ಅರಣ್ಯ ಭೂಮಿ ಒತ್ತುವರಿ ತೆರವು

chn
Published on

ಚನ್ನಗಿರಿ: ಬೆಂಗಳೂರು ಭೂ ಕಬಳಿಕೆ ನಿಷೇಧ ನ್ಯಾಯಾಲಯದ ಆದೇಶದಂತೆ ಚನ್ನಗಿರಿ ತಾಲೂಕು ಶೃಂಗಾರಬಾಗು ಗ್ರಾಮದ ಬಳಿಯ ಅರಣ್ಯ ವ್ಯಾಪ್ತಿಯ ಕಂಚುಗಾರತಿಕಟ್ಟೆಯ ಸರ್ವೇ ನಂ. 16ರ 54 ಎಕರೆ ಒತ್ತುವರಿಯನ್ನು ಇಲಾಖೆ ಸಿಬ್ಬಂದಿ ಶುಕ್ರವಾರ ಜೆಸಿಬಿಯೊಂದಿಗೆ ತೆರವುಗೊಳಿಸಿ, ಟ್ರಂಚ್ ಹೊಡೆಸಿ ಹದ್ದುಬಸ್ತ್ ಮಾಡಿದರು.

ಉಪ ಅರಣ್ಯ ಸಂರಕ್ಷಣಾಧಿಕಾರಿ, ಮಾವಿನ ಕಟ್ಟೆ ಅರಣ್ಯಾಧಿಕಾರಿ ಸೇರಿ 15 ಸಿಬ್ಬಂದಿ ಜೆಸಿಬಿಯೊಂದಿಗೆ ಬೆಳಗ್ಗೆ ಸ್ಥಳಕ್ಕೆ ತೆರಳಿ, ಕಾರ್ಯಾಚರಣೆ ನಡೆಸಿದರು.

ಅನೇಕ ವರ್ಷಗಳಿಂದ ಜಮೀನು ಮಾಡಿಕೊಂಡು ಉಳುಮೆ ಮಾಡುವಂಥ ಜಮೀನಿನ ಮಾಲೀಕರು ತೆರವುಗೊಳಿಸಲು ಅಡ್ಡಿಪಡಿಸಿದರು. ಅಧಿಕಾರಿಗಳು ನ್ಯಾಯಾಲಯದ ಆದೇಶದ ಪ್ರತಿ ತೋರಿಸಿದ ನಂತರ ಸುಮ್ಮನಾದರು.

ಸರ್ವೇ ನಂ. 16ರ 54 ಎಕರೆ ಪ್ರದೇಶವನ್ನು ಶೃಂಗಾರಬಾಗು ಗ್ರಾಮದ ಹನುಮಂತಪ್ಪ, ಕುಬೇಂದ್ರಪ್ಪ, ಅಜ್ಜಪ್ಪ, ಈರಪ್ಪ, ಮಾರುತಿ, ನಾಗಮ್ಮ, ಗುಡ್ಡಳ್ಳಿ ಹನುಂಮತಪ್ಪ, ಹಾಲೇಶ್‌ನಾಯ್ಕ, ಅನಿಲ್‌ಕುಮಾರ್, ಕುಬ್ಯಾನಾಯ್ಕ, ರವಿ, ಪರಸಪ್ಪ, ಮಲ್ಲಪ್ಪ, ರೇಣುಕಮ್ಮ, ತಿಮ್ಮಬೋವಿ, ನಾಗರಾಜ್ ಸೇರಿ 17 ಜನರು ಅನೇಕ ವರ್ಷಗಳಿಂದ ಸಾಗುವಳಿ ಮಾಡಿಕೊಂಡು ಬಂದಿದ್ದರು. ಜಮೀನು ಸಾಗುವಳಿದಾರರು ದಾಖಲೆ ನೀಡುವಂತೆ ಅರಣ್ಯ ಇಲಾಖೆ ನೋಟಿಸ್ ನೀಡಿತ್ತು. ಅದಕ್ಕೆ ಯಾರೊಬ್ಬರೂ ಉತ್ತರ ನೀಡಿರಲಿಲ್ಲ.

54 ಎಕರೆ ಜಮೀನು ಅರಣ್ಯ ಭೂಮಿಗೆ ಸೇರಿದ ಕಾರಣ ಸುಮೋಟೋ ಪ್ರಕರಣ ದಾಖಲಾಗಿತ್ತು. ಇಲಾಖೆಯವರು ಕಳೆದ ಒಂದು ವರ್ಷದಿಂದ ತೆರವುಗೊಳಿಸುವಂತೆ ನೋಟಿಸ್ ನೀಡಿ ಮನವಿ ಮಾಡಿದ್ದರು. ಇಂದು ನಡೆದ ಕಾರ್ಯಾಚರಣೆ ವೇಳೆ ಮಾಲೀಕರು ಅಡ್ಡಿಪಡಿಸಲು ಮುಂದಾದಾಗ ಅವರ ಮನವೊಲಿಸಲಾಯಿತು.

ಜಮೀನು ಸಾಗುವಳಿದಾರ ಹನುಮಂತಪ್ಪ ಮಾತನಾಡಿ, ಅನೇಕ ವರ್ಷಗಳಿಂದ ಭೂಮಿಯನ್ನು ಉಳುಮೆ ಮಾಡಿಕೊಂಡು ಜೀವನ ಸಾಗಿಸುತ್ತಿದ್ದೇವೆ. ಇರುವಂಥ ಜಮೀನನ್ನು ಇಲಾಖೆಯವರು ಕಾನೂನು ಮುಂದೆ ಇಟ್ಟು ಕಸಿದುಕೊಂಡರೆ ಎಲ್ಲರೂ ವಿಷ ಕುಡಿಯಬೇಕಾಗುತ್ತದೆ. ಇಷ್ಟು ವರ್ಷ ಇಲ್ಲದ ತೆರವುಕಾರ್ಯ ಇಂದು ಏಕೆ? ಎಂದು ಪ್ರಶ್ನಿಸಿದರು.
ಕಾರ್ಯಾಚರಣೆ ವೇಳೆ ಎಸಿಎಫ್ ರತ್ನಪ್ರಭಾ, ಮಾವಿನಕಟ್ಟೆ ವಲಯ ಅರಣ್ಯಾಧಿಕಾರಿ ಜಗದೀಶ್, ಸಿಬ್ಬಂದಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net