

ಮೈಸೂರು: ಪ್ರಿನ್ಸೆಸ್ (ಕೆಆರ್‌ಎಸ್) ರಸ್ತೆಗೆ ‘ಸಿದ್ದರಾಮಯ್ಯ ಆರೋಗ್ಯ ಮಾರ್ಗ’ ಎಂದು ಮರು ನಾಮಕಾರಣ ಮಾಡದಂತೆ ಬಿಜೆಪಿಯಿಂದ ನಗರದಲ್ಲಿ ಶುಕ್ರವಾರ ಮೌನ ಪ್ರತಿಭಟನೆ ನಡೆಯಿತು.
ನಗರದ ಚಲುವಾಂಬ ಉದ್ಯಾನದಿಂದ ಜಯದೇವ ಆಸ್ಪತ್ರೆ ಕಡೆಗೆ ಬಿಜೆಪಿ ಮುಖಂಡರು, ಕಾರ್ಯಕರ್ತರು ನಡೆಸಿದ ಮೆರವಣಿಗೆಯನ್ನು ಪೊಲೀಸರು ತಡೆದಿದ್ದರಿಂದ ವಾಗ್ವಾದ ನಡೆಯಿತು. ಈ ವೇಳೆ ರಸ್ತೆಯಲ್ಲಿ ಕುಳಿತು ಪ್ರತಿಭಟನೆಗೆ ಮುಂದಾದ ಮುಖಂಡರು, ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದರು. ಬಿಡುಗಡೆ ಬಳಿಕ ಪ್ರತಿಭಟನಾಕಾರರು, ಚಲುವಾಂಬ ಉದ್ಯಾನದ ಸ್ವಾಮಿ ವಿವೇಕಾನಂದ ಪ್ರತಿಮೆ ಬಳಿ ಹಣೆ, ಕೈಗೆ ಕಪ್ಪುಪಟ್ಟಿ ಧರಿಸಿ ಮೌನ ಪ್ರತಿಭಟನೆ ನಡೆಸಿದರು.
ಕೆ.ಆರ್.ಎಸ್. ರಸ್ತೆಗೆ ಈಗಾಗಲೇ ಪ್ರಿನ್ಸೆಸ್ ರಸ್ತೆ ಎಂದು 40-50 ವರ್ಷದಿಂದಲೂ ಇದ್ದು, ಇದೇ ಹೆಸರಿನಲ್ಲಿ ದಾಖಲೆ, ಪತ್ರ ವ್ಯವಹಾರ ಕೂಡಾ ಮಾಡಲಾಗುತ್ತಿದೆ. ಆದರೆ ಈಗ ಇದನ್ನು ಸಿದ್ದರಾಮಯ್ಯ ಆರೋಗ್ಯ ಮಾರ್ಗ ಎಂದು ಬದಲಿಸಲು ಕಾಂಗ್ರೆಸ್ ಮುಂದಾಗಿರುವುದು ಸರಿಯಲ್ಲ. ಹಾಗಾಗಿ ಇತಿಹಾಸ ಇರುವ ಪ್ರಿನ್ಸೆಸ್ ರಸ್ತೆ ಎಂದೇ ಉಳಿಸಿಕೊಳ್ಳಬೇಕು. ಯಾವುದೇ ಕಾರಣಕ್ಕೂ ಬದಲಾವಣೆ ಮಾಡಬಾರದು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಯಾದವಗಿರಿಯ ಚಲುವಾಂಬ ಉದ್ಯಾನದಿಮದ ಜಯದೇವ ಆಸ್ಪತ್ರೆ ಕಡೆಗೆ ಬಿಜೆಪಿ ಮುಖಂಡರು, ಕಾರ್ಯಕರ್ತರು ಪ್ರತಿಭಟನಾ ಮೆರವಣಿಗೆಗೆ ಮುಂದಾದರು. ಈ ವೇಳೆ ಪ್ರತಿಭಟನಾಕಾರರನ್ನು ಪೊಲೀಸರು ತಡೆದರು.
