

ಹನೂರು: ತಾಲೂಕಿನಲ್ಲಿ ಮೇ 8ರಿಂದ 22 ರವೆರೆಗೆ ಆಗಾಗ್ಗೆ ಸುರಿದ ಗಾಳಿ ಸಹಿತ ಮಳೆಗೆ ಈವರೆಗೆ ಒಟ್ಟು 58.87 ಎಕರೆ ಪ್ರದೇಶದಲ್ಲಿ ಬೆಳೆ ಹಾನಿಯಾಗಿದ್ದು, ಪರಿಹಾರಕ್ಕಾಗಿ ರೈತರು ಅರ್ಜಿ ಸಲ್ಲಿಸಿದ್ದಾರೆ.
ತಾಲೂಕಿನಲ್ಲಿ ಹೆಚ್ಚಿನ ರೈತರು ಮುಖ್ಯವಾಗಿ ಕೃಷಿಯನ್ನೇ ಅವಲಂಬಿಸಿದ್ದಾರೆ. ಹಾಗಾಗಿ ಕೃಷಿ ಬೆಳೆಗಳಾದ ಮುಸುಕಿನ ಜೋಳ, ಸಜ್ಜೆ, ಕಡಲೆ, ತೋಟಗಾರಿಕೆ ಬೆಳೆಯಾದ ಬಾಳೆ ಬೆಳೆಯಲಾಗಿತ್ತು. 15 ದಿನದ ಅವಧಿಯಲ್ಲಿ ಸುರಿದ ಗಾಳಿ ಸಹಿತ ಮಳೆಗೆ 3 ಎಕರೆಯಲ್ಲಿ ಸಜ್ಜೆ, 52.12 ಎಕರೆಯಲ್ಲಿ ಮುಸುಕಿನ ಜೋಳದ ಫಸಲು ಒಟ್ಟು 55.12 ಎಕರೆ ಹಾಗೂ 3.75 ಎಕರೆಯಲ್ಲಿ ಬಾಳೆ ಫಸಲು ಹಾನಿಯಾಗಿದೆ. ಇದೀಗ ಅಧಿಕಾರಿಗಳು ನಷ್ಟದ ವರದಿ ಸಂಗ್ರಹಿಸಿದ್ದಾರೆ.
ಎಲ್ಲೆಲ್ಲಿ ಎಷ್ಟೇಷ್ಟು?: ಹನೂರು, ರಾಮಾಪುರ ಹಾಗೂ ಲೊಕ್ಕನಹಳ್ಳಿ ಹೋಬಳಿಯಲ್ಲಿ ರೈತ ಸಂಪರ್ಕ ಕೇಂದ್ರವಿದೆ. ಹನೂರು ಹೋಬಳಿಯಲ್ಲಿ 22.64 ಎಕರೆ ಪ್ರದೇಶದಲ್ಲಿ ಬೆಳೆ ಹಾನಿಯಗಿದ್ದು, 29 ರೈತರಿಗೆ ನಷ್ಟ ಉಂಟಾಗಿದೆ. ಲೊಕ್ಕನಹಳ್ಳಿಯಲ್ಲಿ 23 ಎಕರೆಯಲ್ಲಿ ಬೆಳೆದಿದ್ದ ಬೆಳೆ ನಾಶವಾಗಿದ್ದು, 14 ರೈತರಿಗೆ ನಷ್ಟವಾಗಿದೆ. ಇನ್ನು ರಾಮಾಪುರದಲ್ಲಿ 9.48 ಎಕರೆ ಪ್ರದೇಶದಲ್ಲಿ ಫಸಲು ಹಾನಿಯಾಗಿ, ಐವರು ರೈತರಿಗೆ ನಷ್ಟವಾಗಿದ್ದು, ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ.
