

ಗುಳೇದಗುಡ್ಡ: ತಾಲೂಕು ಐದನೇ ಸಾಹಿತ್ಯ ಸಮ್ಮೇಳನವನ್ನು ಪಟ್ಟಣದ ಹೊಸ ಅಂಬಾಭವಾನಿ ದೇವಸ್ಥಾನದಲ್ಲಿ ಏ.26 ರಂದು ಹಮ್ಮಿಕೊಳ್ಳಲಾಗಿದೆ ಎಂದು ಕಸಾಪ ತಾಲೂಕಾಧ್ಯಕ್ಷ ಡಾ. ಎಚ್.ಎಸ್. ಘಂಟಿ ಹೇಳಿದರು.
ಅಂದು ಬೆಳಗ್ಗೆ ಗುರುಸಿದ್ಧೇಶ್ವರ ಬ್ರಹನ್ಮಠದಿಂದ ಹೊಸ ಅಂಬಾಭವಾನಿ ದೇವಸ್ಥಾನದವರೆಗೆ ಕುಂಭ ಹಾಗೂ ಕಳಸದಾರತಿಯೊಂದಿಗೆ ವಿವಿಧ ಕಲಾಮೇಳಗಳೊಂದಿಗೆ ಸರ್ವಾಧ್ಯಕ್ಷರ ಮೆರವಣಿಗೆ 8 ಗಂಟೆಗೆ ಪ್ರಾರಂಭವಾಗಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಲಿದೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ನಂತರ ಬೆಳಗ್ಗೆ 11 ಗಂಟೆಗೆ ನಡೆಯವ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ಶಾಸಕ ಭೀಮಸೇನ ಚಿಮ್ಮನಕಟ್ಟಿ ವಹಿಸಲಿದ್ದು, ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಟಿ.ಎಂ. ಭಾಸ್ಕರ್ ಉದ್ಘಾಟಿಸುವರು. ಮಧ್ಯಾಹ್ನ 12:30ಕ್ಕೆ ಮೊದಲ ಗೋಷ್ಠಿ ತಾಲೂಕು ದರ್ಶನ, 1:30ಕ್ಕೆ ತಾಲೂಕಿನ ನೇಕಾರಿಗೆ ಸ್ಥಿತಿಗತಿಗಳ ಕುರಿತು ಪ್ರಬಂಧ ಮಂಡನೆ, 2:30ಕ್ಕೆ ಕವಿಗೋಷ್ಠಿ, 3:30ಕ್ಕೆ ಸರ್ವಾಧ್ಯಕ್ಷರ ಬದುಕು ಬರಹ ಗೋಷ್ಠಿ, ಸರ್ವಾಧ್ಯಕ್ಷರ ಜತೆ ಸಂವಾದ, 4:30ಕ್ಕೆ ಬಹಿರಂಗ ಅಧಿವೇಶನ ಜರುಗುವುದು ಎಂದು ವಿವರಿಸಿದರು.
ಸಮಿತಿ ಸದಸ್ಯರು ಪಾಲ್ಗೊಳ್ಳಲಿದ್ದಾರೆ ನಂತರ ತಾಲೂಕಿನಲ್ಲಿರುವ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಸಾಧಕರನ್ನು ಗುರುತಿಸಿ ತಾಲೂಕು ಕನ್ನಡಸಿರಿ ಪ್ರಶಸ್ತಿ ನೀಡಿ ಗೌರವಿಸಲಾಗುವುದು. ಸಂಜೆ 6ಕ್ಕೆ ಸಮ್ಮೇಳನದ ಸಮಾರೋಪ ಸಮಾರಂಭದ ಬಳಿಕ ಸಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ ಎಂದರು.
ಕಸಾಪ ಜಿಲ್ಲಾ ಕೋಶಾಧ್ಯಕ್ಷ ಸಿ.ಎಂ. ಜೋಶಿ, ಸಂಗಮೇಶ ಚಿಕ್ಕಾಡಿ, ಡಾ. ಚಂದ್ರಶೇಖರ ಕಾಳನ್ನವರ, ಯಲ್ಲಪ್ಪ ಮನ್ನಿಕಟ್ಟಿ, ಗುಂಡಪ್ಪ ಕೋಟಿ, ವಿಠ್ಠಲ ಬದಿ, ಈರಣ್ಣ ಅಲದಿ, ಅಕ್ತರಹುಸೇನ ಅಘಾನ, ಪರಶುರಾಮ ಮಾದರ ಇದ್ದರು.