53 ಪಿಒಪಿ ಗಣೇಶ ಮೂರ್ತಿ ವಶ

POP Ganesh
Published on

ಹುಬ್ಬಳ್ಳಿ: ಇಲ್ಲಿನ ನೇಕಾರನಗರ ಗಣೇಶ ಕಾಲನಿ ಶ್ರೀ ವೀರಭದ್ರೇಶ್ವರ ದೇವಸ್ಥಾನದ ಬಳಿ ಅನಧಿಕೃತವಾಗಿ ಮಾರಾಟ ಮಾಡಲಾಗುತ್ತಿದ್ದ 53 ಪಿಒಪಿ (ಪ್ಲಾಸ್ಟರ್ ಆಫ್ ಪ್ಯಾರಿಸ್) ಗಣಪತಿ ಮೂರ್ತಿಗಳನ್ನು ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಅಧಿಕಾರಿಗಳು ಮಂಗಳವಾರ ವಶಕ್ಕೆ ಪಡೆದಿದ್ದಾರೆ. ಪರಿಸರಕ್ಕೆ ಹಾನಿ ಉಂಟು ಮಾಡುವ ಕಾರಣಕ್ಕೆ ಪಿಒಪಿ ಗಣಪತಿ ಮೂರ್ತಿಗಳ ಮಾರಾಟ, ಸಾಗಾಟ, ಬಳಕೆ ನಿಷೇಧಿಸಲಾಗಿದೆ. ನೇಕಾರನಗರದಲ್ಲಿ ನಿಷೇಧಿತ ಪಿಒಪಿ ಗಣಪತಿ ಮೂರ್ತಿಗಳನ್ನು ಮಾರಾಟ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿಗಳು ಹಾಗೂ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಅಧಿಕಾರಿ, ಸಿಬ್ಬಂದಿ ದಾಳಿ ಕಾರ್ಯಾಚರಣೆ ನಡೆಸಿದರು. ಅವು ಪಿಒಪಿ ಗಣಪತಿ ಮೂರ್ತಿಗಳು ಎಂಬುದನ್ನು ಖಚಿತಪಡಿಸಿಕೊಂಡ ಮೇಲೆ ವಶಕ್ಕೆ ಪಡೆದು ವ್ಯಾಪಾರ ಮಳಿಗೆಗೆ ಬೀಗ ಹಾಕಿದ್ದಾರೆ.

ಕಾರ್ಯಾಚರಣೆಯಲ್ಲಿ ಪಾಲಿಕೆಯ ಕಾರ್ಯನಿರ್ವಾಹಕ ಇಂಜಿನಿಯರ್ ಮಲ್ಲಿಕಾರ್ಜುನ ಬಿ.ಎಂ., ವಲಯ ಸಹಾಯಕ ಆಯುಕ್ತ ಮನೋಜ್ ಕುಮಾರ, ಪರಿಸರ ಇಂಜಿನಿಯರ್ ಯುವರಾಜ್, ಆರೋಗ್ಯ ನಿರೀಕ್ಷಕರಾದ ದೀಪಿಕಾ, ಭಜಂತ್ರಿ, ಮಂಜುನಾಥ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net