

ತುಮಕೂರು: ಶುಕ್ರವಾರವೂ ಜಿಲ್ಲೆಯಲ್ಲಿ ಕರೊನಾ ಸೋಂಕು ಮತ್ತಷ್ಟು ಜನರಿಗೆ ತಗುಲಿದೆ. ಕುಣಿಗಲ್ ವೃತ್ತದ ಪೊಲೀಸ್ ಇನ್ಸ್‌ಪೆಕ್ಟರ್ ಸೇರಿ 59 ಜನರಿಗೆ ಸೋಂಕು ತಗುಲಿದ್ದು, ಇವರಲ್ಲಿ 60 ವರ್ಷ ಮೇಲ್ಪಟ್ಟವರೇ 10 ಜನ.
ತುಮಕೂರು ಗಂಗೋತ್ರಿ ನಗರದ 70 ವರ್ಷದ ವೃದ್ಧ, ಸೊಂಕು ದೃಢವಾಗುವ ಮುಂಚೆಯೇ ಕೊರಟಗೆರೆ ತಾಲೂಕು ಕಲ್ಕೆರೆ 68 ವರ್ಷದ ವೃದ್ಧ ಹಾಗೂ ಕುಣಿಗಲ್ ತಾಲೂಕು ಹೌಸಿಂಗ್ ಬೋರ್ಡ್ 75 ವರ್ಷದ ವ್ಯಕ್ತಿ ಸೇರಿ ಮೂವರು ಕರೊನಾಗೆ ಬಲಿಯಾಗಿದ್ದು ಸಾವಿನ ಸಂಖ್ಯೆ 38ಕ್ಕೆ ತಲುಪಿದೆ.
ಸೋಂಕಿತರಲ್ಲಿ ಅಗ್ರಸ್ಥಾನಿ ತುಮಕೂರು 22, ಮಧುಗಿರಿ 8, ಗುಬ್ಬಿ ಹಾಗೂ ತಿಪಟೂರಿನಲ್ಲಿ ತಲಾ 7, ಕುಣಿಗಲ್ ಹಾಗೂ ತುರುವೇಕೆರೆ ತಲಾ 5, ಚಿಕ್ಕನಾಯಕನಹಳ್ಳಿ 2, ಕೊರಟಗೆರೆ, ಪಾವಗಡ ಹಾಗೂ ಶಿರಾ ತಲಾ 1 ಪ್ರಕರಣ ಪತ್ತೆಯಾಗಿವೆ. ಜಿಲ್ಲಾ ಕೋವಿಡ್ ಆಸ್ಪತ್ರೆಯಿಂದ 35 ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದು, ಸ್ವಲ್ಪ ಸಮಾಧಾನ ಮೂಡಿಸಿದೆ. ಈವರೆಗೆ ಒಟ್ಟಾರೆ 523 ಮಂದಿ ಗುಣಮುಖರಾಗಿ ಮನೆಗೆ ಮರಳಿದ್ದಾರೆ.
ತುಮಕೂರಿನಲ್ಲಿ ವಿನಾಯಕನಗರ, ಎಸ್‌ಐಟಿ 3ನೇ ಹಂತ, ಸಿದ್ಧಗಂಗಾ ಬಡಾವಣೆ 4, ಹೊಂಬಯ್ಯನಪಾಳ್ಯ 2, ವಿದ್ಯಾನಗರ 1ನೇ ಕ್ರಾಸ್, ಅಶೋಕನಗರ, ತುರುವೇಕೆರೆ ತಾಲೂಕು ವಿದ್ಯಾನಗರ, ಬಸವೇಶ್ವರನಗರ 2, ತಿಪಟೂರು ತಾಲೂಕಿನಲ್ಲಿ 4 ಜನರಿಗೆ ಸೋಂಕು ದೃಢಪಟ್ಟಿದೆ. ಚಿಕ್ಕನಾಯಕನಹಳ್ಳಿ, ಗುಬ್ಬಿ, ಕುಣಿಗಲ್ ತಾಲೂಕಿನ ಕೆಲವೆಡೆ ಸೋಂಕು ದೃಢವಾಗಿದೆ.
