

ಬೆಂಗಳೂರು: ಸ್ನೇಹಿತೆ ಪವಿತ್ರಾ ಗೌಡ ಅವರಿಗೆ ರೇಣುಕಸ್ವಾಮಿ ಎನ್ನುವ ವ್ಯಕ್ತಿಯೊರ್ವ ಅಶ್ಲೀಲ ಸಂದೇಶ ಕಳಿಸಿದ್ದಾನೆ ಎಂದು ಹತ್ಯೆ ಮಾಡಿದ ಆರೋಪ ನಟ ದರ್ಶನ್ ಮತ್ತು ಅವರ ಗ್ಯಾಂಗ್ ಮೇಲಿದೆ. ಸದ್ಯ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದೆ. ಈ ಕುರಿತಾಗಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ದರ್ಶನ್ ಅವರ ವಿರುದ್ಧವಾಗಿ ಒಂದೊಂದೆ ಪ್ರಕರಣಗಳು ಹೊರಗೆ ಬರುತ್ತಿವೆ. ಈ ಪ್ರಕರಣದಲ್ಲಿ ಭಾಗಿಯಾಗಿರುವ 17 ಆರೋಪಿಗಳ ಪೈಕಿ 15ನೇ ಆರೋಪಿಯಾಗಿರುವ ಕಾರ್ತಿಕ್ ಅಲಿಯಾಸ್ ಕಪ್ಪೆ ಈಗಾಗಲೇ ಒಂದು ಪ್ರಕರಣದಿಂದ ಹೊರಗೆ ಬರುತ್ತಿದ್ದಂತೆ ಮತ್ತೆ ರೇಣುಕಾಸ್ವಾಮಿ ಪ್ರಕರಣದಲ್ಲಿ ಜೈಲು ಸೇರಿದ್ದಾನೆ.
15ನೇ ಆರೋಪಿ ಕಾರ್ತಿಕ್ ಅಲಿಯಾಸ್ ಕಪ್ಪೆ ವಿರುದ್ಧ ಹಲ್ಲೆ ದಾಖಲಾಗಿರೋದು ತನಿಖೆಯಿಂದ ಗೊತ್ತಾಗಿದೆ. ನಾಲ್ವರು ಸಹಚರರ ಜತೆ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಆರೋಪವನ್ನು ಕಪ್ಪೆ ಎದುರಿಸುತ್ತಿದ್ದಾನೆ. ತಲಘಟ್ಟಪುರ ಠಾಣಾ ವ್ಯಾಪ್ತಿಯ ಹೆಮ್ಮಿಗೆಪುರದಲ್ಲಿ ಕಳೆದ ವರ್ಷ ಯುವಕನ ಮೇಲೆ ಕಬ್ಬಿಣದ ರಾಡ್ನಿಂದ ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ. ಬೇಲ್ ಮೇಲೆ ಹೊರ ಬಂದು ಇದೀಗ ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ಭಾಗಿಯಾಗಿದ್ದಾನೆ ಎನ್ನಲಾಗಿದೆ.
ರೇಣುಕಾಸ್ವಾಮಿ ಭೀಕರ ಹತ್ಯೆ ಬಳಿಕ ಎರಡೆರಡು ಎಣ್ಣೆ ಪಾರ್ಟಿ ಮಾಡಿದ್ದರು. ಜೂನ್ 8ರ ರಾತ್ರಿ ಡಿಬಾಸ್ ಗ್ಯಾಂಗ್ ಎರಡು ತಂಡಗಳಾಗಿ ಬೇರೆಬೇರೆ ಕಡೆ ಪಾರ್ಟಿ ಮಾಡಿದೆ. ದರ್ಶನ್, ವಿನಯ್, ದೀಪಕ್, ಪ್ರದೋಶ್ ನಾಗರಾಜ್, ಟೀಮ್ನಿಂದ ಆರ್ಆರ್ ನಗರದ ಸ್ಟೋನಿ ಬ್ರೂಕ್ನಲ್ಲಿ ಎಣ್ಣೆ ಪಾರ್ಟಿ ಮಾಡಲಾಗಿದೆ. ಶವ ಬೀಸಾಡಿದ ನಂತರ ಕಾರ್ತಿಕ್ ಅಲಿಯಾಸ್ ಕಪ್ಪೆ, ಕೇಶವ್, ನಿಖಿಲ್ ನಾಯಕ್ರಿಂದಲೂ ಆರ್ಆರ್ನಗರದ ಟ್ರೋಬೋ 98 ಸ್ಟ್ರೀಟ್ ರೆಸ್ಟೋರೆಂಟ್ನಲ್ಲಿ ಎಣ್ಣೆ ಪಾರ್ಟಿ ಮಾಡಿದ್ದಾರೆ ಎನ್ನಲಾಗಿದೆ.
