ಸಂಶೋಧನೆಗೆ ಎಲ್ಲಾ ರೀತಿಯ ಸೌಲಭ್ಯಗಳನ್ನು ಒದಗಿಸುತ್ತಿದ್ದು, ಸೌಲಭ್ಯಗಳನ್ನು ಸದುಪಯೋಗ ಪಡೆದುಕೊಂಡು ಕೃಷಿ ವಲಯದ ಅಭಿವೃದ್ಧಿಗೆ ಮತ್ತು ಎದುರಾಗುವ ಸವಾಲುಗಳಿಗೆ ಪರಿಹಾರ ನೀಡಲು ಹೊಸ ಹೊಸ ಸಂಶೋಧನೆ ಮಾಡಲು ವಿದ್ಯಾರ್ಥಿಗಳು ಮುಂದಾಗಬೇಕು ಎಂದು ವಿವಿಯ ಕುಲಪತಿ ಡಾ.ಎಂ. ಹನುಮಂತಪ್ಪ ಹೇಳಿದರು.
ನಗರದ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಪ್ರೇಕ್ಷಾಗೃಹದಲ್ಲಿ ಮಂಗಳವಾರ ರಾಯಚೂರು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ, ಸ್ನಾತಕೋತ್ತರ ಅಧ್ಯಯನ ನಿರ್ದೇಶನಾಲಯದಿಂದ ಡಾ.ಎಸ್.ಎ.ಪಾಟೀಲರ ಸ್ಮರಣಾರ್ಥ ಸ್ನಾತಕೋತ್ತರ ಮತ್ತು ಡಾಕ್ಟರೇಟ್ ಪದವಿ ಪಡೆಯುವ ಅಂತಿಮ ಘಟ್ಟದಲ್ಲಿರುವ ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಳ್ಳಲಾದ 5ನೇ ರಾಷ್ಟ್ರೀಯ ಸ್ನಾತಕೋತ್ತರ ಸಂಶೋಧನಾ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿ, ಸ್ನಾತಕೋತ್ತರ ವಿದ್ಯಾರ್ಥಿಗಳು ಶಿಸ್ತು ಬದ್ಧತೆಯಿಂದ ಮತ್ತು ಪರಿಶ್ರಮದಿಂದ ಗುಣಮಟ್ಟದ ಸಂಶೋಧನೆಗಳನ್ನು ಕೈಗೊಳ್ಳುವ ಮೂಲಕ ರೈತರ ಮತ್ತು ಸಮಾಜದ ಅಭಿವೃದ್ಧಿಗೆ ಕೊಡುಗೆಯಾಗಿ ನೀಡಬೇಕು. ಸ್ನಾತಕೋತ್ತರ ಮತ್ತು ಡಾಕ್ಟರೇಟ್ ಪದವಿ ಪಡೆಯುತ್ತಿರುವ ವಿದ್ಯಾರ್ಥಿಗಳು ಕೃಷಿ ರಂಗದ ಬೇಡಿಕೆಗಳನ್ನು ಗ್ರಹಿಸಿಕೊಂಡು, ಆ ದಿಸೆಯಲ್ಲಿ ಚಿಂತಿಸಿ, ಕೊರತೆಗಳ ಬಗ್ಗೆ ವಿಶ್ಲೇಷಿಸಿ ಅರ್ಥಪೂರ್ಣವಾದ ಸಂಶೋಧನಾತ್ಮಕ ಸಮಸ್ಯೆಗಳನ್ನು ಕೈಗೆತ್ತಿಕೊಳ್ಳಬೇಕು ಎಂದರು.
ವಿವಿಧೆಡೆಯಿಂದ ಆಗಮಿಸಿದ ತಜ್ಞರಿಂದ ಸಲಹೆಗಳನ್ನು ಪಡೆದುಕೊಳ್ಳಬೇಕು. ವಿದ್ಯಾರ್ಥಿಗಳು ತಮ್ಮ ಸಂಶೋಧನೆಗಳನ್ನು ತಜ್ಞರ ಮುಂದಿಟ್ಟು ಅದರಲ್ಲಿ ಆಗಬೇಕಾದ ಬದಲಾವಣೆಗಳು ಹಾಗೂ ಇತರೆ ವಿಷಯಗಳ ಕುರಿತು ಮಾಹಿತಿ ಪಡೆದುಕೊಳ್ಳಬೇಕು ಎಂದು ತಿಳಿಸಿದರು.
ಕೃಷಿ ವಿವಿಯ ನಿವೃತ್ತ ಶಿಕ್ಷಣ ನಿರ್ದೇಶಕ ಡಾ.ಎಂ.ಜಿ. ಪಾಟೀಲ್ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ರೈತರು ಎದುರಿಸುತ್ತಿರುವ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಕೃಷಿ ವಿಶ್ವವಿದ್ಯಾಲಯಗಳ ವಿಜ್ಞಾನಿಗಳು ಅದರಲ್ಲೂ ಯುವ ಸಂಶೋಧನಾ ವಿದ್ಯಾರ್ಥಿಗಳು ರೈತ ಸಮುದಾಯ ಎದುರಿಸುತ್ತಿರುವ ಸಮಸ್ಯೆಗಳನ್ನು ಅರಿತುಕೊಂಡು ಅವುಗಳ ನಿರ್ವಹಣೆಗೆ ಸ್ಪಂದನೆಯಾಗುವ ಸಂಶೋಧನೆಗಳನ್ನು ಕೈಗೊಂಡು ರೈತಬಾಂಧವರಿಗೆ ಸದಾ ಆಸರೆಯಾಗಬೇಕು ಎಂದರು.
ಈ ಸಂದರ್ಭದಲ್ಲಿ ವ್ಯವಸ್ಥಾಪನಾ ಮಂಡಳಿ ಸದಸ್ಯರಾದ ಮಲ್ಲಿಕಾರ್ಜುನ ಡಿ., ಮಲ್ಲೇಶ ಕೊಲಿಮಿ, ಡಾ.ನಾರಾಯಣರಾವ್, ವಿಶ್ವವಿದ್ಯಾಲಯದ ಸ್ನಾತಕೊತ್ತರ ವಿಭಾಗದ ಡೀನ್ ಡಾ. ಗುರುರಾಜ ಸುಂಕದ, ಅಯ್ಯನಗೌಡ, ಆಡಳಿತ ಅಧಿಕಾರಿ ಜಾಗೃತಿ ದೇಶಮಾನೆ ಅನೇಕರು ಇದ್ದರು.