52ನೇ ರಾಷ್ಟ್ರೀಯ ಔಷಧೀಯ ಸಂಘಟನೆ ಸಮಾವೇಶಕ್ಕೆ ಚಾಲನೆ

31
Published on

ಮೈಸೂರು: ಜೆಎಸ್‌ಎಸ್ ಔಷಧ ವಿಜ್ಞಾನ ಮಹಾವಿದ್ಯಾಲಯದಿಂದ ನಗರದಲ್ಲಿ ಆಯೋಜಿಸಿರುವ 52ನೇ ರಾಷ್ಟ್ರೀಯ ಔಷಧೀಯ ಸಂಘಟನೆ ಸಮಾವೇಶದ ಅಂಗವಾಗಿ ಬುಧವಾರ ಪೂರ್ವಭಾವಿ ಕಾರ್ಯಾಗಾರ ಆಯೋಜಿಸಲಾಗಿತ್ತು.
ಆರೋಗ್ಯ ಮತ್ತು ಯೋಗಕ್ಷೇಮಕ್ಕಾಗಿ ಔಷಧೀಯ ಶಾಸ್ತ್ರಕ್ಕೆ ಭವಿಷ್ಯದ ಸವಾಲುಗಳು ವಿಷಯ ಕುರಿತು ಫೆ. 23ರಿಂದ 25ರ ವರೆಗೆ ಸಮಾವೇಶ ನಡೆಯಲಿದೆ.
ಶ್ರೀಶಿವರಾತ್ರೀಶ್ವರ ನಗರದ ಜೆಎಸ್‌ಎಸ್ ಔಷಧ ವಿಜ್ಞಾನ ಮಹಾವಿದ್ಯಾಲಯದ ಶ್ರೀರಾಜೇಂದ್ರ ಸಭಾಭವನದಲ್ಲಿ ಜರುಗಿದ ಪೂರ್ವಭಾವಿ ಕಾರ್ಯಾಗಾರಕ್ಕೆ ಚಾಲನೆ ನೀಡಿದ ಜೆಎಸ್‌ಎಸ್ ಎಎಚ್‌ಇಆರ್‌ನ ಕುಲಸಚಿವ ಡಾ.ಬಿ.ಮಂಜುನಾಥ ಅವರು ಮಾತನಾಡಿ, ಔಷಧೀಯ ಪ್ರಯೋಗಗಳ ವಿವಿಧ ವಿಭಾಗಗಳಿಗೆ ಸಂಬಂಧಿಸಿದ ಕೌಶಲ್ಯಗಳನ್ನು ಕಲಿಯಲು ಈ ಪೂರ್ವ ಸಮ್ಮೇಳನವು ಪ್ರತಿನಿಧಿಗಳಿಗೆ ಸಹಾಯ ಮಾಡುತ್ತದೆ ಎಂದು ಹೇಳಿದರು.
ಭಾರತೀಯ ಔಷಧ ವಿಜ್ಞಾನ ಸೊಸೈಟಿಯ ಅಧ್ಯಕ್ಷ ಡಾ.ಶಿವಕುಮಾರ್ ರತ್ನಂ ಮಾತನಾಡಿ, ಪೂರ್ವಭಾವಿ ಕಾರ್ಯಾಗಾರವು ಪ್ರತಿನಿಧಿಗಳು ಮತ್ತು ಔಷಧ ಶಾಸ್ತ್ರದ ಕ್ಷೇತ್ರದ ಪರಿಣಿತರೊಂದಿಗೆ ಹೊಂದಾಣಿಕೆ ಮಾಡಿಸಲು ಸಹಾಯ ಮಾಡುತ್ತದೆ. ಆದ್ದರಿಂದ ಇದರ ಪ್ರಯೋಜನ ಪಡೆದುಕೊಳ್ಳಬೇಖು ಎಂದು ಸಲಹೆ ನೀಡಿದರು.
ಭಾರತೀಯ ಔಷಧ ವಿಜ್ಞಾನ ಸೊಸೈಟಿ ಪ್ರಧಾನ ಕಾರ್ಯದರ್ಶಿ ಡಾ.ಬಿ.ಕಲಾ ಕುಮಾರ್, ಕಾರ್ಯಾಗಾರದಲ್ಲಿ 7 ವಿವಿಧ ಯೋಜನೆಗಳ ಅಡಿಯಲ್ಲಿ ಆಯೋಜಿಸಲಾಗಿದ್ದು, ಔಷಧ ಉದ್ಯಮಗಳು ಮತ್ತು ಸಂಸ್ಥೆಗಳಿಂದ ಸುಮಾರು 14 ವಿಷಯ ತಜ್ಞರು ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದರು. ದೇಶದ ವಿವಿಧ ರಾಜ್ಯಗಳಿಂದ ಸುಮಾರು 200 ಪ್ರತಿನಿಧಿಗಳು ಭಾಗವಹಿಸಿದ್ದರು ಎಂದು ಹೇಳಿದರು.
ಸಮ್ಮೇಳನದ ಸಂಘಟನಾ ಅಧ್ಯಕ್ಷರಾದ ಕಾಲೇಜಿನ ಪ್ರಾಂಶುಪಾಲ ಡಾ.ಟಿ.ಎಂ ಪ್ರಮೋದ್‌ಕುಮಾರ್, ಸಮ್ಮೇಳನದ ಸಂಘಟನಾ ಕಾರ್ಯದರ್ಶಿ ಡಾ.ಕೆ.ಎಲ್.ಕೃಷ್ಣ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net