ಆದರೆ ನಮಗೆ ಮೆರವಣಿಗೆ ಹೋಗಲು ಅವಕಾಶ ಕೊಡಿ ಎಂದು ಪ್ರತಿಭಟನಾಕಾರರು ಪೊಲೀಸರೊಂದಿಗೆ ವಾಗ್ವಾಗಕ್ಕಿಳಿದರು. ಆದರೆ ಪೊಲೀಸರು ಇದಕ್ಕೆ ಒಪ್ಪದಿದ್ದಾಗ ರಸ್ತೆಯಲ್ಲಿಯೇ ಧರಣಿ ನಡೆಸಿದರು.
ಈ ವೇಳೆ ಮಾತನಾಡಿದ ಮಾಜಿ ಸಂಸದ ಪ್ರತಾಪಸಿಂಹ, ಈಗಾಗಲೇ ಇಟ್ಟಿರುವ ಹೆಸರನ್ನು ಸರ್ಕಾರ ಏಕೆ ಬದಲಾವಣೆ ಮಾಡಲು ಮುಂದಾಗುತ್ತಿದೆ ಎಂಬುದು ಅರ್ಥವಾಗುತ್ತಿಲ್ಲ. ಇಟ್ಟಿರುವ ಹೆಸರನ್ನು ಬದಲಾಯಿಸಿ ದ್ವೇಷ ಮಾಡಬಾರದು ಎಂದರು.
ಮುಡಾದಲ್ಲಿ ಸಿದ್ದರಾಮಯ್ಯ ಅವರು ಮಾಡಿರುವ ಕೆಲಸಕ್ಕೆ ಮುಡಾ ಇರುವವರೆಗೂ ಸ್ಥಿರಸ್ಥಾಯಿಯಾಗಿರುತ್ತಾರೆ. ಹೀಗಾಗಿ ಅವರ ಹೆಸರನ್ನು ಬೇರೆ ಎಲ್ಲೂ ಇಡುವ ಅವಶ್ಯಕತೆ ಇಲ್ಲ. ಮೈಸೂರಿನಲ್ಲಿ ನಿಮ್ಮ ಹೆಸರಿನ ವೃತ್ತ ಇದೆ. ಹಾಸ್ಟೆಲ್ ಒಂದಕ್ಕೆ ನಿಮ್ಮ ಹೆಸರನ್ನು ಇಡಲಾಗಿದೆ. ಉದ್ಯಾನಕ್ಕೂ ಹೆಸರಿಡಲಾಗಿದೆ. ಆದರೂ ಈಗ ರಸ್ತೆಗೆ ಇಡಲಾಗುತ್ತಿದೆ. ಕಾನೂನು ವ್ಯಾಸಂಗ ಮಾಡಿರುವ ಸಿದ್ದರಾಮಯ್ಯ ಅವರು ಇದನ್ನು ಅರ್ಥ ಮಾಡಿಕೊಳ್ಳಬೇಕು ಎಂದು ಹೇಳಿದರು.
ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಮೊದಲೇ ಪ್ರಿನ್ಸೆಸ್ ಹೆಸರು ಇತ್ತು ಎಂದು ನಗರಪಾಲಿಕೆ ಆಯುಕ್ತರಿಗೆ ಸಾಕಷ್ಟು ದಾಖಲೆಗಳನ್ನು ಕೊಟ್ಟಿದ್ದಾರೆ. ಮಹಾರಾಜರ ಕಾಲದಲ್ಲಿ ಇಟ್ಟಿರುವ ಹೆಸರನ್ನು ಯಾವುದೇ ಕಾರಣಕ್ಕೂ ಬದಲಾವಣೆ ಮಾಡಬಾರದು. ಮೈಸೂರಿಗೆ ಮಹಾರಾಜರ ಕೊಡುಗೆ ಬಹಳಷ್ಟಿದೆ. ಮಹಾರಾಜರ ಋಣ ನಮ್ಮ ಮೇಲಿದೆ. ಹೀಗಾಗಿ ಅವರ ಹೆಸರನ್ನು ಬದಲಿಸಲು ಬಿಡುವುದಿಲ್ಲ ಎಂದರು.
