58ಮನೆ ಕಳವು ಪ್ರಕರಣದ ಖತಾರ್ನಾಕ್ ಕಳ್ಳನ ಬಂಧಿನ

58ಮನೆ ಕಳವು ಪ್ರಕರಣದ ಖತಾರ್ನಾಕ್ ಕಳ್ಳನ ಬಂಧಿನ
Published on

ಹಾಸನ: ಜಿಲ್ಲೆ ಸೇರಿದಂತೆ ರಾಜ್ಯದ ಹಲವೆಡೆ ಸುಮಾರು 58ಮನೆ ಕಳವು ಪ್ರಕರಣದಲ್ಲಿ ಭಾಗಿಯಾಗಿದ್ದ ಖತಾರ್ನಾಕ್ ಕಳ್ಳನನ್ನು ಬಂಧಿಸಿರುವ ಪೊಲೀಸರು ಆತನಿಂದ ಆತನಿಂದ 29.69 ಲಕ್ಷ ಮೌಲ್ಯದ ಚಿನ್ನಾಭರಣ ವಶಪಡಿಸಿಕೊಳ್ಳಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಹಮದ್ ಸುಜೀತಾ ಅವರು ತಿಳಿಸಿದರು.
ಆಲೂರು ತಾಲ್ಲೂಕು ಮುದಿಗೆರೆ ಗ್ರಾಮದ ಆರೋಪಿ ಸಂತೋಷ್ ಅಲಿಯಾಸ್ ರಂಗೇಗೌಡ (36) ಬಂಧಿಸಿ, ಆತನಿಂದ 29.69 ಲಕ್ಷರೂ. ಮೌಲ್ಯದ 521 ಗ್ರಾಂ ಚಿನ್ನಾಭರಣ, 36,112 ಸಾವಿರ ಬೆಲೆಯ 488 ಗ್ರಾಂ ಬೆಳ್ಳಿಯ ಆಭರಣ, 1 ಬೈಕ್, 16 ಸಾವಿರರೂ. ನಗದು ವಶಪಡಿಸಿಕೊಳ್ಳಲಾಗಿದೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಈತ 2013 ರಿಂದ ವಿವಿಧೆಡೆಗಳಲ್ಲಿ ಕಳ್ಳತನ ನಡೆಸುತ್ತಿದ್ದು, ಕಳೆದ ಒಂದು ವರ್ಷದಲ್ಲಿ ಜಿಲ್ಲೆಯಲ್ಲಿ 10 ಕಡೆಗಳಲ್ಲಿ ಕಳ್ಳತನ ನಡೆಸಿದ್ದಾನೆ. ಹಳೇಬೀಡು ಠಾಣೆ ವ್ಯಾಪ್ತಿಯಲ್ಲಿ 5, ಅರೇಹಳ್ಳಿ ವ್ಯಾಪ್ತಿಯಲ್ಲಿ 2, ಬೇಲೂರು ಪಟ್ಟಣ ಠಾಣಾ ವ್ಯಾಪ್ತಿಯಲ್ಲಿ 1, ಹಾಸನ ಗ್ರಾಮಾಂತರ ಹಾಗು ಕೆ.ಆರ್.ಪುರಂ ಠಾಣಾ ವ್ಯಾಪ್ತಿಯಲ್ಲಿ ತಲಾ ಒಂದೊಂದು ಪ್ರಕರಣಗಳಲ್ಲಿ ಭಾಗಿಯಾಗಿದ್ದಾನೆ. ಜಿಲ್ಲೆಯಲ್ಲಿ ಕಳವು ಮಾಡಿದ್ದ ಎಲ್ಲಾ ಚಿನ್ನಾಭರಣ-ನಗದು ವಶಪಡಿಸಿಕೊಳ್ಳಲಾಗಿದೆ. ಬೇರೆ ಎಲ್ಲೆಲ್ಲಿ ಕಳ್ಳತನ ನಡೆಸಿದ್ದಾನೆ ಎಂಬುದನ್ನು ವಿಚಾರಣೆ ನಡೆಸುವುದಾಗಿ ತಿಳಿಸಿದರು.
ಜ.12 ರಂದು ಬೇಲೂರು ತಾಲ್ಲೂಕಿನ ಹನಿಕೆ ಗ್ರಾಮದ ಅಶ್ವತ್ಥ್ ಎಂಬುವರ ಮನೆಯ ಬೀಗ ಮುರಿದು ಮನೆಯಲ್ಲಿದ್ದ 5 ಲಕ್ಷರೂ. ನಗದು ಹಾಗು ಸುಮಾರು 220 ಗ್ರಾಂ. ತೂಕದ ಚಿನ್ನಾಭರಣ ಕಳವು ಮಾಡಿರುವ ಬಗ್ಗೆ ಪ್ರಕರಣ ದಾಖಲಾಗಿತ್ತು.
ಬೇಲೂರು ತಾಲ್ಲೂಕು ಭಾಗದಲ್ಲಿ ಮನೆ ಕಳ್ಳತನ ಪ್ರಕರಣ ಹೆಚ್ಚಾಗಿದ್ದರಿಂದ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಎಎಸ್ಪಿಗಳಾದ ತಮ್ಮಯ್ಯ ಹಾಗು ವೆಂಕಟೇಶ ನಾಯ್ಡು ಅವರ ಮಾರ್ಗದರ್ಶನದಲ್ಲಿ ಅರಸೀಕೆರೆ ಡಿವೈಎಸ್ಪಿ ಲೋಕೇಶ್ ಅವರ ನೇತೃತ್ವದಲ್ಲಿ ಹಳೇಬೀಡು ಸಿಪಿಐ ಎಸ್.ಎನ್.ಜಯರಾಂ, ಪಿಎಸ್‌ಐ ಶಿವನಗೌಡ ಜಿ.ಪಾಟೀಲ ಹಾಗು ಸಿಬ್ಬಂದಿ ನೇತೃತ್ವದಲ್ಲಿ ತಂಡ ರಚನೆ ಮಾಡಲಾಗಿತ್ತು.
ಜ.23 ರಂದು ಬೇಲೂರು ತಾಲ್ಲೂಕಿನ ಕೋಗಿಲಮನೆ ಬಳಿ ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಹಲವು ಮನೆಕಳ್ಳತನದಲ್ಲಿ ಭಾಗಿಯಾಗಿರುವ ಬಗ್ಗೆ ಒಪ್ಪಿಕೊಂಡಿದ್ದಾನೆ. ಅಲ್ಲದೆ ಕದ್ದ ಒಡವೆಗಳನ್ನು ಕುಶಾಲನಗರದ ರಥ ಬೀದಿಯಲ್ಲಿರುವ ಶೀತಲ್, ಶ್ರೀನಾಥ್, ಶುಭ ಜ್ಯವೆಲ್ಲರಿಯಲ್ಲಿ ಪದ್ಮಾವತಿ ಅಲಿಯಾಸ್ ಪದ್ಮ ಮತ್ತು ಹರೀಶ್ ಎಂಬುವರ ಮೂಲಕ ಮಾರಾಟ ಮಾಡಿರುವುದನ್ನು ಒಪ್ಪಿಕೊಂಡಿದ್ದಾನೆ ಎಂದು ವಿವರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net