ಏನಿದು ಪ್ರಕರಣ?: ಫೆಬ್ರವರಿ 27ರಿಂದ ಪವಿತ್ರಾ ಗೌಡಗೆ ರೇಣುಕಾ ಸ್ವಾಮಿ ಅಶ್ಲೀಲವಾಗಿ ಮೆಸೇಜ್ ಶುರು ಮಾಡಿದ್ದರು. ಅಕೌಂಟ್ ಬ್ಲಾಕ್ ಮಾಡಿದ್ದರೂ ಹೊಸ ಅಕೌಂಟ್ನಿಂದ ಮತ್ತದೇ ಮಸೇಜ್ ಕಳುಹಿಸುತ್ತಿದ್ದ. ಕಳೆದ ಶುಕ್ರವಾರ ಮರ್ಮಾಂಗದ ಫೋಟೋ ಕಳುಹಿಸಿ ‘ದರ್ಶನ್ಗಿಂತ ನಾನೇನು ಕಡಿಮೆ ಬಾ’ ಎಂದು ಹೇಳಿದ್ದ. ಈ ರೀತಿಯ ಟಾರ್ಚರ್ ಸಹಿಸಿಕೊಳ್ಳಲಾಗದೇ ಪವಿತ್ರಾ ಅವರು ತಮ್ಮ ಮನೆಗೆಲಸದವ ಪವನ್ಗೆ ಹೇಳಿದ್ದರು. ಈ ವಿಚಾರ ದರ್ಶನ್ಗೆ ತಿಳಿದಿದೆ.
ರೇಣುಕಾ ಸ್ವಾಮಿಯನ್ನು ಚಿತ್ರದುರ್ಗದಿಂದ ಅಪಹರಣ ಮಾಡಿ ಕರೆದುಕೊಂಡು ಬಂದು ಶೆಡ್ನಲ್ಲಿ ಇರಿಸಿಕೊಂಡು ಹಲ್ಲೆ ಮಾಡಿದ್ದ ದರ್ಶನ್ ಮತ್ತು ಗ್ಯಾಂಗ್, ಹಲ್ಲೆಯಿಂದ ರೇಣುಕಾ ಸ್ವಾಮಿ ನಿಧನ ಹೊಂದಿದ ಬಳಿಕ ಆತಂಕಗೊಂಡು, ಶವವನ್ನು ಸಾಗಿಸುವ ದಾರಿ ಹುಡುಕಿದೆ. ಆಗ ಬೇರೆ ಗ್ಯಾಂಗ್ ಒಂದನ್ನು ಕರೆಸಿ ಅವರಿಗೆ ಶವ ಒಪ್ಪಿಸಿ, ಅದನ್ನು ವಿಲೇವಾರಿ ಮಾಡುವಂತೆ ಹೇಳಿ ಅವರಿಗೆ 30 ಲಕ್ಷ ರೂಪಾಯಿ ಹಣ ನೀಡಿದ್ದಾರೆ. ಈ ಹಣವನ್ನು ದರ್ಶನ್ ಅವರೇ ನೀಡಿದ್ದಾರೆ ಎನ್ನಲಾಗುತ್ತಿದೆ.
ಹಣ ಪಡೆದ ಮತ್ತೊಂದು ಗ್ಯಾಂಗ್ ರೇಣುಕಾ ಸ್ವಾಮಿಯ ಶವವನ್ನು ಕಾಮಾಕ್ಷಿಪಾಳ್ಯ ಪೊಲೀಸ್ ಠಾಣಾ ವ್ಯಾಪ್ತಿಯ ಸುಮನಹಳ್ಳಿ ಮೋರಿಗೆ ಬಿಸಾಡಿ ಹೋಗಿದ್ದಾರೆ. ಶವ ದೊರೆತ ಬಳಿಕ ತಾವೇ ಕೊಲೆ ಮಾಡಿರುವುದಾಗಿ ಹೇಳಿ ಠಾಣೆಗೆ ಒಪ್ಪಿಕೊಂಡಿದ್ದಾರೆ. ಕೊಲೆ ಮಾಡಲು ಹಣಕಾಸಿನ ವಿಚಾರವೇ ಕಾರಣ ಎಂದು ಹೇಳಿದ್ದಾರೆ. ಆದರೆ ಒಬ್ಬೊಬ್ಬರನ್ನೂ ಪ್ರತ್ಯೇಕವಾಗಿ ವಿಚಾರಣೆ ಮಾಡಿದಾಗ ಅವರ ಹೇಳಿಕೆಯಲ್ಲಿ ವ್ಯತ್ಯಾಸ ಕಂಡುಬಂದಿದೆ. ಬಳಿಕ ಪೊಲೀಸರು ತಮ್ಮದೇ ಶೈಲಿಯಲ್ಲಿ ವಿಚಾರಣೆ ಮಾಡಿದಾಗ ನಿಜಾಂಶ ಬಯಲಾಗಿದೆ.
ಹಣ ಪಡೆದು ಶವ ವಿಲೇವಾರಿ ಜವಾಬ್ದಾರಿ ಹೊತ್ತಿದ್ದ ಗ್ಯಾಂಗ್, ದರ್ಶನ್ರ ಆಪ್ತನೊಟ್ಟಿಗೆ ಸಂಪರ್ಕದಲ್ಲಿತ್ತಂತೆ. ಶವ ವಿಲೇವಾರಿ ಹಾಗೂ ಕೊಲೆಯ ಆರೋಪ ಹೊರಲೆಂದು ಮುಂಚಿತವಾಗಿಯೇ 30 ಲಕ್ಷ ರೂಪಾಯಿ ಹಣವನ್ನು ದರ್ಶನ್ ಅವರಿಂದ ಈ ಗ್ಯಾಂಗ್ ಪಡೆದಿತ್ತು ಎನ್ನಲಾಗಿದೆ. ಈ ಕುರಿತಾಗಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.