

ಕಳಸ: ಧರ್ಮಸ್ಥಳ ಶೌರ್ಯ ವಿಪತ್ತು ತಂಡ ಜೂ.21ರಂದು ಐದನೇ ವಾರ್ಷಿಕೋತ್ಸವ ಆಚರಿಸಿಕೊಂಡಿತು. ಕಳಸ ಸೇರಿದಂತೆ ರಾಜ್ಯದ 91 ತಾಲೂಕುಗಳಲ್ಲಿ 10,500ಕ್ಕೂ ಹೆಚ್ಚು ಸ್ವಯಂಸೇವಕರು ಕಾರ್ಯನಿರ್ವಹಿಸುತ್ತಿದ್ದಾರೆ. ನಾಲ್ಕು ವರ್ಷಗಳಿಂದ ಕಳಸ ತಾಲೂಕಿನಾದ್ಯಂತ ಪ್ರವಾಹ ಪೀಡಿತರ ನೆರವಿಗೆ ಧಾವಿಸಿರುವುದು, ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸುವುದು, ನೀರು ತುಂಬಿದ ಮನೆಗಳಲ್ಲಿ ಸ್ವಚ್ಛತೆ, ಮನೆ ಮೇಲೆ ಬಿದ್ದ ಮರಗಳನ್ನು ತೆರವು ಹೀಗೆ ಹಲವಾರು ರೀತಿಯಲ್ಲಿ ಜನರ ಕಷ್ಟಗಳಿಗೆ ಸ್ಪಂದಿಸುತ್ತಿದ್ದಾರೆ.
ತಾಲೂಕಿನಲ್ಲಿ ಒಟ್ಟು 110 ಸ್ವಯಂಸೇವಕರು ಸೇವಾ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಕಳಸ ತಾಲೂಕಿನ ಮಾಸ್ಟರ್ ಬಿ.ಕೆ. ಮಹೇಶ್, ಕ್ಯಾಪ್ಟನ್ ಅಜಿತ್ ಕುಲಾಲ್, ಖಾಂಡ್ಯ ಭಾಗದಲ್ಲಿ ಕ್ಯಾಪ್ಟನ್ ಚಂದ್ರಶೇಖರ್ ರೈ ಕಾರ್ಯನಿರ್ವಹಿಸುತ್ತಿದ್ದಾರೆ.
ಐದನೇ ವರ್ಷದ ಸಂಭ್ರಮವನ್ನು ಗಿಡಗಳನ್ನು ನೆಟ್ಟು, ಕೇಕ್ ಕತ್ತರಿಸಿ ಸಂಭ್ರಮಾಚರಿಸಿಕೊಂಡರು. ಶೌರ್ಯ ತಂಡದ ಕ್ಯಾಪ್ಟನ್ ಅಜಿತ್ ಕುಲಾಲ್ ಮಾತನಾಡಿ, ಕಳಸ ತಾಲೂಕು ವ್ಯಾಪ್ತಿಯಲ್ಲಿ ಶೌರ್ಯ ಘಟಕದಿಂದ ಅನೇಕ ಸೇವಾಕಾರ್ಯಗಳನ್ನು ಮಾಡಲಾಗುತ್ತಿದೆ. ಪ್ರಕೃತಿ ವಿಕೋಪಗಳು ಸಂಭವಿಸಿದಾಗ ಘಟಕದ ಸ್ವಯಂಸೇವಕರೆಲ್ಲ ಸೇರಿ ಆಪತ್ತಿನಲ್ಲಿರುವವರಿಗೆ ರಕ್ಷಣೆ ನೀಡಿದ್ದೇವೆ. ಕರೊನಾ ಸಂದರ್ಭದಲ್ಲಿ ಸೇವೆ ಸಲ್ಲಿಸಿದ್ದೇವೆ. ಕಳಸ ತಾಲೂಕಿನಲ್ಲಿ 110 ಸ್ವಯಂಸೇವಕರು ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದ್ದೇವೆ ಎಂದು ಸಂತಸ ವ್ಯಕ್ತಪಡಿಸಿದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ಜಿಲ್ಲಾ ನಿರ್ದೇಶಕ ಸದಾನಂದ ಬಂಗೇರ, ಜನಜಾಗೃತಿ ವೇದಿಕೆ ಪ್ರಾದೇಶಿಕ ಯೋಜನಾಧಿಕಾರಿ ನಾಗರಾಜ್ ಕುಲಾಲ್, ತಾಲೂಕು ಯೋಜನಾಧಿಕಾರಿ ಸುರೇಶ್, ಕಾಫಿ ಬೆಳೆಗಾರರಾದ ಕೆ.ಸಿ.ಧರಣೇಂದ್ರ, ಶೌರ್ಯ ತಂಡದ ಸ್ವಯಂಸೇವಕರು, ಸೇವಾಪ್ರತಿನಿಧಿಗಳು ಇದ್ದರು.