ವಿಜಯಪುರ ಸೈನಿಕ ಶಾಲೆಯಲ್ಲಿ 59ನೇ ಸಂಸ್ಥಾಪನಾ ದಿನಾಚರಣೆ

1
ವಿಜಯಪುರ ನಗರದ ಸೈನಿಕ ಶಾಲೆಯಲ್ಲಿ ಶನಿವಾರ ನಡೆದ 59ನೇ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮವನ್ನು ಕೇಕ್ ಕತ್ತರಿಸುವ ಮೂಲಕ ಆಚರಿಸಲಾಯಿತು. ಚಿಕ್ಕೋಡಿ ಲೋಕಸಭಾ ಸದಸ್ಯ ಅಣ್ಣಾಸಾಹೇಬ ಜೊಲ್ಲೆ, ಜಿಲ್ಲಾಧಿಕಾರಿ ಡಾ.ವಿಜಯ ಮಹಾಂತೇಶ ದಾನಮ್ಮನವರ, ಶಾಲೆಯ ಪ್ರಾಚಾರ್ಯೆ ಪ್ರತಿಭಾ ಬಿಸ್ಟ್ , ಉಪ ಪ್ರಾಚಾರ್ಯೆ ಕಮಾಂಡರ್ ಸುರುಚಿ ಗೌರ್ ಇನ್ನಿತರರಿದ್ದರು.
Published on

ವಿಜಯಪುರ : ವಿದ್ಯಾರ್ಥಿಗಳು ಒಳ್ಳೆಯ ಕನಸು ಕಾಣಬೇಕು. ಧನಾತ್ಮಕ ಮನೋಭಾವನೆ ಬೆಳೆಸಿಕೊಳ್ಳಬೇಕು. ಅವಕಾಶ ಸಿಕ್ಕರೆ ಪ್ರವಾಸ ಮಾಡಬೇಕು, ಪ್ರವಾಸ ಕೂಡ ಒಂದು ಒಳ್ಳೆಯ ಶಿಕ್ಷಣ ಎಂದು ಶಾಲೆಯ ಹಳೆಯ ವಿದ್ಯಾರ್ಥಿ ಹಾಗೂ ಲೆಫ್ಟಿನೆಂಟ್ ಜನರಲ್ ಬಿ.ಎಸ್. ರಾಜು ಸಲಹೆ ನೀಡಿದರು.

ನಗರದ ಸೈನಿಕ ಶಾಲೆಯಲ್ಲಿ ಶನಿವಾರ ನಡೆದ 59ನೇ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಕಾರ್ಯಕ್ರಮಕ್ಕೂ ಮುನ್ನ ಶಾಲೆಯ ಆವರಣದಲ್ಲಿರುವ ಹುತಾತ್ಮ ಸೈನಿಕರ ನೆನಪಿಗಾಗಿರುವ ಸ್ಮಾರಕಕ್ಕೆ ತೆರಳಿ ಪುಷ್ಪನಮನ ಸಲ್ಲಿಸಿದರು.
ನಂತರ ಶಾಲೆಯ ವಿದ್ಯಾರ್ಥಿಗಳು ಆಕರ್ಷಕ ಪರೇಡ್ ಮೂಲಕ ಅವರಿಗೆ ಗೌರವ ವಂದನೆ ಸಲ್ಲಿಸುವುದರ ಮೂಲಕ ಶಾಲೆಗೆ ಬರಮಾಡಿಕೊಂಡರು. ನಂತರದಲ್ಲಿ ಶಾಲೆಯ ಕಂಠಿ ಸಭಾಂಗಣದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.

