51 ಜನರ ವಿರುದ್ಧ ಪ್ರಕರಣ ದಾಖಲು- ಹಟ್ಟಿ ಪೊಲೀಸ್ ಠಾಣೆಗೆ ನುಗ್ಗಲು ಯತ್ನ

Nikhil B SP Raichur
Published on

ಹಟ್ಟಿಚಿನ್ನದಗಣಿ: ಹಟ್ಟಿ ಪೊಲೀಸ್ ಠಾಣೆಗೆ ಅಕ್ರಮವಾಗಿ ನುಗ್ಗಿ, ಕರ್ತವ್ಯಕ್ಕೆ ಅಡ್ಡಿಪಡಿಸಿ, ಲಾಕಪ್‌ನಲ್ಲಿದ್ದ ಆರೋಪಿಗಳ ಮೇಲೆ ಹಲ್ಲೆಗೆ ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ 51 ಜನರ ವಿರುದ್ಧ ಪ್ರಕರಣ ದಾಖಲಾಗಿದೆ.

ಹೊಸಗುಡ್ಡ ತಾಂಡಾದಲ್ಲಿ ರೇಣುಕಾ ಎಂಬುವರನ್ನು ಆಕೆಯ ಪತಿ ಸುರೇಶ ಕೃಷ್ಣಪ್ಪ ಮತ್ತು ಇವರ ತಾಯಿ ಶಾಂತಮ್ಮ ಎನ್ನುವವರು ಕೊಲೆಗೈದು ಬಾವಿಗೆ ಎಸೆದಿದ್ದಾರೆಂಬ ಶಂಕೆ ಮೇಲೆ ಪೊಲೀಸರು ಆರೋಪಿಗಳನ್ನು ಬಂಧಿಸಿ, ವಿಚಾರಣೆ ನಡೆಸಿದ್ದರು. ಆರೋಪಿಗಳು ಹಟ್ಟಿ ಠಾಣೆಯಲ್ಲಿದ್ದಾರೆಂಬ ಸುದ್ದಿ ತಿಳಿದು ರೇಣುಕಾ ತವರು ಗೋನವಾಟ್ಲ ತಾಂಡಾದ 400 ಜನ ಆಕ್ರೋಶದಿಂದ ‘ನಾವು ರೇಣುಕಾ ಸಾವಿಗೆ ಸಂಬಂಧಿಸಿ ದೂರು ನೀಡಿಲ್ಲ. ಆರೋಪಿಗಳನ್ನು ಏಕೆ ಬಂಧಿಸಿದ್ದೀರಿ ? ಹೊರಗೆ ಬಿಡಿ. ನಾವೇ ಅವರನ್ನು ಶಿಕ್ಷಿಸುತ್ತೇವೆ’ ಎಂದು ಅಕ್ರಮವಾಗಿ ಠಾಣೆಗೆ ನುಗ್ಗಿ, ಲಾಕಪ್‌ನಲ್ಲಿದ್ದ ಆರೋಪಿಗಳ ಮೇಲೆ ಮಂಗಳವಾರ ಸಂಜೆ ಹಲ್ಲೆಗೆ ಮುಂದಾಗಿದ್ದರು.

ಠಾಣೆಗೆ ನುಗ್ಗಿ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿ, ವಿಚಾರಣೆಗೊಳಪಟ್ಟವರ ಮೇಲೆ ಹಲ್ಲೆ ನಡೆಸಲು ಪ್ರಯತ್ನಿಸಿದ ಸಂದರ್ಭ ಪೊಲೀಸರು ತಡೆದಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿ 51 ಜನರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ನಿರ್ದಾಕ್ಷಿಣ್ಯವಾಗಿ ಕ್ರಮ ಜರುಗಿಸಲಾಗುವುದು.| ನಿಖಿಲ್ ಬಿ. ಎಸ್.ಪಿ ರಾಯಚೂರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net