542 ಕಂದಾಯ ಹೊಸ ಗ್ರಾಮ

2
ತುಮಕೂರಿನಲ್ಲಿ ನೂತನ ಕಂದಾಯ ಗ್ರಾಮಗಳ ಫಲಾನುಭವಿಗಳಿಗೆ ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ಹಕ್ಕುಪತ್ರ ವಿತರಿಸಲಾಯಿತು. ಡಾ.ಕೆ.ವಿದ್ಯಾಕುಮಾರಿ, ರಾಹುಲ್‌ಕುಮಾರ್, ಸುಜಯ್ ಕುಮಾರ್ ಇದ್ದರು.
Published on

ತುಮಕೂರು: ಜಿಪಂ ಕಚೇರಿ ಸಭಾಂಗಣದಲ್ಲಿ ಸೋಮವಾರ ಕಂದಾಯ ಇಲಾಖೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಜಿಲ್ಲೆಯ 542 ಹೊಸ ಕಂದಾಯ ಗ್ರಾಮಗಳ 7000 ಫಲಾನುಭವಿಗಳಿಗೆ ಜಿಲ್ಲಾಡಳಿತದಿಂದ ಹಕ್ಕುಪತ್ರ ವಿತರಿಸಲಾಯಿತು.

ಹೊಸದಾಗಿ ರಚಿಸಿರುವ ಕಂದಾಯ ಗ್ರಾಮಗಳು ಈ ಹಿಂದೆ ಹಟ್ಟಿ, ತಂಡಾಗಳಾಗಿದ್ದವು. ಆ ಗ್ರಾಮಗಳಿಗೆ ಹೆಸರು ಇರಲಿಲ್ಲ. ಸರ್ಕಾರದ ಅಧಿನಿಯಮಗಳಡಿ ಸದರಿ ಗ್ರಾಮಗಳಿಗೆ ಹೆಸರು ನೀಡಿ ಆ ನಿವಾಸಿಗಳಿಗೆ ಜಾಗದ ಹಕ್ಕನ್ನು ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ಹೇಳಿದರು.

ಸರ್ಕಾರದಿಂದ ಕಾಲಕಾಲಕ್ಕೆ ಗ್ರಾಮಗಳ ಅಭಿವೃದ್ಧಿಗಾಗಿ ಬಿಡುಗಡೆಯಾಗುತ್ತಿದ್ದ ಅನುದಾನದ ಸೌಲಭ್ಯ ಮುಖ್ಯ ಗ್ರಾಮಗಳಿಗೆ ವಿನಿಯೋಗವಾಗುತ್ತಿತ್ತು. ಹಟ್ಟಿ, ತಾಂಡಾಗಳು ಈ ಅನುದಾನದಿಂದ ವಂಚಿತವಾಗುತ್ತಿದ್ದವು. ಇದನ್ನು ಮನಗಂಡ ಸರ್ಕಾರ ಹಟ್ಟಿ, ತಾಂಡಾ, ಹಾಡಿಗಳಂತಹ ಜನವಸತಿಗಳನ್ನು ಪರಿವರ್ತಿಸಿ ಹೊಸ ಕಂದಾಯ ಗ್ರಾಮಗಳೆಂದು ಘೋಷಿಸಲು ಅಧಿನಿಯಮ ರೂಪಿಸಿ ಫಲಾನುಭವಿಗಳಿಗೆ ತಮ್ಮ ಮನೆಯ ಹಕ್ಕನ್ನು ನೀಡುವ ಮೂಲಕ ನೆಮ್ಮದಿಯಾಗಿ ಬದುಕಲು ಅವಕಾಶ ಮಾಡಿಕೊಟ್ಟಿದೆ ಎಂದರು.

