

ಧಾರವಾಡ: ದೀಪಾವಳಿ ಹಬ್ಬದ ಸಂಭ್ರಮದ ಮಧ್ಯೆಯೇ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನೇತೃತ್ವದಲ್ಲಿ ಇಸ್ಪೀಟ್ ಅಡ್ಡೆಗಳ ಮೇಲೆ ಬಹು ದೊಡ್ಡ ದಾಳಿ ನಡೆದಿದೆ. ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ ಯರಿಕೊಪ್ಪ ಬಳಿಯ ರಮ್ಯಾ ರೆಸಿಡೆನ್ಸಿ ಹಾಗೂ ಪ್ರೀತಿ ಲಾಡ್ಜ್ನಲ್ಲಿ ನಡೆಯುತ್ತಿದ್ದ ಇಸ್ಪೀಟ್ ಅಡ್ಡೆಗಳ ಮೇಲೆ ಭಾನುವಾರ ಬೆಳಗಿನ ಜಾವ ದಾಳಿ ನಡೆಸಿರುವ ಪೊಲೀಸರು, ದೊಡ್ಡ ದೊಡ್ಡ ಜೂಜುಕೋರ ಕುಳಗಳಿಗೆ ಶಾಕ್ ನೀಡಿದ್ದಾರೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹಾಗೂ ಹುಬ್ಬಳ್ಳಿ ಧಾರವಾಡ ಕಾನೂನು ಸುವ್ಯವಸ್ಥೆ ವಿಭಾಗದ ಡಿಸಿಪಿ ಕೃಷ್ಣಕಾಂತ ನೇತೃತ್ವದ ಪೊಲೀಸರ ತಂಡ ದಾಳಿ ನಡೆಸಿತ್ತು. ಖಚಿತ ಮಾಹಿತಿ ಮೇರೆಗೆ ನುಗ್ಗಿದ ಪೊಲೀಸರು ರಮ್ಯಾ ರೆಸಿಡೆನ್ಸಿಯಲ್ಲಿ 65 ಮೊಬೈಲ್ಫೋನ್ಗಳು, 35 ವಾಹನಗಳು, ಪೀಠೋಪಕರಣಗಳನ್ನು ಜಪ್ತಿ ಮಾಡಿದ್ದಾರೆ. ಇಸ್ಟೀಟ್ ಜೂಜಿನಲ್ಲಿ ತೊಡಗಿದ್ದ 60 ಜನರನ್ನು ವಶಕ್ಕೆ ಪಡೆಯಲಾಗಿದ್ದು, ಸುಮಾರು 49 ಲಕ್ಷ ರೂ. ವಶಪಡಿಸಿಕೊಳ್ಳಲಾಗಿದೆ.
ಜಿಲ್ಲೆಯ ಕಾಂಗ್ರೆಸ್ ಮತ್ತು ಬಿಜೆಪಿಯ ಕೆಲ ಘಟಾನುಘಟಿ ಮುಖಂಡರು ಸಹ ಪಕ್ಷಭೇದ ಮರೆತು ಜೂಜಾಟದಲ್ಲಿ ಪಾಲ್ಗೊಂಡಿದ್ದರು.
ಗೋವಾದಲ್ಲಿ ಕ್ಯಾಸಿನೋ ನಡೆಸುತ್ತಿದ್ದ ಸಮುಂದರ್ಸಿಂಗ್ ರಮ್ಯಾ ರೆಸಿಡೆನ್ಸಿಯಲ್ಲಿ ಇಸ್ಪೀಟ್ ಅಡ್ಡೆ ನಡೆಸುತ್ತಿದ್ದುದಾಗಿ ತಿಳಿದುಬಂದಿದೆ.
ಮತ್ತೊಂದೆಡೆ ತಾಲೂಕಿನ ಯರಿಕೊಪ್ಪ ಬಳಿಯ ಪ್ರೀತಿ ಲಾಡ್ಜ್ ಮೇಲೆ ದಾಳಿ ನಡೆಸಿದ ಪೊಲೀಸರು 70 ಜನರನ್ನು ಬಂಧಿಸಿ, 65 ಮೊಬೈಲ್ಫೋನ್ಗಳನ್ನು ಜಪ್ತಿ ಮಾಡಿ, 10 ಲಕ್ಷ ರೂ. ನಗದು ವಶಪಡಿಸಿಕೊಂಡಿದ್ದಾರೆ.ಬಂಧಿತರೆಲ್ಲರನ್ನೂ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ.
ಬಹುದೊಡ್ಡ ದಾಳಿ: ಜಿಲ್ಲೆಯಲ್ಲಿ ಇಸ್ಪೀಟ್ ಜೂಜಾಟ ಅವ್ಯಾಹತವಾಗಿ ನಡೆಯುತ್ತಿದ್ದ ದೂರುಗಳು ಕೇಳಿ ಬಂದಿದ್ದವು. ಈ ಹಿನ್ನೆಲೆಯಲ್ಲಿ ಎಸ್ಪಿ ನೇತೃತ್ವದಲ್ಲಿ ಭಾನುವಾರ ಬೆಳಗಿನ ಜಾವ ದಾಳಿ ನಡೆದಿದೆ ಎಂದು ಬೆಳಗಾವಿ ಉತ್ತರ ವಲಯ ಐಜಿಪಿ ರಾಘವೇಂದ್ರ ಸುಹಾಸ್ ತಿಳಿಸಿದರು. ಗ್ರಾಮೀಣ ಠಾಣೆಯಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ಮಾಹಿತಿ ಆಧರಿಸಿ ದಾಳಿ ಮಾಡುವುದು ಮುಂದುವರಿಯಲಿದೆ ಎಂದರು.