ಶಕ್ತಿ ಯೋಜನೆಯಡಿ 554 ಕೋಟಿ ಮಹಿಳೆಯರಿಂದ ಪ್ರಯಾಣ

kdr1 (15)
Published on

ಕಡೂರು: ರಾಜ್ಯದ ಗ್ಯಾರಂಟಿ ಶಕ್ತಿ ಯೋಜನೆಯಡಿ 554 ಕೋಟಿ ಮಹಿಳೆಯರು ಉಚಿತ ಪ್ರಯಾಣದಿಂದ ದೊಡ್ಡ ನಗರಗಳಲ್ಲಿ ಉದ್ಯೋಗವಕಾಶ ಸೃಷ್ಟಿಗೆ ಅವಕಾಶ ಕಲ್ಪಿಸಿದಂತಾಗಿದೆ ಎಂದು ಸಾರಿಗೆ ಮತ್ತು ಮುಜರಾಯಿ ಇಲಾಖೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದರು.

ಪಟ್ಟಣದ ಸಾರಿಗೆ ಬಸ್ ನಿಲ್ದಾಣದಲ್ಲಿ ಸುಮಾರು 12ಕೋಟಿ ವೆಚ್ಚದ ನೂತನ ಸಾರಿಗೆ ಬಸ್‌ನಿಲ್ದಾಣ ನಿರ್ಮಾಣದ ಶಂಕುಸ್ಥಾಪನೆ ಮತ್ತು ನಿರ್ಮಾಣಗೊಂಡ ವಸತಿಗೃಹಗಳ ಉದ್ಘಾಟನಾ ಕಾರ್ಯಕ್ರಮ ನೆರವೇರಿಸಿ ಮಾತನಾಡಿ, ರಾಜ್ಯ ಸರ್ಕಾರ ಅನುಷ್ಠಾನಗೊಳಿಸಿದ ಗ್ಯಾರಂಟಿ ಯೋಜನೆಗಳ ಪೈಕಿ ಪ್ರಥಮವಾಗಿ ಕಾರ್ಯರೂಪಕ್ಕೆ ತಂದ ಶಕ್ತಿ ಯೋಜನೆಯಡಿ ಉಚಿತ ಪ್ರಯಾಣದಿಂದ ರಾಜ್ಯದ ಮಹಿಳೆಯರಿಗೆ ಹೆಚ್ಚು ಅನುಕೂಲವಾಗಿದ್ದು, ಇದುವರೆಗೂ ಮಹಿಳೆಯರ ಪ್ರಯಾಣದಿಂದ 14 ಸಾವಿರ ಕೋಟಿ ರೂ. ಹಣವನ್ನು ಸರ್ಕಾರವೇ ನಿಗಮಕ್ಕೆ ಭರಿಸಿದೆ ಎಂದರು.

ಈಗಾಗಲೇ ನೂತನ ಬಸ್‌ಗಳ ಖರೀದಿ ಪ್ರಕ್ರಿಯೆ ನಡೆಸಲಾಗಿದೆ. ಕೊರತೆ ಇರುವ ಭಾಗಗಳಿಗೆ ಸಂಚರಿಸಲು 300 ಬಸ್‌ಗಳನ್ನು ತೆಗೆದುಕೊಳ್ಳಲು ಟೆಂಡರ್ ಪ್ರಕ್ರಿಯೆ ನಡೆಸಲಾಗಿದೆ. ಬೆಂಗಳೂರು, ಹುಬ್ಬಳ್ಳಿ ಸೇರಿದಂತೆ ಇತರೆ ದೊಡ್ಡ ದೊಡ್ಡ ನಗರಗಳಲ್ಲಿ ಮಹಿಳೆಯರ ಪ್ರಯಾಣದಿಂದ ಕೈಗಾರಿಕಾ ವಲಯಗಳು ಸ್ಥಾಪನೆಗೊಳ್ಳುತ್ತಿವೆ. ಇದರಿಂದ ಗ್ಯಾರಂಟಿ ಯೋಜನೆಗಳಿಗೂ ಹೆಚ್ಚು ವರದಾನವಾಗುತ್ತಿದೆ. ಕಳೆದ 4ವರ್ಷದ ಹಿಂದೆ ಸಾರಿಗೆ ನಿಗಮದಲ್ಲಿದ್ದ ಸಮಸ್ಯೆಗಳನ್ನು ಹಂತ ಹಂತವಾಗಿ ನಿವಾರಿಸಿಕೊಳ್ಳಲಾಗುತ್ತಿದೆ ಎಂದರು.

ಹಾಸನ ಸಂಸದ ಶ್ರೇಯಸ್ ಪಟೇಲ್, ಕೆಎಸ್‌ಆರ್‌ಟಿಸಿ ಮಾಹಿತಿ ತಂತ್ರಜ್ಞಾನ ವಿಭಾಗದ ನಿರ್ದೇಶಕ ಇಬ್ರಾಹಿಂ ಮೈಗೂರ, ಗ್ಯಾರಂಟಿ ಸಮಿತಿ ಅಧ್ಯಕ್ಷ ಆಸಂದಿ ಕಲ್ಲೇಶ್, ಪುರಸಭೆ ಸದಸ್ಯ ತೋಟದಮನೆ ಮೋಹನ್‌ಕುಮಾರ್, ಮರುಗುದ್ದಿಮನು, ಶ್ರೀಕಾಂತ್, ಇಕ್ಬಾಲ್, ಸೋಮಶೇಖರ್, ಮೋಹನ್‌ನಾಯ್ಕ, ಗುಮ್ಮನಹಳ್ಳಿ ಅಶೋಕ್, ಬಾಸೂರು ಚಂದ್ರಮೌಳಿ, ಮಂಜುನಾಥ್, ವಿಭಾಗೀಯ ಅಧಿಕಾರಿ ಎಚ್.ಕೆ. ಚನ್ನಬಸಪ್ಪ, ಕಡೂರು ಡಿಪೋ ವ್ಯವಸ್ಥಾಪಕಿ ಅರುಣಕುಮಾರಿ, ಜಾವಗಲ್ ಪ್ರಸನ್ನ ಮತ್ತಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net