

ಶಿಡ್ಲಘಟ್ಟ: ನಗರಸಭೆಯ ಸಭಾಂಗಣದಲ್ಲಿ ಬುಧವಾರ ಕೈಗೊಂಡಿದ್ದ ಸಭೆಯಲ್ಲಿ 2022-23ನೇ ಸಾಲಿನ 54 ಲಕ್ಷ ರೂ. ಉಳಿತಾಯದ ಬಜೆಟ್ ಮಂಡನೆಗೆ ಅನುಮೋದನೆ ನೀಡಲಾಗಿದೆ.
ವಿವಿಧ ಮೂಲಗಳಿಂದ 30,62,72,500 ರೂ.ಗಳ ಆದಾಯ, ನಾನಾ ಅಭಿವೃದ್ಧಿ ಕೆಲಸಗಳಿಗೆ 30,06,69,000 ಅಂದಾಜು ಖರ್ಚಿನ ನಿರೀಕ್ಷೆ ಹೊಂದಲಾಗಿದೆ. 54,03,500 ರೂಪಾಯಿ ಉಳಿತಾಯ ಬಜೆಟ್ ಮಂಡಿಸಲಾಗಿದೆ.
ನಗರಸಭೆ ಅಧ್ಯಕ್ಷೆ ಸುಮಿತ್ರಾ ರಮೇಶ್ ಮಂಡಿಸಿದ ಬಜೆಟ್‌ಗೆ ನಾಲ್ಕೈದು ಸಲಹೆ ಹೊರತುಪಡಿಸಿದಂತೆ ಹೆಚ್ಚಿಗೆ ಚರ್ಚೆಯಾಗದೆ ಒಂದು ಗಂಟೆ ಅವಧಿಯೊಳಗೆ ಬಜೆಟ್ ಮಂಡನೆ ಸಭೆ ಮುಗಿಸಿ ಅನುಮೋದನೆ ಪಡೆಯಲಾಯಿತು. ಸಭೆಯಲ್ಲಿ ಉಪಾಧ್ಯಕ್ಷ ಬಿ.ಅಪ್ಸರ್‌ಪಾಷಾ, ಪೌರಾಯುಕ್ತ ಆರ್.ಶ್ರೀಕಾಂತ್ ಮತ್ತಿತರರು ಇದ್ದರು.
ಆದಾಯದ ನಿರೀಕ್ಷೆ: ಆಸ್ತಿ ತೆರಿಗೆಯಿಂದ ಅತಿ ಹೆಚ್ಚು 2.7 ಕೋಟಿ ರೂ. ಆದಾಯವನ್ನು ನಿರೀಕ್ಷಿಸಿದ್ದು, ಇನ್ನುಳಿದಂತೆ ನೀರಿನ ತೆರಿಗೆಯಿಂದ 50 ಲಕ್ಷ, ನಗರಸಭೆಯ ವಾಣಿಜ್ಯ ಮಳಿಗೆ, ಐಡಿಎಸ್‌ಎಂಟಿ ಮಳಿಗೆಗಳ ಬಾಡಿಗೆಗಳಿಂದ 25 ಲಕ್ಷ ಹಾಗೂ ಇತರ ಅಭಿವೃದ್ದಿ ಶುಲ್ಕದ ಮೂಲಕ 20 ಲಕ್ಷ ರೂ. ಆದಾಯವನ್ನು ನಿರೀಕ್ಷೆ ಹೊಂದಲಾಗಿದೆ. ಉದ್ದಿಮೆ ಪರವಾನಿಗೆಗೆ ವಿಧಿಸುವ ಶುಲ್ಕದ ಮೂಲಕ 25 ಲಕ್ಷ ರೂ, ಪ್ರತಿ ಖಾತೆ ಬದಲಾವಣೆ ಶುಲ್ಕ 18 ಲಕ್ಷ ರೂ, ಅನುಪಯುಕ್ತ ಮತ್ತು ದಾಸ್ತಾನು ಮಾರಾಟ 10 ಲಕ್ಷ ರೂ, ನೀರು ಸರಬರಾಜು ಮತ್ತು ಒಳ ಚರಂಡಿ ಸಂಪರ್ಕ ಶುಲ್ಕ 10 ಲಕ್ಷ ರೂ, ಸರ್ಕಾರದ ಎಸ್‌ಎಫ್‌ಸಿಎಸ್ ವಿಶೇಷ ಅನುದಾನದಡಿ 4 ಕೋಟಿ ರೂ., ನಗರೋತ್ಥಾನ ಯೋಜನೆಯಡಿ 30 ಕೋಟಿ ರೂ.