ಹೊಸದಾಗಿ ರಚನೆಯಾದ ಕಂದಾಯ ಗ್ರಾಮಗಳ ಅಭಿವೃದ್ಧಿಗೆ ಮುಂಬರುವ ದಿನಗಳಲ್ಲಿ ಪ್ರತ್ಯೇಕ ಅನುದಾನ ಒದಗಿಸಲಾಗುವುದು. ಹೊಸ ಕಂದಾಯ ಗ್ರಾಮಗಳಲ್ಲಿ ರಸ್ತೆ, ಶಾಲೆ, ಅಂಗನವಾಡಿ, ಚರಂಡಿ ನಿರ್ಮಾಣದಂತಹ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲು ಸಂಬಂಧಿಸಿದ ಗ್ರಾಪಂಗಳಲ್ಲಿ ತಮ್ಮ ಹಕ್ಕನ್ನು ಕೇಳಲು ಫಲಾನುಭವಿಗಳಿಗೆ ಆವಕಾಶ ನೀಡಲಾಗಿದೆ ಎಂದರು.

ಭೂದಾಖಲೆಗಳ ಇಲಾಖೆ ಉಪನಿರ್ದೇಶಕ ಸುಜಯ್ ಕುಮಾರ್ ಮಾತನಾಡಿ, ರಾಜ್ಯದಲ್ಲಿ ಏಕಕಾಲಕ್ಕೆ ಈ ಹಕ್ಕುಪತ್ರ ವಿತರಣೆ ಮಾಡಲಾಗುತ್ತಿದೆ. ನನ್ನ ಗ್ರಾಮ ನನ್ನ ಹಕ್ಕು ಎಂಬ ಗಾಂಧೀಜಿ ಅವರ ಅಂತರಂಗದ ದನಿಯಂತೆ ಬೇಚರಕ್ ಗ್ರಾಮಗಳನ್ನು ಒಂದು ಕಡೆ ಕಟ್ಟಿ ಕಂದಾಯ ಎಲ್ಲೆಯನ್ನು ಗುರುತಿಸಿ ಹಕ್ಕು ಪತ್ರ ನೀಡಲಾಗುತ್ತಿದೆ ಎಂದರು.
170 ಫಲಾನುಭವಿಗಳಿಗೆ ಹಕ್ಕು ಪತ್ರಗಳನ್ನು ವಿತರಿಸಲಾಗಿದ್ದು, ಆದಿಲಕ್ಷ್ಮಮ್ಮ, ಸಾವಿತ್ರಮ್ಮ, ತಾಯಮ್ಮ, ಮೂಡ್ಲಪ್ಪ, ಮಂಜುನಾಥ, ರತ್ನಮ್ಮ, ರಾಜಣ್ಣ, ಓಂಕಾರಮ್ಮ, ಬೆಟ್ಟೇಗೌಡ, ಮಾಸ್ತಪ್ಪ, ಭೀಮಾನಾಯ್ಕ ಹಾಗೂ ಸುರೇಶ್ ನಾಯ್ಕ ಸೇರಿ 12 ಫಲಾನುಭವಿಗಳಿಗೆ ಸಾಂಕೇತಿಕವಾಗಿ ಹಕ್ಕುಪತ್ರ ವಿತರಿಸಲಾಯಿತು.
ಜಿಲ್ಲಾ ಪೊಲೀಸ್ ಅಧೀಕ್ಷಕ ರಾಹುಲ್ ಕುಮಾರ್ ಶಹಪೂರ್‌ವಾಡ್, ಅಪರ ಜಿಲ್ಲಾಧಿಕಾರಿ ಶಿವಾನಂದ ಬಿ.ಕರಾಳೆ, ಉಪವಿಭಾಗಾಧಿಕಾರಿ ಎಚ್.ಶಿವಪ್ಪ, ಉಪನ್ಯಾಸಕ ಕೃಷ್ಣಪ್ಪ ಇದ್ದರು.

