

ಸಾಗರ: ಸಾಗರದ ಐದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಶನಿವಾರ ಯಶಸ್ವಿಯಾಗಿ ಲೋಕ್ ಅದಾಲತ್ ನಡೆಯಿತು. ಒಟ್ಟು 1,350 ಪ್ರಕರಣಗಳು ರಾಜಿ ಸಂಧಾನದ ಮೂಲಕ ಇತ್ಯರ್ಥಗೊಂಡವು. ಇದರಲ್ಲಿ ಬ್ಯಾಂಕ್ ವ್ಯಾಜ್ಯಗಳು, ದಂಡಪಾವತಿ ಪ್ರಕರಣಗಳಿಗೆ ಸಂಬಂಧಿಸಿದಂತೆ ಕಂದಾಯ ವಿಭಾಗ ಹಾಗೂ ಸಣ್ಣ ಕೇಸುಗಳನ್ನು ಒಳಗೊಂಡಂತೆ ರಾಜಿ ಸಂಧಾನದ ಮೂಲಕ 53.69 ಲಕ್ಷ ರೂ. ವಸೂಲಾಯಿತು.
ಸೊರಬ ತಾಲೂಕಿನ ಜೀವನಾಂಶ ಪ್ರಕರಣದಲ್ಲಿ ನ್ಯಾಯಾಧೀಶರು ರಾಜಿ ಸಂಧಾನ ನಡೆಸಿ ಉಭಯೇತರರಿಗೂ ತಿಳಿವಳಿಕೆ ನೀಡಿ 7.5 ಲಕ್ಷ ರೂ.ಗಳ ಜೀವನಾಂಶವನ್ನು ಲಲಿತಮ್ಮ ಅವರಿಗೆ ಕೊಡಿಸಲಾಯಿತು. ಸಂಧಾನಕಾರರಾಗಿ ನ್ಯಾಯವಾದಿ ಸೀಮಾ ಕಾರ್ಯನಿರ್ವಹಿಸಿದರು, ಐದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶೆ ಜಿ.ಪ್ರಭಾವತಿ, ಪ್ರಧಾನ ಹಿರಿಯ ವ್ಯವಹಾರ ನ್ಯಾಯಾಧೀಶ ಎಸ್.ನಟರಾಜ್, ಪ್ರಧಾನ ವ್ಯವಹಾರ ನ್ಯಾಯಾಧೀಶ ಶ್ರೀಶೈಲ ಭೀಮಸೇನ ಬಗಾಡಿ, ಹೆಚ್ಚುವರಿ ಸಿವಿಲ್ ನ್ಯಾಯಾಧೀಶ ಸ್ಪರ್ಶ ಎಂ.ಡಿಸೋಜಾ, ವಕೀಲರ ಸಂಘದ ಕಾರ್ಯದರ್ಶಿ ಎಚ್.ಬಿ.ರಮೇಶ್ ಶಿರವಾಳ, ಹಿರಿಯ ನ್ಯಾಯವಾದಿಗಳಾದ ಕೆ.ಎನ್.ಶ್ರೀಧರ್, ವಿನಯ್ ಕುಮಾರ್ ಇತರರಿದ್ದರು.