ಗಳ ಅನುದಾನದ ನಿರೀಕ್ಷೆ ಹೊಂದಲಾಗಿದೆ. ಈಗಾಗಲೇ ನಗರೋತ್ಥಾನ ಯೋಜನೆಯಡಿ 30 ಕೋಟಿ ರೂ. ಬಿಡುಗಡೆಯಾಗಿದೆ. ಈ ಪೈಕಿ 25 ಕೋಟಿ ರೂ.ಗಳಿಗೆ ಕ್ರಿಯಾ ಯೋಜನೆ ರೂಪಿಸಲಾಗುತ್ತಿದೆ. 15ನೇ ಹಣಕಾಸು ಮೂಲ ಯೋಜನೆಯಡಿ 1.91 ಕೋಟಿ ರೂ. ಹಾಗೂ ಎಸ್‌ಎಫ್‌ಸಿಎಸ್‌ನ ಕುಡಿಯುವ ನೀರಿಗಾಗಿ 50 ಲಕ್ಷ ರೂ. ಅನುದಾನ ಸೇರಿ ನಾನಾ ರೂಪದ ಆದಾಯ ನಿರೀಕ್ಷಿಸಲಾಗಿದೆ.
ಖರ್ಚಿನ ನಿರೀಕ್ಷೆ: ಪ್ರಸಕ್ತ ವರ್ಷದಲ್ಲಿ ಕುಡಿಯುವ ನೀರಿನ ನಿರ್ವಹಣೆಗೆಂದು 1.72 ಕೋಟಿ ರೂ., ಘನತಾಜ್ಯ ಮತ್ತು ನೈರ್ಮಲ್ಯ ನಿರ್ವಹಣೆಗೆ 60 ಲಕ್ಷ ರೂ., ಬೀದಿ ದೀಪಗಳ ನಿರ್ವಹಣೆ, ಸಾಮಗ್ರಿಗಳ ಖರೀದಿ ಹಾಗೂ ಪ್ಯಾನಲ್ ಬೋರ್ಡ್‌ಗಳ ಅಳವಡಿಸಲು 80 ಲಕ್ಷ ರೂ., ರಸ್ತೆ ಚರಂಡಿ ನಿರ್ಮಾಣ ಸೇರಿ ಮೂಲ ಸೌಕರ್ಯ ಅಭಿವೃದ್ಧಿಗಾಗಿ 1 ಕೋಟಿ ರೂ. ಮೀಸಲಿಡಲಾಗಿದೆ. ವರ್ಗವಾರು ಪೈಕಿ ಪರಿಶಿಷ್ಟ ಜಾತಿಗೆ 4.37 ಕೋಟಿ ರೂ., ಪರಿಶಿಷ್ಟ ಪಂಗಡಕ್ಕೆ 1.77 ಕೋಟಿ ರೂ., ಶೇ.7.25ಕ್ಕೆ 1.84 ಕೋಟಿ ರೂ., ಶೇ.5 ಯೋಜನೆಯಡಿ 1.27 ಕೋಟಿ ರೂ. ಹಾಗೂ ಇತರ ಅಭಿವೃದ್ಧಿ ಕೆಲಸಗಳಿಗೆ 16.23 ಕೋಟಿ ರೂ. ಮೀಸಲು ಇಡಲಾಗಿದೆ.
ಸಭೆಯಲ್ಲಿ ಉಪಾಧ್ಯಕ್ಷ ಬಿ.ಅಪ್ಸರ್‌ಪಾಷಾ, ಪೌರಾಯುಕ್ತ ಆರ್.ಶ್ರೀಕಾಂತ್ ಮತ್ತಿತರರು ಇದ್ದರು.