

ಗದಗ: 5 ನೇ ಹಣಕಾಸು ಆಯೋಗಕ್ಕೆ ಮುಕ್ತವಾಗಿ ಸಲಹೆ ಸೂಚನೆಗಳನ್ನು ಸ್ಥಳಿಯ ಸಂಸ್ಥೆಗಳು ನೀಡಬೇಕೆಂದು 5 ನೇ ಹಣಕಾಸು ಅಯೋಗದ ಅಧ್ಯಕ್ಷರಾದ ಡಾ. ಸಿ ನಾರಾಯಣಸ್ವಾಮಿ ಹೇಳಿದರು.
ನಗರದ ಜಿಲ್ಲಾ ಪಂಚಾಯತ ಸಭಾಭವನದಲ್ಲಿ ಬುಧವಾರ ಜರುಗಿದ ಸಭೆಯಲ್ಲಿ ಮಾತನಾಡಿದ ಅವರು ದೇಶದ ಸರ್ವತೋಮುಖ ಅಭಿವೃದ್ಧಿಗೆ ಸ್ಥಳೀಯ ಸಂಸ್ಥೆಗಳ ಪಾತ್ರ ಪ್ರಧಾನವಾಗಿದ್ದು ಲಭ್ಯವಿರುವ ಅನುದಾನವನ್ನು ಸರಿಯಾಗಿ ಅಭಿವೃದ್ಧಿ ಕೆಲಸಗಳಿಗೆ ಉಪಯೋಗಿಸಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು.
ಸರ್ಕಾರ ನೀಡಿದ ಅನುದಾನವನ್ನು ಅಧಿಕಾರಿಗಳು ನಿಗದಿತ ಸಮಯದಲ್ಲಿ ಸದುಪಯೋಗ ಮಾಡಿಕೊಳ್ಳದಿದ್ದರೆ ಅನುದಾನ ಹಿಂದಿರುಗಿ ಹೊಗುತ್ತದೆ. ಸ್ಥಳಿಯ ಸಂಸ್ಥೆಗಳು ಅನುದಾನಕ್ಕಾಗಿ ರಾಜ್ಯ ಮತ್ತು ಕೇಂದ್ರ ಸರ್ಕಾರದ ಮೇಲೆ ಅವಲಂಬಿತರಾಗದೆ, ಬುದ್ಧಿವಂತಿಕೆಯಿಂದ ಸ್ಥಳೀಯ ಮಟ್ಟದಲ್ಲಿ ಆದಾಯ ಮೂಲಗಳನ್ನು ಸೃಷ್ಟಿಸಿಕೊಳ್ಳಬೇಕೆಂದು ಸೂಚಿಸಿದರು.
ಸಭೆಯಲ್ಲಿ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ನೀಡಿದ ಅಗತ್ಯ ಸಲಹೆ ಸೂಚನೆಗಳನ್ನು ಪರಿಗಣಿಸಲಾಗುವುದು ಎಂದು ಹೇಳಿದರು.
5ನೇ ಹಣಕಾಸು ಅಯೋಗದ ಸದಸ್ಯ ವೊಹಮ್ಮದ ಸನಾವುಲ್ಲಾ ಮಾತನಾಡಿ ಮೂಲಭೂತ ಸೌಕರ್ಯವಾದ ಕುಡಿಯುವ ನೀರಗೆ ಹೆಚ್ಚು ಒತ್ತು ನೀಡಿ ಸರಿಯಾಗಿ ಜನರಿಗೆ ತಲುಪಿಸಬೇಕು ಅಗತ್ಯವಿದ್ದಲ್ಲಿ ಟ್ಯಾಂಕರ್ ಗಳ ಮೂಲಕ ನೀರನ್ನು ಸರಬರಾಜು ಮಾಡಬೇಕು,ಸ್ಥಳೀಯ ಸಂಸ್ಥೆಗಳ ಆದಾಯ ಮೂಲಗಳಾದ ವಾಣಿಜ್ಯ ತೆರಿಗೆಗಳನ್ನು ತ್ವರಿತವಾಗಿ ವಸುಲಾತಿ ಮಾಡಿ ಅಭಿವೃದ್ಧಿ ಕಾಮಗಾರಿಗಳಾದ ರಸ್ತೆ,ತ್ಯಾಜ ವಿಲೇವಾರಿ, ಶೌಚಾಲಯ ಸೇರಿದಂತೆ ವಿವಿಧ ಕೆಲಸಗಳಿಗೆ ಬಳಸಿಕೊಳ್ಳಲು ಅಧಿಕಾರಿಗಳಿಗೆ ಸೂಚಿಸಿದರು.
ಕಾರ್ಯಕ್ರಮ ದಲ್ಲಿ ಅಯೋಗದ ಸದಸ್ಯರಾದ ಆರ್.ಎಸ್.ಪೋಂಡೆ, ಸಮಾಲೋಚಕರಾದ ಎಂ.ಕೆ ಕೆಂಪೇಗೌಡ, ಜಿಲ್ಲಾಧಿಕಾರಿ ವೈಶಾಲಿ. ಎಂ.ಎಲ್. ನಗರಾಅಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಮಾರುತಿ ಬ್ಯಾಕೋಡ್, ನಗರ ಸಭೆ ಅಧ್ಯಕ್ಷೆ ಉಷಾ ದಾಸರ ಸೇರಿದಂತೆ ಜನಪ್ರತಿ ನಿಧಿಗಳು ಅಧಿಕಾರಿಗಳು ಹಾಜರಿದ್ದರು.