

ಕಾಸರಗೋಡು: ಅಮಾನ್ಯಗೊಳಿಸಲ್ಪಟ್ಟಿರುವ 1 ಸಾವಿರ ರೂ. ಮುಖಬೆಲೆಯ ನೋಟುಗಳನ್ನು ಬದಲಾಯಿಸಿ ನೀಡುವ ಸಂಸ್ಥೆಯೊಂದು ಕಾರ್ಯಾಚರಿಸುತ್ತಿದ್ದು, ಈ ಸಂಸ್ಥೆಗೆ ಅಮಾನ್ಯ ನೋಟುಗಳನ್ನು ನೀಡಿದಲ್ಲಿ ಕೋಟ್ಯಂತರ ರೂ.ಲಾಭದ ಆಮಿಷವೊಡ್ಡಿ 57 ಲಕ್ಷ ರೂ. ಪಡದು ವಂಚನೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿ ಪಳ್ಳಿಕೆರೆ ಹದಾದ್‌ನಗರ ನಿವಾಸಿ ಸಮೀರ್, ಕೋಟಪಾರ ನಿವಾಸಿ ಶರೀಫ್, ಗಿರಿಕೈಲಾಸ್ ಸೇರಿದಂತೆ ಐದು ಮಂದಿ ವಿರುದ್ಧ ಬೇಕಲ ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.
ಪಳ್ಳಿಕೆರೆ ಮುಕ್ಕೋಟ್ ಕಾರಕುನ್ನು ನಿವಾಸಿ ಇಬ್ರಾಹಿಂ ಬಾದುಷಾ ಎಂಬುವರ ದೂರಿನ ಮೇರೆಗೆ ಕೇಸ್ ದಾಖಲಾಗಿದೆ. 2023 ಜ.15ರಿಂದ 2023ರ ಆ.30ರ ವರೆಗೆ ಲಾಭದ ಭರವಸೆ ನೀಡಿ, ತನ್ನಿಂದ ಹಣ ಪಡೆದು ವಂಚಿಸಿರುವುದಾಗಿ ಪೊಲಿಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಶರೀಫ್ ವಶದಲ್ಲಿ ಒಂದು ಸಾವಿರ ರೂ. ಮುಖಬೆಲೆಯ 125 ಕೋಟಿ ರೂ. ಇದ್ದು, ದೆಹಲಿಯ ಸಂಸ್ಥೆಯೊಂದು ಈ ಮೊತ್ತ ಪಡೆದು ಅದರ ಶೇ. 60ರಷ್ಟು ಹಣ ಪಾವತಿಸುತ್ತದೆ. ಹಣ ಪಡೆದುಕೊಳ್ಳಲು ಸಂಸ್ಥೆ ಸಿಬ್ಬಂದಿ ತಮ್ಮ ವಾಹನದೊಂದಿಗೆ ಇಲ್ಲಿಗೆ ಆಗಮಿಸುತ್ತಾರೆ. ಇದಕ್ಕೆ ಮುಂಗಡವಾಗಿ 15 ಲಕ್ಷ ರೂ. ಪಾವತಿಸಬೇಕಾಗುತ್ತದೆ ಎಂದು ಸಮೀರ್ ತಿಳಿಸಿದ್ದಾನೆ. ಕೇಂದ್ರ ಸಚಿವರೊಬ್ಬರ ಪುತ್ರ ಸಂಸ್ಥೆಯೊಂದಿಗೆ ನಂಟು ಹೊಂದಿದ್ದಾನೆ. ಹಿಂದಿ ಭಾಷೆಯಲ್ಲಿ ಮಾತನಾಡುವ ಕೆಲವರು ವಾಹನದಲ್ಲಿ ಆಗಮಿಸಿ ಅಮಾನ್ಯ ನೋಟು ಸ್ವೀಕರಿಸುವ ವೀಡಿಯೋ ಚಿತ್ರೀಕರಣವನ್ನೂ ತೋರಿಸಿ ಭರವಸೆ ಹುಟ್ಟಿಸಿ, 57 ಲಕ್ಷ ರೂ. ತನ್ನಿಂದ ಪಡೆದು ವಂಚಿಸಿರುವುದಾಗಿ ಇಬ್ರಾಹಿಂ ಬಾದುಷಾ ದೂರಿನಲ್ಲಿ ತಿಳಿಸಿದ್ದಾರೆ.