536 ಅರ್ಹರಿಗೆ ಆಶ್ರಯ ಮನೆ ಹಂಚಿಕೆ

22-RNR-03
Published on

ರಾಣೆಬೆನ್ನೂರ: ಕೋವಿಡ್​ನಿಂದ ರಾಜ್ಯ ಸಾಕಷ್ಟು ಆರ್ಥಿಕ ಸಂಕಷ್ಟದಲ್ಲಿದ್ದರೂ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರು ಸ್ಥಳೀಯ ವಿಧಾನಸಭೆ ಕ್ಷೇತ್ರದ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಿ 5 ಕೋಟಿ ರೂ. ಅನುದಾನ ಬಿಡುಗಡೆ ಮಾಡಿದ್ದಾರೆ ಎಂದು ಶಾಸಕ ಅರುಣಕುಮಾರ ಪೂಜಾರ ಹೇಳಿದರು.

ನಗರದ ವಿವಿಧ ವಾರ್ಡ್​ಗಳಲ್ಲಿ ರಸ್ತೆ ನಿರ್ಮಾಣ ಸೇರಿ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಶನಿವಾರ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು. ಜನರ ಅನುಕೂಲಕ್ಕಾಗಿ ಭೂಮಿಪೂಜೆ ನೆರವೇರಿಸಿದ ಎಲ್ಲ ಕಡೆಗಳಲ್ಲಿಯೂ ಶೀಘ್ರ ಕಾಮಗಾರಿ ಪ್ರಾರಂಭಿಸಲಾಗುವುದು. ನಗರದಲ್ಲಿ ಸ್ಲಂ ನಿವಾಸಿಗಳಿಗೂ ಸರ್ಕಾರದಿಂದ ಮನೆಗಳನ್ನು ನಿರ್ವಿುಸಿ ಕೊಡಲಾಗುವುದು. ನಗರದ ಅಡವಿ ಆಂಜನೇಯ ಬಡಾವಣೆಯಲ್ಲಿ ನಿರ್ವಿುಸಲಾಗಿರುವ 536 ಆಶ್ರಯ ಮನೆಗಳನ್ನು ಶೀಘ್ರದಲ್ಲಿಯೇ ಅರ್ಹ ಫಲಾನುಭವಿಗಳಿಗೆ ಹಂಚಿಕೆ ಮಾಡಲಾಗುವುದು ಎಂದರು.

ಅಡವಿ ಆಂಜನೇಯ ಬಡಾವಣೆಗೆ ಸಂಪರ್ಕ ಕಲ್ಪಿಸುವ ಎಲ್ಲ ರಸ್ತೆಗಳನ್ನು ಅಭಿವೃದ್ಧಿಗೊಳಿಸಲಾಗುವುದು. ನಗರವನ್ನು ಸುಂದರಗೊಳಿಸಲು ಹೆಚ್ಚಿನ ಅನುದಾನ ತಂದು ಅಭಿವೃದ್ಧಿ ಕಾರ್ಯ ನಡೆಸಲಾಗುವುದು. ಇದಕ್ಕೆ ಜನರ ಸಹಕಾರ ಅತೀ ಮುಖ್ಯವಾಗಿದೆ. ಸಿಎಂ ಯಡಿಯೂರಪ್ಪ ಅವರು ತಾಲೂಕಿನ ಅಭಿವೃದ್ಧಿಗೆ ಇನ್ನೂ ಹೆಚ್ಚಿನ ಅನುದಾನ ನೀಡುವ ಭರವಸೆ ನೀಡಿದ್ದಾರೆ ಎಂದರು.

ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಚೋಳಪ್ಪ ಕಸವಾಳ, ನಗರಸಭೆ ಅಧ್ಯಕ್ಷೆ ರೂಪಾ ಚಿನ್ನಿಕಟ್ಟಿ, ಉಪಾಧ್ಯಕ್ಷೆ ಕಸ್ತೂರಿ ಚಿಕ್ಕಬಿದರಿ, ಸದಸ್ಯರಾದ ನಾಗರಾಜ ಅಡ್ಮನಿ, ಪ್ರಕಾಶ ಬುರಡಿಕಟ್ಟಿ, ಮಲ್ಲಿಕಾರ್ಜುನ ಅಂಗಡಿ, ಪ್ರಕಾಶ ಪೂಜಾರ, ಪಿಎಲ್​ಡಿ ಬ್ಯಾಂಕ್ ನಿರ್ದೇಶಕ ಚಂದ್ರು ರೊಡ್ಡನವರ, ನಗರಸಭೆ ಆಯುಕ್ತ ಡಾ. ಎನ್. ಮಹಾಂತೇಶ, ರಾಘವೇಂದ್ರ ಚಿನ್ನಿಕಟ್ಟಿ, ದೀಪಕ ಹರಪನಹಳ್ಳಿ, ಭಾರತಿ ಅಳವಂಡಿ, ರಮೇಶ ಗುತ್ತಲ, ರಾಘು ಕುಲಕರ್ಣಿ, ಮಂಜುನಾಥ ಕಾಟಿ, ಅನಿಲ್ ಸಿದ್ದಾಳಿ ಇತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net