51ದಿನಗಳ ಬಳಿಕ ಜೈಲಿನಿಂದ ಬಿಡುಗಡೆಯಾದ ದೇವರಾಜೇಗೌಡ

51ದಿನಗಳ ಬಳಿಕ ಜೈಲಿನಿಂದ ಬಿಡುಗಡೆಯಾದ ದೇವರಾಜೇಗೌಡ
Published on

ಹಾಸನ: ಅತ್ಯಾಚಾರ ಮತ್ತು ಜಾತಿನಿಂದಲೇ ಪ್ರಕರಣದಲ್ಲಿ ಜೈಲು ಸೇರಿದ್ದ ವಕೀಲ ಹಾಗೂ ಬಿಜೆಪಿ ಮುಖಂಡ ದೇವರಾಜೇಗೌಡ 51ದಿನಗಳ ಬಳಿಕ ಮಂಗಳವಾರ ಜೈಲಿನಿಂದ ಬಿಡುಗಡೆಯಾಗಿದ್ದಾನೆ.
ಹೊಳೆನರಸೀಪುರ ಠಾಣೆಯಲ್ಲಿ ಅತ್ಯಾಚಾರ ಪ್ರಕರಣದಲ್ಲಿ ಈತನನ್ನ ಬಂಧಿಸಲಾಗಿತ್ತು. ಸೋಮವಾರ ಹೈಕೋರ್ಟ್ ಜಾಮೀನು ನೀಡಿತ್ತು. ಎಲ್ಲಾ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿ ಜಿಲ್ಲಾ ಕಾರಾಗೃಹದಿಂದ ಸೋಮವಾರ ಸಂಜೆ ಬಿಡುಗಡೆ ಮಾಡಲಾಯಿತು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಮತ್ತು ರಾಷ್ಟ್ರೀಯ ನಾಯಕರಿಗೆ ತುಂಬು ಹೃದಯದ ಧನ್ಯವಾದಗಳು, ನನ್ನ ಬಂಧನದ ವಿರುದ್ಧವಾಗಿ ಹೋರಾಟ ಮಾಡಿದ ಬಿಜೆಪಿ ಮತ್ತು ಕಾರ್ಯಕರ್ತರ ಹಾಗೂ ದೇವರ ಕೃಪೆಯಿಂದ ಬಿಡುಗಡೆಯಾಗಿ ಬಂದಿದ್ದೇನೆ. ಮುಂದಿನ ದಿನಗಳಲ್ಲಿ ಸತ್ಯಕ್ಕೆ ಜಯ ಸಿಗಲಿದೆ ಎಂದು ಹೇಳಿದರು.
ಸತ್ಯ ಇಡಿ ಜಗತ್ತಿಗೆ ಗೊತ್ತಿದೆ. ನಾನು 51 ದಿನಗಳ ನಂತರ ಜೈಲಿನಿಂದ ಹೊರಬಂದಿದ್ದೇನೆ. ನನ್ನ ಬಂಧನದ ಕಾರಣಗಳ ಬಗ್ಗೆ ಬಹಿರಂಗಪಡಿಸುವುದಿಲ್ಲ. ಈಗಾಗಲೇ ಪ್ರಕರಣ ನ್ಯಾಯಾಲಯದಲ್ಲಿ ಇರುವುದರಿಂದ ನ್ಯಾಯಾಲಯಕ್ಕೆ ತಲೆಬಾಗುತ್ತೇನೆ. ಸಮಯ ಬಂದಾಗ ಎಲ್ಲಾ ವಿಚಾರವನ್ನ ಬಹಿರಂಗಪಡಿಸಲಾಗುವುದು ಎಂದು ಹೇಳಿದರು.
ಸತ್ಯಕ್ಕೆ ಜಯವಿದೆ ಎಂದು ಅಂದುಕೊಂಡಿದ್ದೇನೆ. ಮುಂದಿನ ದಿನಗಳಲ್ಲಿ ಎಲ್ಲ ಸತ್ಯ ಹೊರ ಬರುತ್ತದೆ. ನಾನು ರಾಜಕಾರಣಿ ಆದ ಮೇಲೆ ರಾಜಕೀಯವೂ ಇರುತ್ತದೆ ಎಂದು ಸೂಚ್ಯವಾಗಿ ಹೇಳಿದರು. ಇದರ ಹಿಂದೆ ಯಾರಿದ್ದಾರೆ ಎಂಬುದು ಮುಂದಿನ ದಿನಗಳಲ್ಲಿ ಹೊರ ಬರುತ್ತದೆ. ಈಗ ಯಾರನ್ನೂ ದೂಷಿಸಿ ಪ್ರಯೋಜನ ಇಲ್ಲ ಎಂದು ಹೇಳಿದರು.
ನನ್ನನ್ನು ಬಂಧಿಸಲಾಗುವುದು ಎಂದು ಮೊದಲೇ ತಿಳಿದಿತ್ತು. ಜಿಲ್ಲೆಯ ಮಾನವನ್ನ ಹರಾಜು ಹಾಕುವ ಕೆಲಸ ನಡೆದಿದೆ. ಒಂದು ಕುಟುಂಬಕ್ಕಾಗಿ ಇಡೀ ರಾಷ್ಟ್ರದಲ್ಲಿ ಜಿಲ್ಲೆಯ ಮಾನವನ ಹರಾಜು ಹಾಕಿದ್ದಾರೆ. ಯಾವ ಜಿಲ್ಲೆಗೆ ಕಳಂಕ ತಂದಿದ್ದರು. ಅಲ್ಲಿಂದಲೇ, ಬಿಜೆಪಿ ಮತ್ತು ಜೆಡಿಎಸ್ ಕಾರ್ಯಕರ್ತ ಮತ್ತು ಮುಖಂಡರ ಸಮಾವೇಶವನ್ನು ಶೀಘ್ರದಲ್ಲೇ ಆಯೋಜನೆ ಮಾಡಲಾಗುವುದು ಎಂದು ಹೇಳಿದರು.
