

ಬೆಳಗಾವಿ: ಮಹಾನಗರದಲ್ಲಿ ಟ್ರೇಡ್ ಲೈಸೆನ್ಸ್ ಇಲ್ಲದೆ, ತೆರಿಗೆ ಕಟ್ಟದೆ ವಂಚಿಸುತ್ತಿರುವ ಅಂಗಡಿಕಾರರ ವಿರುದ್ಧ ಕಾರ್ಯಾಚರಣೆ ಆರಂಭಿಸಿರುವ ಪಾಲಿಕೆ ಎರಡು ತಿಂಗಳ ಅವಧಿಯಲ್ಲಿಯೇ 51 ಲಕ್ಷ ರೂ. ಟ್ರೇಡ್ ಲೈಸೆನ್ಸ್ ಶುಲ್ಕ ಸಂಗ್ರಹಿಸಿದೆ.
ಮಹಾನಗರ ಪಾಲಿಕೆ ಆದಾಯ ಮೂಲಗಳಲ್ಲಿ ಟ್ರೇಡ್ ಲೈಸೆನ್ಸ್ ಕೂಡ ಒಂದಾಗಿದೆ. ಆದರೆ, ಅಂದಾಜು 15 ಸಾವಿರ ವ್ಯಾಪಾರಿಗಳ ಪೈಕಿ 3 ಸಾವಿರ ಅಂಗಡಿಕಾರರು ಮಾತ್ರ ಟ್ರೇಡ್ ಲೈಸೆನ್ಸ್ ತೆಗೆದುಕೊಂಡಿದ್ದಾರೆ. ಇನ್ನುಳಿದ ವ್ಯಾಪಾರಿಗಳು ಪಾಲಿಕೆಯಿಂದ ಯಾವುದೇ ರೀತಿಯ ಪರವಾನಗಿ ಪಡೆದುಕೊಂಡಿಲ್ಲ. ತೆರಿಗೆ ಕಟ್ಟುತ್ತಿಲ್ಲ. ಕೆಲವರು ವರ್ಷಗಳಿಂದ ಟ್ರೇಡ್ ಲೈಸೆನ್ಸ್ ನವೀಕರಣ ಮಾಡಿಕೊಳ್ಳದಿರುವುದು, ಬಾಕಿ ಶುಲ್ಕ ನೀಡದೆ ಸತಾಯಿಸುತ್ತಿದ್ದಾರೆ. ಈ ಹಿನ್ನೆಲೆ ಪಾಲಿಕೆ ಅಧಿಕಾರಿಗಳ ಟ್ರೇಡ್ ಲೈಸೆನ್ಸ್ ಅಭಿಯಾನದ ಮೂಲಕ ಅಂಗಡಿಕಾರರಿಗೆ ಬಿಸಿ ಮುಟ್ಟಿಸಿದ್ದಾರೆ.
ನಾಲ್ಕೈದು ವರ್ಷಗಳ ಅವಧಿಯಲ್ಲಿ ಶೇ.25ರಷ್ಟು ಅಂಗಡಿಕಾರರು ಟ್ರೇಡ್ ಲೈಸೆನ್ಸ್ ನವೀಕರಣ ಮಾಡಿಕೊಂಡಿಲ್ಲ. ಕೆಲವರು ಒಂದು ಪರವಾನಗಿ ಹೆಸರಿನಲ್ಲಿ ನಾಲ್ಕು ಅಂಗಡಿ ನಡೆಸುತ್ತಿದ್ದಾರೆ. ಹೀಗಾಗಿ, ವಾರ್ಷಿಕ 2 ಕೋಟಿ ರೂ. ಟ್ರೇಡ್ ಲೈಸೆನ್ಸ್ ಶುಲ್ಕ ಸಂಗ್ರಹ ಗುರಿ ಮುಟ್ಟಲು ಸಾಧ್ಯವಾಗುತ್ತಿಲ್ಲ. ಮಹಾನಗರ ಪಾಲಿಕೆ, ದಂಡು ಮಂಡಳಿ ಪ್ರದೇಶ ಹಾಗೂ ಮಧ್ಯಮ ಮತ್ತು ಸಣ್ಣ ಕೈಗಾರಿಕೆಗಳ ಇಲಾಖೆಗಳಡಿಯಲ್ಲಿ ಅಂದಾಜು 28 ಸಾವಿರಕ್ಕೂ ಅಧಿಕ ಅಂಗಡಿ, ವಾಣಿಜ್ಯ ಮಳಿಗೆ, ಹೋಟೆಲ್ ಕಾರ್ಯನಿರ್ವಹಿಸುತ್ತಿವೆ. ಆದರೆ, ಶೇ.45 ರಷ್ಟು ಅಂಗಡಿಕಾರರು ಟ್ರೇಡ್ ಲೈಸೆನ್ಸ್ ಪಡೆದುಕೊಂಡಿಲ್ಲ. ಇದರಿಂದಾಗಿ ವಾರ್ಷಿಕ ಸರ್ಕಾರಕ್ಕೆ ಅಂದಾಜು 20 ಕೋಟಿ ರೂ. ವರೆಗೆ ನಷ್ಟವಾಗುತ್ತಿದೆ. ಹಾಗಾಗಿ ಸರ್ಕಾರದ ಸೂಚನೆ ಮೇರೆಗೆ ಅಂಗಡಿಗಳ ಮೇಲೆ ದಾಳಿ ನಡೆಸಿ ಪರಿಶೀಲನೆ ನಡೆಸಲಾಗುತ್ತಿದೆ.
ನಗರದಲ್ಲಿ ಟ್ರೇಡ್ ಲೈಸನ್ಸ್ ಅಭಿಯಾನ ಆರಂಭಿಸಿದ್ದು, ಕೇವಲ ಎರಡೂವರೆ ತಿಂಗಳು ಅವಧಿಯಲ್ಲಿ ಅಂದಾಜು 50 ಲಕ್ಷಕ್ಕೂ ಅಧಿಕ ಶುಲ್ಕ ವಸೂಲಿ ಮಾಡಲಾಗಿದೆ. ಎಲ್ಲ ಅಂಗಡಿಕಾರರಿಗೆ ಲೈಸೆನ್ಸ್ ಕಡ್ಡಾಯಗೊಳಿಸಲಾಗಿದ್ದು, ಸಮಯಕ್ಕೆ ಸರಿಯಾಗಿ ತೆರಿಗೆ ಕಟ್ಟುವ ಮೂಲಕ ವ್ಯಾಪಾರಿಗಳು ಪಾಲಿಕೆಗೆ ಸಹಕರಿಸುವಂತೆ ವಿನಂತಿಸಲಾಗಿದೆ. | ಶುಭ ಬಿ., ಪಾಲಿಕೆ ಆಯುಕ್ತೆ