50ಕ್ಕೂ ಹೆಚ್ಚು ಕಾರ್ಯಕರ್ತರ ವಶ

h22-Protest 3
Published on

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ

ಎನ್​ಐಎ ದಾಳಿ ಖಂಡಿಸಿ ನಗರದ ಕೌಲ್​ಪೇಟೆಯಲ್ಲಿ ಪರವಾನಗಿ ಇಲ್ಲದೆ ದಿಢೀರ್ ಸಂಚಾರ ತಡೆ ನಡೆಸಿದ 50ಕ್ಕೂ ಹೆಚ್ಚು ಪಾಪೂಲರ್ ಫ್ರಂಟ್ ಆಫ್ ಇಂಡಿಯಾ(ಪಿಎಫ್​ಐ), ಸೋಸಿಯಲಿಸ್ಟ್, ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್​ಡಿಪಿಐ) ಕಾರ್ಯಕರ್ತರನ್ನು ಗುರುವಾರ ಪೊಲೀಸರು ವಶಕ್ಕೆ ಪಡೆದರು.

ಗೋ ಬ್ಯಾಕ್ ಎನ್​ಐಎ, ಗೋ ಬ್ಯಾಕ್ ಎನ್​ಐಎ ಎಂದು ಕಾರ್ಯಕರ್ತರು ಘೊಷಣೆ ಕೂಗಿದರು. ಪುಣೆ-ಬೆಂಗಳೂರು ಮುಖ್ಯ ರಸ್ತೆ ಬಂದ್ ಮಾಡಿದರು. ಪ್ರತಿಭಟನೆ ತೀವ್ರ ಸ್ವರೂಪವಾಗಿದ್ದರಿಂದ ಸ್ಥಳದಲ್ಲಿ ಕೆಲಹೊತ್ತು ಪ್ರಕ್ಷುಬ್ಧ ವಾತಾವರಣ ನಿರ್ವಣವಾಗಿತ್ತು. ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದರು. ಪ್ರತಿಭಟನಾ ಸ್ಥಳದಿಂದ ಕಾಲ್ಕಿತ್ತುತ್ತಿದ್ದ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದು ವಾಹನ ಹತ್ತಿಸಿದರು. ಪ್ರತಿಭಟನೆ ಇನ್ನಷ್ಟು ತೀವ್ರ ಸ್ವರೂಪ ಪಡೆಯಬಾರದು ಎನ್ನುವ ಹಿನ್ನೆಲೆಯಲ್ಲಿ ವಿವಿಧ ಠಾಣೆಗಳ ಇನ್​ಸ್ಪೆಕ್ಟರ್ ಹಾಗೂ ಪೇದೆಗಳನ್ನು ಸ್ಥಳದಲ್ಲಿ ನಿಯೋಜಿಸಲಾಗಿದೆ. ಡಾಕಪ್ಪ ಸರ್ಕಲ್​ನಲ್ಲಿ ಪೊಲೀಸ್ ವಾಹನಗಳು, ಪೊಲೀಸರು ಠಿಕಾಣಿ ಹೂಡಿದ್ದಾರೆ.

ತಳ್ಳಾಟದಲ್ಲಿ ಬಿದ್ದ ಡಿಸಿಪಿ

ಪ್ರತಿಭಟನೆ ನಡೆಸುತ್ತಿದ್ದ ಕಾರ್ಯಕರ್ತರನ್ನು ಹಿಡಿದು ವಾಹನದಲ್ಲಿ ಹತ್ತಿಸುವ ವೇಳೆ ತಳ್ಳಾಟ, ನೂಕಾಟ ನಡೆಯಿತು. ಈ ವೇಳೆ ಕಾನೂನು ಮತ್ತು ಸುವ್ಯವಸ್ಥೆ ಡಿಸಿಪಿ ಸಾಹಿಲ್ ಬಾಗ್ಲಾ ಅವರು ಜಾರಿ ಬಿದ್ದರು.

ಸ್ಥಳಕ್ಕೆ ಲಾಭೂರಾಮ ಭೇಟಿ

ಹು-ಧಾ ಪೊಲೀಸ್ ಆಯುಕ್ತ ಲಾಭೂರಾಮ , ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದರು. ಓಡಿ ಹೋಗುತ್ತಿದ್ದ ಪಿಎಫ್​ಐ ಕಾರ್ಯಕರ್ತರನ್ನು ಹಿಡಿದು ವಾಹನ ಹತ್ತಿಸಿದರು.

'ಪ್ರತಿಭಟನೆ ನಡೆಸುತ್ತಿದ್ದ 50ಕ್ಕೂ ಹೆಚ್ಚು ಕಾರ್ಯಕರ್ತರನ್ನು ವಶಕ್ಕೆ ಪಡೆಯಲಾಗಿದೆ. ಮುಂಜಾಗ್ರತಾ ಕ್ರಮವಾಗಿ ಹುಬ್ಬಳ್ಳಿ-ಧಾರವಾಡದಲ್ಲಿ ಪೊಲೀಸರನ್ನು ನಿಯೋಜಿಸಲಾಗಿದೆ'.

-ಲಾಭೂರಾಮ, ಹು-ಧಾ ಪೊಲೀಸ್ ಆಯುಕ್ತ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net