

ಬೆಳ್ತಂಗಡಿ: ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ನಡೆಯುತ್ತಿರುವ 26ನೇ ವರ್ಷದ ಭಜನಾ ಕಮ್ಮಟದ 5ನೇ ದಿನದ ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ವಿದುಷಿ ಅನುಸೂಯ ಪಾಠಕ್ ಉಜಿರೆ ಹಾಗೂ ಉಪ್ಪುಂದ ರಾಜೇಶ್ ಪಡಿಯಾರ್ ಮೈಸೂರು ಹಾಡುಗಳನ್ನು ಕಲಿಸಿಕೊಟ್ಟರು. ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ, ಹೇಮಾವತಿ ವೀ.ಹೆಗ್ಗಡೆ, ಮಾಣಿಲ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಶಿಬಿರಾರ್ಥಿಗಳನ್ನು ಪ್ರೇರೇಪಿಸಿದರು.
ಅಸೆಮ್ಸ್ ಶಿಕ್ಷಣ ಸಂಸ್ಥೆಯ ಉಪನ್ಯಾಸಕ ಪವನ್ ಕಿರಣ್‌ಕೆರೆ ‘ಭಜನೆ ಮತ್ತು ಬದುಕು’ ಕುರಿತು ಉಪನ್ಯಾಸ ನೀಡಿ, ಭಜನೆ ಭಕ್ತಿ ಉದ್ದೀಪನಗೊಳಿಸಿ ಬದುಕು ಕಟ್ಟಿಕೊಡುತ್ತದೆ. ಬದುಕಿಗಿಂತ ಭಜನೆ ದೊಡ್ಡದಾಗಿದ್ದು, ಮಾಡುವ ಕೆಲಸವೇ ಭಜನೆಯಾಗಬೇಕು. ಭಜನೆಯಿಂದ ಮನಸ್ಸು ಶುದ್ಧವಾಗುತ್ತದೆ. ಭಜನೆ ಮಾಡುವಾಗ ದೇವರ ಮೇಲೆ ನಂಬಿಕೆಯಿರಬೇಕು. ಸಾಮಾನ್ಯನನ್ನು ಅಸಾಮಾನ್ಯನನ್ನಾಗಿ ಮಾಡುವ ಶಕ್ತಿ ಭಜನೆಗಿದ್ದು. ಅದು ಪಾಪವನ್ನು ತೊಳೆಯುವ ಕೆಲಸ ಮಾಡುತ್ತದೆ. ಮನುಷ್ಯನು ತನ್ನ ವಿವೇಕ ಹಾಗೂ ಚಿಂತನೆಯಿಂದ ಬೇರೆ ಪ್ರಾಣಿಗಳಿಗಿಂತ ಬೇರೆಯಾಗಿದ್ದಾನೆ. ಆದರೆ, ನಾನು ಎಂಬ ಅರಿವಿಲ್ಲದಿರುವುದು ಇಂದು ಮನುಷ್ಯನ ಬಹುದೊಡ್ಡ ಸಮಸ್ಯೆಯಾಗಿದೆ. ಭಜನೆ ಅರಿವನ್ನು ಮೂಡಿಸುವ ಕೆಲಸ ಮಾಡುತ್ತದೆ ಎಂದರು.
ಭಜನಾ ಕಮ್ಮಟದ ರಾಜ್ಯ ಸಂಚಾಲಕ ಸುಬ್ರಹ್ಮಣ್ಯ ಪ್ರಸಾದ್, ಕಾರ್ಯದರ್ಶಿ ವೀರು ಶೆಟ್ಟಿ, ಕೋಶಾಧಿಕಾರಿ ಧನ್ಯಕುಮಾರ್, ಸದಸ್ಯರಾದ ಶ್ರೀನಿವಾಸರಾವ್, ರತ್ನವರ್ಮ ಜೈನ್ ದಿನದ ಕಾರ್ಯಕ್ರಮ ಸಂಘಟಿಸಿದರು. ರಾಘವೇಂದ್ರ ಕಾರ್ಯಕ್ರಮ ನಿರೂಪಿಸಿದರು.
ಭಜನಾ ಪರಿಷತ್ ಅಧ್ಯಕ್ಷ ಚಂದ್ರಶೇಖರ ಸಾಲ್ಯಾನ್, ಉಪಾಧ್ಯಕ್ಷ ರಾಜೇಂದ್ರ ಕುಮಾರ್, ಸದಸ್ಯರಾದ ಪದ್ಮರಾಜ್ ಜೈನ್, ಮಹಾವೀರ ಅಜ್ರಿ ಸಹಕರಿಸಿದರು. ಕುಣಿತ ಭಜನೆ ತರಬೇತಿಯನ್ನು ಸಂದೇಶ, ವಿನ್ಯಾಸ್, ನಾಗೇಶ್ ಹಾಗೂ ಚೈತ್ರಾ ನಡೆಸಿಕೊಟ್ಟರು. ಸಮನ್ವಯ ಅಧಿಕಾರಿಗಳಾದ ರಾಘವೇಂದ್ರ ಮತ್ತು ಸಂತೋಷ್ ಪಿ. ಕರ್ತವ್ಯ ನಿರ್ವಹಿಸಿದರು. ಪದ್ಮರಾಜ್ ಜೈನ್ ಕಾರ್ಯಕ್ರಮ ನಿರೂಪಿಸಿದರು.
ಉಜಿರೆ ಎಸ್.ಡಿ.ಯಂ ಕಲಾಕೇಂದ್ರದಿಂದ ಸುಧನ್ವ ಮೋಕ್ಷ ಯಕ್ಷಗಾನ ಪ್ರದರ್ಶನ ನಡೆಯಿತು. ಡಾ.ಐ.ಶಶಿಕಾಂತ್ ಜೈನ್ ಯೋಗ ತರಬೇತಿ ನಡೆಸಿಕೊಟ್ಟರು. ಸೌಮ್ಯ ಸಾಂಪ್ರದಾಯಿಕ ಹಾಡುಗಳನ್ನು ಕಲಿಸಿಕೊಟ್ಟರು. ಭಜನಾ ತರಬೇತಿ ಕಮ್ಮಟದ ಶಿಬಿರಾರ್ಥಿಗಳಿಂದ 2ನೇ ದಿನದ ನಗರ ಸಂಕೀರ್ತನೆ ಕಾರ್ಯಕ್ರಮ ನಡೆಯಿತು.