ಅರ್ಜಿ ಸಲ್ಲಿಕೆ: ಕಳೆದ ವರ್ಷ ಪ್ರಕೃತಿ ವಿಕೋಪದಡಿ ಹಾನಿಯಾದ ಮಳೆಯಾಶ್ರಿತ ಬೆಳೆಗಳಿಗೆ 1 ಎಕರೆಗೆ 6,800 ರೂ. ಹಾಗೂ ನೀರಾವರಿ ಬೆಳೆಗಳಿಗೆ 25 ಸಾವಿರ ರೂ. ಪರಿಹಾರ ನಿಗದಿಪಡಿಸಲಾಗಿತ್ತು. ಈ ದಿಸೆಯಲ್ಲಿ ತಾಲೂಕಿನಲ್ಲಿ ಬೆಳೆ ಹಾನಿಗೊಳಗಾಗಿರುವ 51 ರೈತರು ಪರಿಹಾರಕ್ಕಾಗಿ ಈಗಾಗಲೇ ಅರ್ಜಿ ಸಲ್ಲಿಸಿದ್ದಾರೆ. ಕಂದಾಯ ಹಾಗೂ ಕೃಷಿ ಇಲಾಖೆ ಅಧಿಕಾರಿಗಳು ಬೆಳೆ ಹಾನಿಯಾದ ಜಮೀನುಗಳಿಗೆ ತೆರಳಿ ಪರಿಶೀಲಿಸಿ, ರೈತರಿಂದ ಮಾಹಿತಿ ಪಡೆದುಕೊಂಡಿದ್ದಾರೆ. ಸೂಕ್ತ ಪರಿಹಾರಕ್ಕಾಗಿ ಮುಂದಿನ ಕ್ರಮ ಕೈಗೊಂಡಿದ್ದಾರೆ.
ಗಾಳಿ ರಭಸಕ್ಕೆ ಫಸಲು ಹಾನಿ: ಹನೂರು ಭಾಗದಲ್ಲಿನ ಹೆಚ್ಚಿನ ರೈತರು ಖುಷ್ಕಿ ಜಮೀನನ್ನು ಹೊಂದಿದ್ದು, ಮಳೆಯನ್ನೇ ಆಶ್ರಯಿಸಿ ಕೃಷಿ ಮಾಡುತ್ತಿದ್ದಾರೆ. ಇತ್ತ ನೀರಾವರಿ ಜಮೀನಿನಲ್ಲಿ ಅಂತರ್ಜಲ ಮಟ್ಟವನ್ನು ಉತ್ತಮಪಡಿಸಲು ಮಳೆ ವರದಾನವಾಗಿದೆ. ಹಾಗಾಗಿ ಮಳೆ ಪ್ರಧಾನ ಪಾತ್ರವನ್ನು ವಹಿಸಿದೆ. 15 ದಿನದಲ್ಲಿ ಮಳೆಯ ಜತೆಗೆ ಗಾಳಿ ರಭಸ ಹೆಚ್ಚಾದ ಪರಿಣಾಮ ಫಸಲು ಹಾನಿಯಾಗಿರುವುದಕ್ಕೆ ಪ್ರಮುಖ ಕಾರಣ.
ಸೂಕ್ತ ಪರಿಹಾರಕ್ಕೆ ಒತ್ತಾಯ: ತಾಲೂಕಿನಲ್ಲಿ ಹೆಚ್ಚಾಗಿ ಜೋಳದ ಫಸಲು ನೆಲ ಕಚ್ಚಿದೆ. ಸಾಮಾನ್ಯವಾಗಿ 1 ಎಕರೆಯಲ್ಲಿ ಮುಸುಕಿನ ಜೋಳ ಬೆಳೆಯಬೇಕಾದರೆ 20 ಸಾವಿರ ರೂ. ವ್ಯಯಿಸಬೇಕಿದ್ದು, 20 ಕ್ವಿಂಟಾಲ್ ಪಡೆಯಬಹುದಾಗಿದೆ. ಪ್ರಸ್ತುತ ಮುಸುಕಿನ ಜೋಳಕ್ಕೆ ಪ್ರತಿ ಕ್ವಿಂಟಾಲ್‌ಗೆ 1900-2000 ರೂ. ದರವಿದೆ. ಫಸಲು ಬೆಳೆಯಲು ಸಾವಿರಾರು ರೂ. ಖರ್ಚು ಮಾಡಲಾಗಿದ್ದು, ನಷ್ಟವಾಗಿದೆ. ಆದ್ದರಿಂದ ಸಂಬಂಧಪಟ್ಟ ಅಧಿಕಾರಿಗಳು ಅಗತ್ಯ ಕ್ರಮವಹಿಸಿ ಆದಷ್ಟು ಬೇಗ ಸೂಕ್ತ ಪರಿಹಾರ ದೊರಕಿಸಿ ಕೊಡುವಂತೆ ರೈತರು ಒತ್ತಾಯಿಸಿದ್ದಾರೆ.