ಈ ಬಗ್ಗೆ ಬಿಜೆಪಿ ಮತ್ತು ಜೆಡಿಎಸ್ ನಾಯಕರನ್ನ ಆ.15 ರ ಒಳಗೆ ಭೇಟಿಯಾಗಿ ದಿನಾಂಕ ನಿಗದಿ ಮಾಡುತ್ತೇನೆ. ಮಣ್ಣಿನ ಮಗ ಎಂದು ಹೆಸರುವಾಸಿಯಾಗಿರುವ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರಿಗೆ ಹಾಸನದಲ್ಲಿ ಸನ್ಮಾನ ಮಾಡಲಾಗುವುದು. ಈ ಸಮಾವೇಶಕ್ಕೆ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಸೇರಿದಂತೆ ಎಲ್ಲಾ ಸಂಸದರನ್ನ ಹಾಸನಕ್ಕೆ ಕರೆತರಲಾಗುವುದು ಎಂದರು.
ಶೀಘ್ರದಲ್ಲಿ ಕುಮಾರಸ್ವಾಮಿ ಅವರು ಹಾಸನಕ್ಕೆ ಎಂಟ್ರಿ ಆಗಲಿದ್ದಾರೆ. ತಿಂಗಳಿಗೊಮ್ಮೆಯಾದರೂ ಬರಬೇಕು ಎಂದು ಅವರಿಗೆ ಹೇಳಿದ್ದೇನೆ. ಹೊಳೆನರಸೀಪುರದಲ್ಲಿ ಒಂದು ಕಾರ್ಖಾನೆ ತೆಗೆಯಬೇಕು ಎಂದು ಮನವಿ ಮಾಡಿದ್ದೇನೆ. ಬಿಜೆಪಿ ಮತ್ತು ಜೆಡಿಎಸ್ ಕಾರ್ಯಕರ್ತರು ಗೊಂದಲಕ್ಕೀಡಾಗುವುದು ಬೇಡ ಸಮಾವೇಶವನ್ನ ಸಂಪೂರ್ಣವಾಗಿ ನಾನೇ ಸಾರಥ್ಯ ವಹಿಸಿಕೊಳ್ಳುತ್ತೇನೆ ಎಂದು ಹೇಳಿದರು.
ಜಿಲ್ಲೆಯಲ್ಲಿ ಕೆಲವರು ಅಧಿಕಾರದ ಮದದಿಂದ ಮೆರೆಯುತ್ತಿದ್ದಾರೆ. ಮುಂದೆ ಅವರಿಗೆ ತಕ್ಕ ಉತ್ತರ ಕೊಡುತ್ತೇನೆ. ಮುಂಬರುವ ಜಿಲ್ಲಾ ಪಂಚಾಯತಿ ಮತ್ತು ತಾಲೂಕು ಪಂಚಾಯಿತಿ ಚುನಾವಣೆಯಲ್ಲಿ ಒಂದು ಸ್ಥಾನವನ್ನು ಕಾಂಗ್ರೆಸ್ ಗೆಲ್ಲಬಾರದು. ಈ ನಿಟ್ಟಿನಲ್ಲಿ ಎರಡು ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಒಗ್ಗಟ್ಟಿನಿಂದ ಕೆಲಸ ಮಾಡಬೇಕು ಎಂದು ಹೇಳಿದರು.
ನಾನು ಪೆನ್‌ಡ್ರೈವ್ ಹಂಚಿಕೆ ಬಗ್ಗೆ ಮಾತನಾಡಿದಾಗ ಎಸ್‌ಐಟಿ ತನಿಖೆ ಆರಂಭಿಸಿರಲಿಲ್ಲ. ಆಮೇಲೆ ಎಸ್‌ಐಟಿ ತನಿಖೆ ಆರಂಭವಾಗಿದೆ. ಒಳ್ಳೆಯ ಪೊಲೀಸರು ತನಿಖೆ ಮಾಡುತ್ತಿದ್ದಾರೆ. ತಾರ್ತಿಕವಾಗಿ ಅಂತ್ಯವಾಗುತ್ತೆ, ಅತೀ ಶೀಘ್ರ ಒಳ್ಳೆಯ ಸುದ್ದಿ ಹೊರ ಬರುತ್ತೆ. ಪೆನ್‌ಡ್ರೈವ್ ಪ್ರಕರಣದಲ್ಲಿ ಸಾಕ್ಷಿಯಾಗಿದ್ದೇನೆ. ಎಲ್ಲಾ ರೀತಿಯ ಸಹಕಾರ ಕೊಟ್ಟಿದ್ದೇನೆ. ತನಿಖೆ ಮುಗಿದೆ ಮೇಲೆ ಸತ್ಯಾಂಶ ಹೊರ ಬರುತ್ತದೆ ಎಂದರು. ಆಡಿಯೋ ಬಗ್ಗೆ ಎಫ್‌ಎಸ್‌ಎಲ್‌ನಿಂದ ಸತ್ಯ ಹೊರಗೆ ಬರುತ್ತದೆ. ನಾನು ಹೊರ ಬಂದರೆ ಸರ್ಕಾರ ಪತನವಾಗಲಿದೆ ಎಂಬ ಅವರದೇ ಹೇಳಿಕೆ ಬಗ್ಗೆ ಕೇಳಿದ ಪ್ರಶ್ನೆಗೆ ಕಾದು ನೋಡಿ ಎಂದಷ್ಟೇ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net