

ಮೈಸೂರು: ತ್ರಿವಿಧ ದಾಸೋಹಿ, ನಡೆದಾಡುವ ದೇವರು ಎನಿಸಿಕೊಂಡಿದ್ದ ತುಮಕೂರಿನ ಸಿದ್ಧಗಂಗಾ ಮಠದ ಡಾ. ಶ್ರೀ ಶಿವಕುಮಾರ ಸ್ವಾಮೀಜಿ ಅವರ 5ನೇ ವರ್ಷದ ಪುಣ್ಯಸ್ಮರಣೆ ಅಂಗವಾಗಿ ಶ್ರೀ ಡಾ.ಶಿವಕುಮಾರ ಸ್ವಾಮೀಜಿ ಭಕ್ತ ಮಂಡಳಿ ವತಿಯಿಂದ ಭಾನುವಾರ ‘ಪುಣ್ಯಸ್ಮರಣೆ ದಾಸೋಹ ದಿವಸ’ ನಡೆಯಿತು.
ವಿಶೇಷವಾಗಿ ಶ್ರೀ ಶಿವಕುಮಾರ ಸ್ವಾಮೀಜಿ, ಶ್ರೀ ಗುರುಮಲ್ಲೇಶ್ವರ ಸ್ವಾಮೀಜಿ, ಶ್ರೀ ಶಿವರಾತ್ರಿ ರಾಜೇಂದ್ರ ಸ್ವಾಮೀಜಿ ಹಾಗೂ ಶ್ರೀ ಸಿದ್ದೇಶ್ವರ ಸ್ವಾಮೀಜಿಗಳ ಭಾವಚಿತ್ರ ಮೆರವಣಿಗೆ ಮಾಡಲಾಯಿತು.
ನಗರದ ಕೆ.ಆರ್.ಮೊಹಲ್ಲಾದಲ್ಲಿರುವ 101 ಗಣಪತಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ಬಳಿಕ ಮೆರವಣಿಗೆಗೆ ಚಾಲನೆ ನೀಡಲಾಯಿತು. ಮೆರವಣಿಗೆಗೆ ದೇವಲಾಪುರ ಮಠದ ಶ್ರೀ ಜಡೆ ಸ್ವಾಮೀಜಿ, ಹುಲ್ಲಿನ ಬೀದಿ ಮಠದ ಶ್ರೀ ಚಂದ್ರಶೇಖರ ಸ್ವಾಮೀಜಿ ಚಾಲನೆ ನೀಡಿದರು. ಬಸವ ಬಳಗದ ಅಧ್ಯಕ್ಷ ಪ್ರದೀಪ್‌ಕುಮಾರ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು. ಗಣಪತಿ ದೇವಸ್ಥಾನದ ಮುಂಭಾಗದಿಂದ ಆರಂಭಗೊಂಡ ಮೆರವಣಿಗೆ ಅಗ್ರಹಾರ ವೃತ್ತ, ಚಾಮರಾಜ ಜೋಡಿ ರಸ್ತೆ, ಜೆಎಸ್‌ಎಸ್ ವಿದ್ಯಾಪೀಠ ಬಸವ ಪುತ್ಥಳಿಯ ಬಲಗಡೆ ಸಾಗಿ, ರಾಮಾನುಜ ರಸ್ತೆಯ ಮುಖಾಂತರ ಕುದೇರು ಮಠ, ಬಸವೇಶ್ವರ ರಸ್ತೆ ಮುಖಾಂತರ 101 ಗಣಪತಿ ದೇವಸ್ಥಾನದ ಮುಂಭಾಗ ಅಂತ್ಯಗೊಂಡಿತು.