ಖುದ್ದಾಗಿ ಭೇಟಿ ನೀಡಿ ಪರಿಶೀಲಿಸಿ: ಗಾಳಿ, ಮಳೆಯಿಂದಾಗಿ ಫಸಲು ಹಾನಿಯಾಗಿರುವ ಬಹುತೇಕ ಜಮೀನಿಗಳಿಗೆ ಕಂದಾಯ ಹಾಗೂ ಕೃಷಿ ಇಲಾಖೆ ಅಧಿಕಾರಿಗಳು ಅಥವಾ ನೌಕರರು ಭೇಟಿ ನೀಡಿ ಪರಿಶೀಲಿಸಿ ಮಾಹಿತಿ ಪಡೆದು ವರದಿ ಸಂಗ್ರಹಿಸುತ್ತಾರೆ. ಆದರೆ ಕೆಲವು ಜಮೀನುಗಳಿಗೆ ಭೇಟಿ ನೀಡಿ ಪರಿಶೀಲಿಸುಸುತ್ತಿಲ್ಲ. ಬದಲಾಗಿ ರೈತರು ಬೆಳೆ ಹಾನಿಯಾಗಿರುವ ಬಗ್ಗೆ ತಿಳಿಸಿದರೆ ಅವರಿಂದಲೇ ಫೋಟೋ ಹಾಗೂ ಅಗತ್ಯ ಮಾಹಿತಿಯನ್ನು ಕಚೇರಿಗೆ ತರುವಂತೆ ತಿಳಿಸುತ್ತಾರೆ ಎಂಬ ಆರೋಪ ಕೇಳಿ ಬಂದಿದೆ. ಇದರಿಂದ ಹಾನಿಯಾಗಿರುವ ಬೆಳೆಯ ಬಗ್ಗೆ ಸ್ಪಷ್ಟ ಚಿತ್ರಣ ಸಿಗುವುದಿಲ್ಲ. ಇದರಿಂದ ದೊರಕುವ ಪರಿಹಾರದಲ್ಲಿ ಅನ್ಯಾಯವಾಗಬಹುದು. ಜತೆಗೆ ರೈತರ ಸಮಯವೂ ವ್ಯರ್ಥವಾಗಬಹುದು. ಆದ್ದರಿಂದ ಹಾನಿಯಾದ ಪ್ರತಿ ಜಮೀನುಗಳಿಗೆ ಅಧಿಕಾರಿಗಳು ಖುದ್ಧಾಗಿ ಭೇಟಿ ನೀಡಿ ಪರಿಶೀಲಿಸಬೇಕು ಎಂಬುದು ರೈತರ ಒತ್ತಾಯ.
ನಾನು 2 ಎಕರೆಯಲ್ಲಿ ಮುಸುಕಿನ ಜೋಳ ಬೆಳೆದಿದ್ದೆ. ಆದರೆ ಇತ್ತೀಚೆಗೆ ಸುರಿದ ಗಾಳಿ ಸಹಿತ ಜೋರು ಮಳೆಗೆ ಒಂದು ಎಕರೆ ಫಸಲು ನಾಶವಾಗಿದೆ. ಸಂಬಂಧಪಟ್ಟವರು ಸರ್ಕಾರದಿಂದ ಸೂಕ್ತ ಪರಿಹಾರ ದೊರಕಿಸಿ ಕೊಡಬೇಕು.
ರಾಜು, ಭೈರನತ್ತ ಗ್ರಾಮ
ಈಗಾಗಲೇ ಬೆಳೆ ಹಾನಿಯಾಗಿರುವ ಜಮೀನುಗಳಿಗೆ ತೆರಳಿ ಪರಿಶೀಲನೆ ನಡೆಸಲಾಗಿದ್ದು, ಸೂಕ್ತ ಪರಿಹಾರಕ್ಕಾಗಿ ವರದಿಯನ್ನು ಕೃಷಿ ಇಲಾಖೆಗೆ ಕಳುಹಿಸಿಕೊಡಲಾಗಿದೆ. ಈ ಬಗ್ಗೆ ಅಗತ್ಯ ಕ್ರಮವಹಿಸಲಾಗಿದೆ.
ಗುರುಪ್ರಸಾದ್, ತಹಸೀಲ್ದಾರ್ ಹನೂರು
ತಾಲೂಕಿನಲ್ಲಿ ಮಳೆಗೆ 55.12 ಎಕರೆ ಫಸಲು ಹಾನಿಯಾಗಿದ್ದು, 48 ರೈತರಿಗೆ ನಷ್ಟವಾಗಿದೆ. ಈಗಾಗಲೇ ಸ್ಥಳಕ್ಕೆ ತೆರಳಿ ಪರಿಶೀಲಿಸಲಾಗಿದೆ. ಪರಿಹಾರ ವಿತರಣೆಗಾಗಿ ಹಿರಿಯ ಅಧಿಕಾರಿಗಳಿಗೆ ವರದಿ ನೀಡಲಾಗಿದೆ.
ರಘುವೀರ್, ಕೃಷಿ ಅಧಿಕಾರಿ ಹನೂರು