

ಚನ್ನಗಿರಿ: ಬಹುಜನ್ಮದ ಪುಣ್ಯದ ಫಲದಿಂದ ಮಾನವ ಜೀವನ ಪ್ರಾಪ್ತವಾಗಿದೆ. ನಾವು ಅರಿವು, ಆದರ್ಶಗಳನ್ನು ಪಡೆದು ಬಾಳಬೇಕು. ಜೀವನ ಶಾಶ್ವತವಲ್ಲ ಮಾಡಿದ ಸತ್ಕಾರ್ಯಗಳು ಶಾಶ್ವತ ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಪೀಠದ ಜಗದ್ಗುರು ಪ್ರಸನ್ನ ರೇಣುಕ ಡಾ.ವೀರಸೋಮೇಶ್ವರ ರಾಜದೇಶಿಕೇಂದ್ರ ಶ್ರೀಗಳು ತಿಳಿಸಿದರು.
ತಾಲೂಕಿನ ತಾವರೆಕೆರೆ ಶಿಲಾಮಠದಲ್ಲಿ ಭಾನುವಾರ ಲಿಂ.ಶ್ರೀ ಸಿದ್ಧಲಿಂಗ ಶಿವಾಚಾರ್ಯರ 53ನೇ ವಾರ್ಷಿಕ ಪುಣ್ಯಸ್ಮರಣೆ ಮಹೋತ್ಸವ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಮನುಷ್ಯನಲ್ಲಿ ಅರಿವು ಮತ್ತು ಮರೆವು ಎರಡು ಇದೆ. ಅರಿವನ್ನು ಜಾಗೃತಗೊಳಿಸುವ ಶಕ್ತಿ ಶ್ರೀ ಗುರುವಿಗಿದೆ. ಸಮಾಜದಲ್ಲಿನ ಸರಿ ತಪ್ಪುಗಳನ್ನು ತಿದ್ದಿ ಮುನ್ನಡೆಸುವುದೇ ಗುರುವಿನ ಪರಮ ಕರ್ತವ್ಯ. ಹಣತೆ ತನಗಾಗಿ ಉರಿಯುವುದಿಲ್ಲ, ಪರರಿಗೆ ಬೆಳಕು ಕೊಡುವಂತೆ ಶ್ರೀಗುರು ನಂಬಿದ ಭಕ್ತನ ಬಾಳನ್ನು ಬೆಳಗಿಸಲು ಸದಾ ಶ್ರಮಿಸುತ್ತಾನೆ. ಆರೋಗ್ಯಪೂರ್ಣ ಸಮಾಜ ನಿರ್ಮಾಣಕ್ಕೆ ಆಹಾರ, ಆರೋಗ್ಯ ಮತ್ತು ಆಧ್ಯಾತ್ಮ ಚಿಂತನೆ ಬಹಳ ಮುಖ್ಯ ಎಂದರು.
ಎಡೆಯೂರು ಕ್ಷೇತ್ರ ರೇಣುಕಾ ಶಿವಾಚಾರ್ಯ ಸ್ವಾಮಿಗಳು ಮಾತನಾಡಿದರು. ಕಾರ್ಯಕ್ರಮ ಉದ್ಘಾಟಿಸಿದ ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರಸ್ವಾಮಿ ಮಾತನಾಡಿ, ಸಮಾಜಕ್ಕೆ ವೀರಶೈವ ಪೀಠ,ಮಠಗಳ ಕೊಡುಗೆ ಅಪಾರ. ಶಿಕ್ಷಣ ಮತ್ತು ಸಂಸ್ಕಾರ ಕೊಟ್ಟ ಕೀರ್ತಿ ಮಠಗಳಿಗೆ ಸಲ್ಲುತ್ತದೆ. ಶಿವಪಥವನರಿವೊಡೆ ಗುರುಪಥವೇ ಮೊದಲು ಎಂಬುದನ್ನು ಮರೆಯಬಾರದು. ಶಿಲಾಮಠದ ಲಿಂ. ಸಿದ್ಧಲಿಂಗ ಶಿವಾಚಾರ್ಯರ ಮತ್ತು ಲಿಂ. ಚಂದ್ರಶೇಖರ ಶ್ರೀಗಳ ಚಿಂತನಗಳು ಸಮಾಜಕ್ಕೆ ದಾರಿದೀಪವಾಗಿದೆ ಎಂದರು.
ಮಾಜಿ ಶಾಸಕ ಮಾಡಳು ವಿರೂಪಾಕ್ಷಪ್ಪ ಮಾತನಾಡಿದರು. ಕೆೆ. ಬಿದರೆ ದೊಡ್ಡಮಠದ ಪ್ರಭುಕುಮಾರ ಶಿವಾಚಾರ್ಯ ಶ್ರೀ, ಚಿಕ್ಕಮಗಳೂರಿನ ಚಂದ್ರಶೇಖರ ಶಿವಾಚಾರ್ಯ ಶ್ರೀ, ತೆಂಡೇಕೆರೆ ಗಂಗಾಧರ ಶಿವಾಚಾರ್ಯ ಶ್ರೀ, ಹುಲಿಕೆರೆ ದೊಡ್ಡಮಠದ ಮಲ್ಲಿಕಾರ್ಜುನ ಪಂಡಿತಾರಾಧ್ಯ ಶಿವಾಚಾರ್ಯಶ್ರೀ, ಹಾರನಹಳ್ಳಿ ಶಿವಯೋಗಿ ಶಿವಾಚಾರ್ಯಶ್ರೀ, ಚನ್ನಗಿರಿ ಹಿರೇಮಠದ ಕೇದಾರಲಿಂಗ ಶಿವಶಾಂತವೀರ ಶ್ರೀಗಳು, ತಾವರೆಕೆರೆ ಶಿಲಾಮಠದ ಡಾ.ಅಭಿನವ ಸಿದ್ಧಲಿಂಗ ಶಿವಾಚಾರ್ಯ ಶ್ರೀಗಳು, ಬಿಳಕಿ ಹಿರೇಮಠ ರಾಚೋಟೇಶ್ವರ ಶಿವಾಚಾರ್ಯಶ್ರೀ ಇದ್ದರು.