

ರಾಯಚೂರು ಕಮ್ಯುನಿಸ್ಟ್ ಚಳವಳಿ ಎಂಬುವುದು ಕೇವಲ ಕಮ್ಯುನಿಸ್ಟ್ ಪಕ್ಷದ ಸದಸ್ಯರಿಗೆ ಮಾತ್ರವಲ್ಲ. ಸಾಮಾನ್ಯ ಜೀವನ ನಡೆಸುತ್ತಿರುವ ಜನರ, ಬಡವರ, ಕಾರ್ಮಿಕರ, ರೈತರಿಗಾಗಿ ಮಿಡಿಯುವ ಮನುಷ್ಯರೆಲ್ಲರೂ ಕಮ್ಯುನಿಸ್ಟ್ ಚಳವಳಿಯ ಭಾಗವೇ ಆಗಿರುತ್ತಾರೆಂದು ಸಿಪಿಐಎಂ ರಾಜ್ಯ ಕಾರ್ಯದರ್ಶಿ ಡಾ.ಕೆ.ಪ್ರಕಾಶ ಹೇಳಿದರು.
ನಗರದ ಮಡಿವಾಳ ಮಾಚಿದೇವ ಸಮುದಾಯ ಭವನದಲ್ಲಿ ಶನಿವಾರ ಭಾರತೀಯ ಕಮ್ಯುನಿಸ್ಟ್ ಜಿಲ್ಲಾ ಘಟಕದಿಂದ ಹಮ್ಮಿಕೊಂಡಿದ್ದ 50 ವರ್ಷದ ಸಂಭ್ರಾಮಾಚರಣೆ ಕಾರ್ಯಕ್ರಮವನ್ನು ಹಲಗೆ ಬಾರಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು. ಮೊಟ್ಟಮೊದಲು ಸಂಪೂರ್ಣ ಸ್ವಾತಂತ್ರ್ಯ ಮತ್ತು ಸ್ವರಾಜ್ಯದ ಬೇಡಿಕೆಯನ್ನಿಟ್ಟಿದ್ದು, ಕಮ್ಯುನಿಸ್ಟ್ ಪಕ್ಷವಾಗಿದೆ. ಆದರೂ ಬ್ರಿಟೀಷರ ಕಾಲದಲ್ಲಿ ನಿಷೇಧಿತ ಪಕ್ಷವೆಂದು ಕಮ್ಯುನಿಸ್ಟ್ ಪಕ್ಷವನ್ನು ನೋಡಲಾಗುತ್ತಿತ್ತು.
ಈ ಹಿಂದೆ ಪಕ್ಷದಲ್ಲಿದ್ದು ಹೋರಾಡಿದ್ದ ಕಾಮ್ರಡ್‌ಗಳು ಮಡಿದಿದ್ದಾರೆ. ಆ ಹಳೆಯ ಕಹಿ ನೆನಪುಗಳನ್ನು ಅನುಭವವಾಗಿ ಪಡೆದುಕೊಂಡು ಮುಂದೆ ಅತ್ಯುತ್ತಮ ಚಳವಳಿಯನ್ನು ರೂಪಿಸಲು ಪ್ರತಿಯೊಬ್ಬರು ಜತೆಗೂಡಬೇಕಿದೆ ಎಂದರು.
ಜಿಲ್ಲೆಯಲ್ಲಿ ಕಮ್ಯುನಿಸ್ಟ್ ಪಕ್ಷ ಆರಂಭವಾಗಿ 50 ವರ್ಷ ಗತಿಸಿರುವುದು ಸಾಧಾರಣ ವಿಷಯವಲ್ಲ. ಹಿಂದಿನ 50 ವರ್ಷಗಳ ಹೋರಾಟದ ಅಂಶಗಳು ಮುಂದಿನ ಹೋರಾಟಕ್ಕೆ ದಾರಿಯಾಗಬೇಕಿದೆ. ಕಮ್ಯುನಿಸ್ಟ್ ಚಳವಳಿ ಇತರೆ ರಾಜಕೀಯ ಚಳವಳಿಗಳಂತೆ ಅಲ್ಲ. 1920ರಲ್ಲಿಯೇ ದೇಶದಲ್ಲಿ ಆರಂಭವಾದ ಕಮ್ಯುನಿಸ್ಟ್ ಪಕ್ಷವನ್ನು ಬಹಿರಂಗ ಪಕ್ಷವನ್ನಾಗಿ ಇಂದಿಗೂ ಮಾಡಲು ಆಗಿಲ್ಲ. ಬ್ರಿಟೀಷರ ಕಾಲದಲ್ಲಿ ಧ್ವಜವನ್ನೂ ಹಿಡಿಯಲು ಸಹ ಕಮ್ಯುನಿಸ್ಟ್ ಪಕ್ಷದ ಸದಸ್ಯರಿಗೆ ಅವಕಾಶ ನೀಡಿರಲಿಲ್ಲ ಎಂದು ತಿಳಿಸಿದರು.
ಕಾರ್ಯಕ್ರಮಕ್ಕೂ ಮೊದಲು ಕಮ್ಯುನಿಸ್ಟ್ ಪಕ್ಷದ ಚಳವಳಿಗೆ ದುಡಿದು ಮರಣ ಹೊಂದಿದ ಪುರುಷೋತ್ತಮ, ಬಾಳಪ್ಪ, ಶಿವಪುತ್ರಪ್ಪ ಭೇರಿ, ಮಲ್ಲಯ್ಯ, ರಾಜು, ತಿಪ್ಪಣ್ಣ, ಬಾಲಚಂದ್ರ, ಡಾ.ಎನ್.ಕುಮಾರ, ನಾರಾಯಣ, ಗೋಪಾಲ ನಾಯಕ ಸೇರಿದಂತೆ ಇತರರನ್ನು ಮೌನಾಚರಣೆ ಮಾಡುವ ಮೂಲಕ ಸ್ಮರಿಸಲಾಯಿತು.
ಈ ಸಂದರ್ಭದಲ್ಲಿ ಪ್ರಮುಖರಾದ ಬಿ.ಲಿಂಗಪ್ಪ, ಕೆ.ನೀಲಾ, ಚಂದಪ್ಪ ಹೊಸಕೇರಾ, ಚಂದ್ರಶೇಖರ ಬಾಳೆ, ರಾಘವೇಂದ್ರ ಕುಷ್ಟಗಿ, ಕೆ.ಜಿ.ವೀರೇಶ, ಬಿ.ಬಸವರಾಜ, ಹೆಚ್.ವಿ.ಗುಡಿ, ಪೆಂಚಲಯ್ಯ, ಗಿರಿಯಪ್ಪ, ಶ್ಯಾಮಲಾ, ನರಸಣ್ಣನಾಯಕ, ಶಕುಂತಲಾ ಪಾಟೀಲ್, ರಮೇಶ ವೀರಾಪುರ, ಡಿ.ಎಸ್.ಶರಣಬಸವ, ಶಾಂತರಾಮ, ದೇವೇಂದ್ರ ಸೇರಿ ಅನೇಕರು ಇದ್ದರು.