ಈ ಹಿಂದೆಯೇ ಇಟ್ಟಿರುವ ಹೆಸರನ್ನು ಬದಲಾವಣೆ ಮಾಡುವುದು ಸಿದ್ದರಾಮಯ್ಯ ಅವರಿಗೆ ಶೋಭೆ ತರುವುದಿಲ್ಲ. ಹಾಗಾಗಿ ಈಗಾಗಲೇ ಇರುವ ಹೆಸರನ್ನು ಹಾಗೆಯೇ ಉಳಿಸಿಕೊಳ್ಳಬೇಕು ಎಂದು ಹೇಳಿದರು.
ಬಿಜೆಪಿ ನಗರಾಧ್ಯಕ್ಷ ಎಲ್.ನಾಗೇಂದ್ರ, ಗ್ರಾಮಾಂತರ ಅಧ್ಯಕ್ಷ ಎಲ್.ಆರ್.ಮಹದೇವಸ್ವಾಮಿ ಇತರರು ಹಾಲಿ ಇರುವ ಹೆಸರನ್ನು ಬದಲಾಯಿಸಿದರೆ ಹೋರಾಟ ಮುಂದುವರಿಸಲಾಗುವುದು ಎಂದು ಹೇಳಿದರು.
ಮುಡಾ ಮಾಜಿ ಅಧ್ಯಕ್ಷ ಯಶಸ್ವಿ ಸೋಮಶೇಖರ್, ಮಾಜಿ ಮೇಯರ್‌ಗಳಾದ ಶಿವಕುಮಾರ್, ಸಂದೇಶ್ ಸ್ವಾಮಿ, ಮುಖಂಡರಾದ ಹೇಮಂತ್‌ಕುಮಾರ್‌ಗೌಡ, ಫಣೀಶ್, ಗಿರಿಧರ್, ಹೇಮಾ ನಂದೀಶ್, ಮಂಗಳಾ ಸೋಮಶೇಖರ್, ಕೇಬಲ್ ಮಹೇಶ್, ಅನಿಲ್ ಥಾಮಸ್, ವಾಣೀಶ್ ಕುಮಾರ್, ಬಿ.ಆರ್.ಲೋಹಿತ್ ಇತರರು ಇದ್ದರು.
ವಾಹನಗಳ ಸಂಚಾರಕ್ಕೆ ಅಡಚಣೆ
ಕೆಆರ್‌ಎಸ್ ರಸ್ತೆಯಲ್ಲಿ ಬಿಜೆಪಿ ಪ್ರತಿಭಟನೆ ನಡೆಸಿದ್ದರಿಂದ ವಾಹನಗಳ ಸಂಚಾರಕ್ಕೆ ಅಡಚಣೆಯಾಯಿತು. ದಾಸಪ್ಪ ವೃತ್ತ ಮತ್ತು ಒಂಟಿಕೊಪ್ಪಲು ಲಕ್ಷ್ಮೀ ವೆಂಕಟೇಶ್ವರಸ್ವಾಮಿ ದೇಗುಲದ ವೃತ್ತದಿಂದ ವಾಹನಗಳ ಪ್ರವೇಶ ತಡೆ ಹಿಡಿದು ಹುಣಸೂರು ಮಾರ್ಗವಾಗಿ ವಾಹನಗಳನ್ನು ಬಿಡಲಾಯಿತು. ಇದರಿಂದ ವಾಹನ ಚಾಲಕರು, ಪ್ರಯಾಣಿಕರಿಗೆ ಕೆಲಕಾಲ ತೊಂದರೆಯಾಯಿತು.