ಸುಂಟಿಕೊಪ್ಪ ಕೃಷಿ ಪತ್ತಿನ ಸಂಘಕ್ಕೆ 52,97,830 ರೂ. ಲಾಭ

ಸುಂಟಿಕೊಪ್ಪದ ಗುಂಡುಗುಟ್ಟಿ ಮಂಜುನಾಥಯ್ಯ ಸಹಕಾರ ಭವನದಲ್ಲಿ ಆಯೋಜಿಸಿದ್ದ ವಾರ್ಷಿಕ ಮಹಾಸಭೆ ಅಧ್ಯಕ್ಷ ಮತ್ತು ಸದಸ್ಯರು ಹಾಜರಿದ್ದರು.  ಕೆ.ಎಸ್.ಮಂಜುನಾಥ್,  ಕೆ.ವಿ.ರಮ್ಯಾ, ಎಂ.ಎನ್.ಕುಮಾರಪ್ಪ, ಎನ್.ಸಿಪೊನ್ನಪ್ಪ, ಡಿ.ಬಿ.ರಮೇಶ್ ಚಂಗಪ್ಪ, ಜೆರ್ಮಿ ಡಿಸೋಜ, ಡಿ.ಕೆ.ಗಂಗಾಧರ, ಡಾ.ಶಶಿಕಾಂತ ರೈ, ಕೆ.ಪಿ.ಜಗನ್ನಾಥ್, ಪಿ.ಪಿ.ಉದಯಕುಮಾರ್, ಕೆ.ಆರ್.ಮಂಜುನಾಥ ಇದ್ದರು.
ಸುಂಟಿಕೊಪ್ಪದ ಗುಂಡುಗುಟ್ಟಿ ಮಂಜುನಾಥಯ್ಯ ಸಹಕಾರ ಭವನದಲ್ಲಿ ಆಯೋಜಿಸಿದ್ದ ವಾರ್ಷಿಕ ಮಹಾಸಭೆ ಅಧ್ಯಕ್ಷ ಮತ್ತು ಸದಸ್ಯರು ಹಾಜರಿದ್ದರು. ಕೆ.ಎಸ್.ಮಂಜುನಾಥ್, ಕೆ.ವಿ.ರಮ್ಯಾ, ಎಂ.ಎನ್.ಕುಮಾರಪ್ಪ, ಎನ್.ಸಿಪೊನ್ನಪ್ಪ, ಡಿ.ಬಿ.ರಮೇಶ್ ಚಂಗಪ್ಪ, ಜೆರ್ಮಿ ಡಿಸೋಜ, ಡಿ.ಕೆ.ಗಂಗಾಧರ, ಡಾ.ಶಶಿಕಾಂತ ರೈ, ಕೆ.ಪಿ.ಜಗನ್ನಾಥ್, ಪಿ.ಪಿ.ಉದಯಕುಮಾರ್, ಕೆ.ಆರ್.ಮಂಜುನಾಥ ಇದ್ದರು.
Published on

ಸುಂಟಿಕೊಪ್ಪ: ಇಲ್ಲಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ 2022-23 ನೇ ಸಾಲಿನಲ್ಲಿ 52,97,830 ರೂ. ನಿವ್ವಳ ಲಾಭ ಗಳಿಸಿದೆ ಎಂದು ಸಂಘದ ಅಧ್ಯಕ್ಷ ಕೆ.ಎಸ್.ಮಂಜುನಾಥ್ ತಿಳಿಸಿದರು.

ಗುಂಡುಗುಟ್ಟಿ ಮಂಜುನಾಥಯ್ಯ ಸಹಕಾರ ಭವನದಲ್ಲಿ ಗುರುವಾರ ಆಯೋಜಿಸಿದ್ದ ವಾರ್ಷಿಕ ಮಹಾಸಭೆಯಲ್ಲಿ ಮಾತನಾಡಿದ ಅವರು, ಸಂಘದಲ್ಲಿ 1,961 ಸದಸ್ಯರಿದ್ದು, ಇದರಲ್ಲಿ ಎ ಸದಸ್ಯರ ಪಾಲು 1,58,64,000ರೂ., ಸಿ ತರಗತಿ ಪಾಲು 2,49,000 ರೂ., ಸರ್ಕಾರದ ಪಾಲು 78,000 ರೂ. ಇದೆ. ಕಳೆದ ಸಾಲಿನಲ್ಲಿ ಒಟ್ಟು 123 ಕೋಟಿ ರೂ. ವ್ಯಾಪಾರ ವಹಿವಾಟು ಆಗಿದ್ದು, 21,59,78,000 ರೂ.ಕೃಷಿ ಮತ್ತು ಕೃಷಿಯೇತರ ಸಾಲ ವಿತರಿಸಲಾಗಿದೆ ಎಂದು ಅವರು, ಸಂಘದ ಸಾಲ ಮರುಪಾವತಿ ಪ್ರಮಾಣ ಶೇ.98.2 ಇದ್ದು, ಸರ್ಕಾರದ ಬಡ್ಡಿ ರಿಯಾಯಿತಿ ಯೋಜನೆ ಜಾರಿಯಲ್ಲಿದೆ ಎಂದು ಮಾಹಿತಿ ನೀಡಿದರು.