ಸೂರಿನಿಂದ ಸುಸ್ಥಿರ ಊರಿನೆಡೆಗೆ: ಸೂರಿನಿಂದ ಸುಸ್ಥಿರ ಊರಿನೆಡೆಗೆ ಎಂಬ ಉದ್ದೇಶದಡಿ ಹೊಸ ಕಂದಾಯ ಗ್ರಾಮಗಳ ಜನವಸತಿಗಳಿಗೆ ಹಕ್ಕು ಪತ್ರ ನೀಡಲಾಗುತ್ತಿದೆ ಎಂದು ಜಿಪಂ ಸಿಇಒ ಡಾ.ಕೆ.ವಿದ್ಯಾಕುಮಾರಿ ತಿಳಿಸಿದರು. ಸುಮಾರು ವರ್ಷಗಳಿಂದ ಒಂದೇ ಸ್ಥಳದಲ್ಲಿ ವಾಸವಿದ್ದು, ತಮ್ಮ ಮನೆಗೆ ಸಂಬಂಧಿಸಿದ ಯಾವುದೇ ರೀತಿಯ ಹಕ್ಕು ಇಲ್ಲದವರಿಗೆ ಸರ್ಕಾರ ಹೊಸದಾಗಿ ಅಧಿನಿಯಮಗಳನ್ನು ರೂಪಿಸಿ ಖಾಸಗಿ ಜಮೀನಿದ್ದಲ್ಲಿ ಅದನ್ನು ಸರ್ಕಾರದ ವಶಕ್ಕೆ ಪಡೆದು ನಂತರ ಫಲಾನುಭವಿಗಳಿಗೆ ಹಕ್ಕು ಪತ್ರ ನೀಡಲಾಗುತ್ತಿದೆ ಎಂದರು.

ಜನವಸತಿಗಳಿಗೆ ಹಕ್ಕುಪತ್ರ: ಜಿಲ್ಲೆಯಲ್ಲಿ 2700 ಮೂಲ ಗ್ರಾಮಗಳಿದ್ದು, ಹೊಸದಾಗಿ ಗುರುತಿಸಿರುವ 542 ಕಂದಾಯ ಗ್ರಾಮಗಳ ಪೈಕಿ 268 ಗ್ರಾಮಗಳಲ್ಲಿ 2ಇ ಅಧಿಸೂಚನೆಯನ್ವಯ ಖಾಸಗಿ ಜಮೀನಿನಲ್ಲಿದ್ದ ಜನವಸತಿಗಳಿಗೆ ಹಕ್ಕುಪತ್ರ ನೀಡಲಾಗಿದೆ.
542ರ ಪೈಕಿ 447 ಕಂದಾಯ ಗ್ರಾಮಗಳಿಗೆ ಪ್ರಾಥಮಿಕ ಅಧಿಸೂಚನೆಯಾಗಿದ್ದು, 447 ಕಂದಾಯ ಗ್ರಾಮಗಳ ಪೈಕಿ 237 ಕಂದಾಯ ಗ್ರಾಮಗಳಿಗೆ ಅಂತಿಮ ಅಧಿಸೂಚನೆ ಹೊರಡಿಸಲಾಗಿದೆ.

ಪ್ರಸ್ತುತ ಮನೆಗಳಿರುವ ಜಾಗ ನಮ್ಮ ಹೆಸರಲ್ಲಿಲ್ಲ ಎನ್ನುವ ಆತಂಕಕ್ಕೊಳಗಾಗದೆ ಅನುಭವಿಸುವ ಹಕ್ಕನ್ನು ನೀಡಲಾಗಿದೆ. ಈ ಹಕ್ಕುಪತ್ರ ಬ್ಯಾಂಕುಗಳಲ್ಲಿ ಅಡಮಾನವಿಟ್ಟು ಸಾಲ ಸೌಲಭ್ಯ ಪಡೆಯಲು ಅವಕಾಶವಿದೆ. ಹಕ್ಕುಪತ್ರಕ್ಕೆ ಸಂಬಂಧಿಸಿದಂತೆ ಯಾವುದೇ ತಕರಾರು, ಸಮಸ್ಯೆಗಳಿದ್ದರೆ ಆಯಾ ಗ್ರಾಮ ಲೆಕ್ಕಾಧಿಕಾರಿ ಅಥವಾ ತಹಸೀಲ್ದಾರ್
ಸಂಪರ್ಕಿಸಿ ಮಾಹಿತಿ ಪಡೆಯಬೇಕು.
| ವೈ.ಎಸ್.ಪಾಟೀಲ ಜಿಲ್ಲಾಧಿಕಾರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net