ಇದೇ ವೇಳೆ ಶಾಲೆಯಲ್ಲಿ 25 ವರ್ಷಗಳ ಕಾಲ ಸೇವೆ ಸಲ್ಲಿಸಿದ ಎಲ್ಲ ಸಿಬ್ಬಂದಿಗೆ ಸನ್ಮಾನಿಸಿದರು. ಅದರಂತೆ ಶಾಲೆ ವಿವಿಧ ಚಟುವಟಿಕೆಗಳಲ್ಲಿ ಭಾಗವಹಿಸಿ ಪ್ರಶಸ್ತಿ ಗೆದ್ದವರಿಗೆ ಮುಖ್ಯ ಅತಿಥಿಗಳು ಪಾರಿತೋಷಕಗಳನ್ನು ನೀಡಿ ಪ್ರೋತ್ಸಾಹಿಸಿದರು. ಸಮಾರಂಭಕ್ಕೂ ಮುನ್ನ ಮುಖ್ಯ ಅತಿಥಿಗಳು ಶಾಲೆ ವಿದ್ಯಾರ್ಥಿನಿಯರ ವಸತಿ ನಿಲಯಕ್ಕೆ ಶಂಕುಸ್ಥಾಪನೆ ಮಾಡಿ ಪೂಜೆ ಸಲ್ಲಿಸಿದರು.

ವಿದ್ಯಾರ್ಥಿನಿಯರಿಗೆ ಕಳೆದ ಎರಡು ವರ್ಷದಿಂದ ಸೈನಿಕ ಶಾಲೆಗೆ ಪ್ರವೇಶವಿರುವುದರಿಂದ ಈ ಶಾಲೆಯಲ್ಲಿ ಈಗ ವಿದ್ಯಾರ್ಥಿನಿಯರ ಸಂಖ್ಯೆ 30 ಇದ್ದು, ಪ್ರತಿವರ್ಷ ಅದು ಹೆಚ್ಚುತ್ತಲಿದೆ, ಹೀಗಾಗಿ ವಿದ್ಯಾರ್ಥಿನಿಯರಿಗೆ ಬೇಕಾದ ವಸತಿ ನಿಲಯಕ್ಕೆ ಶಂಕುಸ್ಥಾಪನೆ ಮಾಡಲಾಯಿತು.

ಮುಂದಿನ ವರ್ಷ ಶಾಲೆಗೆ 60 ವರ್ಷ ತುಂಬುತ್ತಿರುವ ಹಿನ್ನೆಲೆಯಲ್ಲಿ ವಜ್ರಮಹೋತ್ಸವದ ಲಾಂಛನವನ್ನು ಇದೇ ಸಂದರ್ಭದಲ್ಲಿ ಬಿಡುಗಡೆ ಮಾಡಲಾಯಿತು. ಮಧ್ಯಾಹ್ನ ಶಾಲೆಯಲ್ಲಿ ಜರುಗಿದ ಜಿಮ್ನಾಸ್ಟಿಕ್, ಕವಾಯತ್ ಮತ್ತು ಇತರ ದೈಹಿಕ ಚಟುವಟಿಕೆಗಳ ಪ್ರದರ್ಶನದಲ್ಲಿ ಮುಖ್ಯ ಅತಿಥಿಗಳು ಭಾಗವಹಿಸಿ ವಿದ್ಯಾರ್ಥಿಗಳಿಗೆ ಪ್ರೇರಣೆ ನೀಡಿದರು.

ಚಿಕ್ಕೋಡಿ ಲೋಕಸಭಾ ಸದಸ್ಯ ಅಣ್ಣಾಸಾಹೇಬ ಜೊಲ್ಲೆ ಹಾಗೂ ಜಿಲ್ಲಾಧಿಕಾರಿ ಡಾ.ವಿಜಯ ಮಹಾಂತೇಶ ದಾನಮ್ಮನವರ ಅತಿಥಿಯಾಗಿ ಭಾಗವಹಿಸಿದ್ದರು. ಶಾಲೆಯ ಪ್ರಾಚಾರ್ಯೆ ಪ್ರತಿಭಾ ಬಿಸ್ಟ್ ಶಾಲೆಯ ವಾರ್ಷಿಕ ವರದಿ ವಾಚನ ಮಾಡಿದರು. ಶಾಲೆಯ ಉಪ ಪ್ರಾಚಾರ್ಯೆ ಕಮಾಂಡರ್ ಸುರುಚಿ ಗೌರ್, ಶಾಲೆಯ ಆಡಳಿತಾಧಿಕಾರಿ ಆಕಾಶ್ ವತ್ಸ್ , ಹಿರಿಯ ಶಿಕ್ಷಕ ಡಾ.ಸಿ.ರಾಮರಾವ್ ಮುಂತಾದವರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net