ಸಂಘದಲ್ಲಿ ಆಗಿರುವ ಹಣ ದುರುಪಯೋಗದ ಬಗ್ಗೆ ಏನು ಕ್ರಮಕೈಗೊಂಡಿದ್ದೀರಿ ಎಂದು ಹಿರಿಯ ಸದಸ್ಯ ಎಂ.ಎ.ವಸಂತ ಪ್ರಶ್ನಿಸಿದಾಗ, ಈ ಸಂಬಂಧ ನ್ಯಾಯಾಲಯದಲ್ಲಿ ಕ್ರಿಮಿನಲ್ ಮೊಕದ್ದಮೆ ಹೂಡಲಾಗಿದ್ದು, ವಿಚಾರಣೆ ನಡೆಯುತ್ತಿದೆ. ಸಂಘದ ವತಿಯಿಂದ ಕ್ರಮವಹಿಸಲಾಗಿದ್ದು, ಹೆಚ್ಚು ಮಾಹಿತಿ ನೀಡಲು ಸಾಧ್ಯವಿಲ್ಲ ಎಂದು ಅಧ್ಯಕ್ಷ ಕೆ.ಎಸ್.ಮಂಜುನಾಥ್ ಪ್ರತಿಕ್ರಿಯಿಸಿದರು.

ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹುದ್ದೆ ಖಾಲಿ ಇದ್ದು, ಇದರ ಪ್ರಗತಿ ಏನಾಗಿದೆ ಎಂದು ಹಿರಿಯ ಸದಸ್ಯರಾದ ಕೆ.ಡಿ.ರಾಮಯ್ಯ ಮತ್ತು ಎಂ.ಎ.ವಸಂತ ಪ್ರಶ್ನಿಸಿದಾಗ, ಸಿಇಒ ಸೇರಿದಂತೆ ಇನ್ನೂ 2 ಹುದ್ದೆಗಳು ಖಾಲಿಯಿದ್ದು, ಸರ್ಕಾರದ ಮಟ್ಟದಲ್ಲಿ ಹುದ್ದೆ ಭರ್ತಿಗೆ ಪ್ರಕ್ರಿಯೆಗಳು ನಡೆದಿದೆ ಎಂದು ಅಧ್ಯಕ್ಷರು ಮಾಹಿತಿ ನೀಡಿದರು.

ಸಂಘದ ವ್ಯವಸ್ಥೆಯಲ್ಲಿ ಸಾಲ ಪಡೆದ ಕೃಷಿಕರು ಕಾರಣಾಂತರಗಳಿಂದ ಸಾಲ ಮರುಪಾವತಿಸಲು ಸಾಧ್ಯವಾಗದ ಸಂದರ್ಭ ಅವರ ಜಾಮೀನುದಾರರನ್ನು ಹೊಣೆಗಾರರನ್ನಾಗಿ ಮಾಡಲಾಗುತ್ತಿದೆ. ಒಂದು ವೇಳೆ ಸಾಲಗಾರರು ಸಾಲ ಮರುಪಾವತಿ ಮಾಡಿದ ಸಂದರ್ಭ ಸಾಲಗಾರರ ಪರವಾಗಿ ಕಟ್ಟಿದ ಸಾಲವನ್ನು ಜಾಮೀನುದಾರರಿಗೆ ಬಡ್ಡಿ ಸಮೇತ ಹಿಂದಿರುಗಿಸುವ ವ್ಯವಸ್ಥೆ ಇದೆ ಎಂಬುದರ ಕುರಿತು ಸಾರ್ವಜನಿಕ ತಿಳಿವಳಿಕೆಗೆ ತರಬೇಕೆಂದು ಸದಸ್ಯ ಪಿ.ಎಂ. ಬಿಜು ಆಗ್ರಹಿಸಿದರು.

ಹೋಬಳಿ ವ್ಯಾಪ್ತಿಯಲ್ಲಿನ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿಯಲ್ಲಿ ಅಧಿಕ ಅಂಕಗಳಿಸಿದ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಪ್ರೋತ್ಸಾಹಕ ಬಹುಮಾನ ನೀಡಿದರು. ಸಭೆಯ ಮೊದಲಿಗೆ 2022-23ನೇ ಸಾಲಿನಲ್ಲಿ ಮೃತಪಟ್ಟ ಸದಸ್ಯರಿಗೆ 2 ನಿಮಿಷ ಮೌನ ಆಚರಿಸಿ ಶಾಂತಿ ಕೋರಲಾಯಿತು.
ಸಭೆಯಲ್ಲಿ ಉಪಾಧ್ಯಕ್ಷೆ ಕೆ.ವಿ.ರಮ್ಯಾ, ಸದಸ್ಯರಾದ ಎಂ.ಎನ್.ಕುಮಾರಪ್ಪ, ಎನ್.ಸಿ.ಪೊನ್ನಪ್ಪ, ಡಿ.ಬಿ.ರಮೇಶ್ ಚಂಗಪ್ಪ, ಜೆರ್ಮಿ ಡಿಸೋಜ, ಡಿ.ಕೆ.ಗಂಗಾಧರ, ಡಾ.ಶಶಿಕಾಂತ ರೈ, ಕೆ.ಪಿ.ಜಗನ್ನಾಥ್, ಪಿ.ಪಿ.ಉದಯಕುಮಾರ್, ಕೆ.ಆರ್.ಮಂಜುನಾಥ, ಬಿ.ಕೆ.ದಯಾನಂದ, ಪಿ.ಪಿ.ಲೀಲಾವತಿ, ಪ್ರಭಾರ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಸುಮಿತ್ರಾ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net