ಕಾರ್ಗಿಲ್ ವಿಜಯ್ ದಿವಸ್‌ನಲ್ಲಿ ಬೆಳಗಿದ ೫೨೭ ಹಣತೆಗಳು

misty hils
Published on

ಮಡಿಕೇರಿ: ಕಾರ್ಗಿಲ್ ಕದನದಲ್ಲಿ ಹುತಾತ್ಮರಾದ ೫೨೭ ಯೋಧರ ಸ್ಮರಣೆಯಲ್ಲಿ ರೋಟರಿ ಮಿಸ್ಟಿ ಹಿಲ್ಸ್ ವತಿಯಿಂದ ೫೨೭ ಹಣತೆಗಳನ್ನು ಬೆಳಗಿಸುವ ಮೂಲಕ ವಿನೂತನವಾಗಿ ಕಾರ್ಗಿಲ್ ವಿಜಯ ದಿನವನ್ನು ಭಾವನಾತ್ಮಕಾಗಿ ಆಚರಿಸಲಾಯಿತು.


ನಗರದ ಗಾಂಧಿ ಭವನದಲ್ಲಿ ರೋಟರಿ ಮಿಸ್ಟಿ ಹಿಲ್ಸ್ ವತಿಯಿಂದ ಆಯೋಜಿತ ಕಾರ್ಯಕ್ರಮದಲ್ಲಿ ಸಾರ್ವಜನಿಕರೂ ಸೇರಿದಂತೆ ರೋಟರಿ ಸದಸ್ಯರು ೫೨೭ ಹಣತೆಗಳನ್ನು ಬೆಳಗಿಸಿದರು. ಕಾರ್ಗಿಲ್ ಸಮರದಲ್ಲಿ ಭಾರತದ ಹೆಮ್ಮೆಯ ೫೨೭ ಯೋಧರು ೨೫ ವರ್ಷಗಳ ಹಿಂದೆ ಪ್ರಾಣತ್ಯಾಗ ಮಾಡಿದ್ದರು. ಈ ಯೋಧರ ತ್ಯಾಗಬಲಿದಾನದ ಸ್ಮರಣೆಯಲ್ಲಿ ೫೨೭ ಹಣತೆಗಳನ್ನು ಬೆಳಗಿಸಿ ಅವರನ್ನು ಸ್ಮರಿಸುವ ಪ್ರಯತ್ನ ಇದಾಗಿದೆ ಎಂದು ರೋಟರಿ ಮಿಸ್ಟಿ ಹಿಲ್ಸ್ ಅಧ್ಯಕ್ಷ ಪೊನ್ನಚ್ಚನ ಮಧುಸೂದನ್ ಹೇಳಿದರು.


ಕಾರ್ಗಿಲ್ ವಿಜಯ್ ದಿವಸ್ ಅಂಗವಾಗಿ ಮಡಿಕೇರಿಯ ಮದ್ರಾಸ್ ರೆಜಿಮೆಂಟ್‌ನಲ್ಲಿ ೨೨ ವರ್ಷಗಳ ಕಾಲ ಸೇವೆ ಸಲ್ಲಿಸಿ ಅನೇಕ ಸೇವಾ ಮೆಡಲ್‌ಗಳನ್ನು ಪಡೆದು ಸೇನೆಯಿಂದ ನಿವೃತ್ತರಾದ ಸೇನಾಧಿಕಾರಿ ಬಿ.ಕೆ.ಲೋಕೇಶ್ ಮತ್ತು ಪತ್ನಿ ಕಲ್ಪನ ಲೋಕೇಶ್ ಅವರನ್ನು ಮಿಸ್ಟಿ ಹಿಲ್ಸ್ ವತಿಯಿಂದ ಗೌರವಿಸಲಾಯಿತು.


ಸನ್ಮಾನಿತರಾದ ಲೋಕೇಶ್ ಮಾತನಾಡಿ, ನಿವೃತ್ತಿ ನಂತರವೂ ಸಮಾಜದಲ್ಲಿ ಗೌರವವನ್ನು ಸದಾ ಕಾಲ ಪಡೆಯುವ ಸ್ಥಾನ ಎಂದರೆ ಅದು ಯೋಧನದ್ದಾಗಿದೆ. ಸೈನ್ಯದಲ್ಲಿ ಅನೇಕ ವರ್ಷಗಳ ಕಾಲ ದೇಶರಕ್ಷಣೆಯ ಕರ್ತವ್ಯ ನಿರ್ವಹಿಸಿ ನಿವೃತ್ತರಾಗಿ ತವರು ನೆಲಕ್ಕೆ ಬಂದು ನೆಲಸಿದ ಸಂದರ್ಭ ಸಂಘಸಂಸ್ಥೆಗಳು ಅಂಥ ಯೋಧರನ್ನು ಗುರುತಿಸಿ ಗೌರವಿಸುವ ಪರಂಪರೆ ಶ್ಲಾಘನೀಯ. ಯೋಧನ ಮನತೃಪ್ತಿಗೂ ಇಂಥ ಸನ್ಮಾನ ಕಾರಣವಾಗುತ್ತದೆ ಎಂದರು.


ಕಾರ್ಗಿಲ್ ಕದನದಲ್ಲಿ ವೀರಮರಣವನ್ನಪ್ಪಿದ ಮನೋಜ್ ಕುಮಾರ್ ಭಾಟಿಯಾ ಬಗ್ಗೆ ಸುಂಟಿಕೊಪ್ಪದ ೯ನೇ ತರಗತಿ ವಿದ್ಯಾರ್ಥಿನಿ ಶ್ರೀಷ ಮಾತನಾಡಿದರು. ಕಾರ್ಗಿಲ್ ವಿಜಯ ದಿನದ ಅಂಗವಾಗಿ ದೇಶ ಭಕ್ತಿಗೀತೆ ಮನಸೆಳೆಯಿತು.


ಕಾರ್ಯಕ್ರಮದಲ್ಲಿ ರೋಟರಿ ಮಿಸ್ಟಿ ಹಿಲ್ಸ್ ಕಾರ್ಯದರ್ಶಿ ಕಟ್ಟೆಮನೆ ಸೋನಜಿತ್, ವಲಯ ಸೇನಾನಿ ಅನಿತಾಪೂವಯ್ಯ, ಕಾರ್ಯಕ್ರಮ ಸಂಚಾಲಕ ಎಚ್.ಟಿ.ಅನಿಲ್, ಪ್ರಮುಖರಾದ ಬಿ.ಜಿ.ಅನಂತಶಯನ, ಕೇಶವಪ್ರಸಾದ್ ಮುಳಿಯ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net