ಆರೋಗ್ಯ ಇಲಾಖೆ ಮನವಿ: ಶುಕ್ರವಾರ ಪತ್ತೆಯಾದ 59 ಜನರಲ್ಲಿ 60 ವರ್ಷ ಮೇಲ್ಪಟ್ಟವರು 10 ಜನರಿದ್ದಾರೆ, ಒಬ್ಬರು ಗರ್ಭಿಣಿ, ರೋಗ ಲಕ್ಷಣವಿರುವವರು 28, ರೋಗ ಲಕ್ಷಣವಿಲ್ಲದವರು 31, ಪ್ರಾಥಮಿಕ ಸಂಪರ್ಕದಿಂದ 5 ಜನರಿದ್ದಾರೆ. ಇದರಲ್ಲಿ 30 ಪುರುಷರು ಹಾಗೂ 29 ಮಹಿಳೆಯರಿದ್ದಾರೆ. ವಯಸ್ಸಾದವರು ಹೆಚ್ಚಿನ ಸಂಖ್ಯೆಯಲ್ಲಿ ಮೃತಪಡುತ್ತಿರುವ ಹಿನ್ನೆಲೆಯಲ್ಲಿ ವೃದ್ಧರು ಮನೆಯಿಂದ ಹೊರಬರದೇ ಇರದಂತೆ ಆರೋಗ್ಯ ಇಲಾಖೆ ಮನವಿ ಮಾಡಿದೆ.
ಕ್ಷೌರ ಮಾಡಿಸಿಕೊಂಡವರ ಮಾಹಿತಿ ಸಂಗ್ರಹ: ಚಿಕ್ಕನಾಯಕನಹಳ್ಳಿ ತಾಲೂಕಿನ ಕ್ಷೌರದಂಗಡಿಗಳಲ್ಲಿ ಕ್ಷೌರ ಮಾಡಿಸಿಕೊಂಡವರ ವಿಳಾಸ ಹಾಗೂ ಮೊಬೈಲ್ ಸಂಖ್ಯೆ ಬರೆದಿಡುವಂತೆ ತಹಸೀಲ್ದಾರ್ ತೇಜಸ್ವಿನಿ ಸೂಚನೆ ನೀಡಿದ್ದಾರೆ. ಕ್ಷೌರದಂಗಡಿಗಳಿಗೆ ಹೆಚ್ಚು ಜನರು ಬಂದು ಹೋಗುವುದರಿಂದ ಮುಂಜಾಗ್ರತಾ ಕ್ರಮವಾಗಿ ಮಾಹಿತಿ ಸಂಗ್ರಹಿಸಿಟ್ಟುಕೊಳ್ಳಲು ತಾಲೂಕು ಆಡಳಿತ ಮುಂದಾಗಿದೆ.
ಮಧುಗಿರಿಯಲ್ಲಿ 8 ಜನರಿಗೆ ಸೋಂಕು: ಮಧುಗಿರಿ ತಾಲೂಕಿನಲ್ಲಿ ಶುಕ್ರವಾರ 8 ಜನರಿಗೆ ಕರೊನಾ ಸೋಂಕು ಪತ್ತೆಯಾಗಿದ್ದು ಒಟ್ಟು ಸೋಂಕಿತರ ಸಂಖ್ಯೆ 84 ತಲುಪಿದೆ. 46 ಜನರು ಸೋಂಕಿನಿಂದ ಗುಣಮುಖರಾಗಿ ಮನೆಗೆ ತೆರಳಿದ್ದಾರೆ.
ಪಟ್ಟಣದ ಗಾಣಿಗರ ಬೀದಿ, ಕೆ.ಎಚ್.ರಸ್ತೆ 2, ಚೌಡೇಶ್ವರಿ ಗುಡಿ ಬೀದಿ, ರಂಗೇನಹಳ್ಳಿ 2, ಎಂ.ಗೊಲ್ಲರಹಟ್ಟಿಯಲ್ಲಿ ಕರೊನಾ ಸೋಂಕು ಪ್ರಕರಣ ಕಾಣಿಸಿಕೊಂಡಿದೆ.