ಧಾರವಾಡ ಜಿಲ್ಲೆಯಲ್ಲಿ 5000ದತ್ತ ಕರೊನಾ ದಾಪುಗಾಲು!

carona logo
Published on

ಧಾರವಾಡ: ಜಿಲ್ಲೆಯಲ್ಲಿ ಮಂಗಳವಾರ 188 ಕರೊನಾ ಪ್ರಕರಣಗಳು ಪತ್ತೆಯಾಗಿದ್ದು, ಒಟ್ಟು ಪ್ರಕರಣಗಳ ಸಂಖ್ಯೆ 4832ಕ್ಕೇರಿದೆ. ಈವರೆಗೆ 2226 ಜನ ಗುಣವಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. 2443 ಪ್ರಕರಣಗಳು ಸಕ್ರಿಯವಾಗಿವೆ. 40 ಜನ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಈವರೆಗೆ ಒಟ್ಟು 163 ಜನ ಮೃತಪಟ್ಟಿದ್ದಾರೆ.

ಕೆಲ ದಿನಗಳಿಂದ ಪ್ರತಿದಿನದ ಪ್ರಕರಣ ಸಂಖ್ಯೆ 180ರ ಆಸುಪಾಸಿನಲ್ಲಿವೆ. ಹೀಗಾಗಿ ಒಟ್ಟು ಸಂಖ್ಯೆ ಬುಧವಾರವೇ 5 ಸಾವಿರ ಮೀರುವ ಸಾಧ್ಯತೆಯಿದೆ.

ಹುಬ್ಬಳ್ಳಿ ನಗರದಲ್ಲೇ ಅತಿ ಹೆಚ್ಚು ಪ್ರಕರಣ ಬರುತ್ತಿದೆ. ಗ್ರಾಮೀಣದಲ್ಲಿಯೂ ಅಲ್ಲಲ್ಲಿ ಕರೊನಾ ಸೋಂಕಿತರು ಕಂಡುಬರುತ್ತಿದ್ದಾರೆ.

ಮಂಗಳವಾರ ಪತ್ತೆಯಾದ 188 ಪ್ರಕರಣಗಳಲ್ಲಿ 90ಕ್ಕಿಂತ ಹೆಚ್ಚು ಹುಬ್ಬಳ್ಳಿ ತಾಲೂಕಿನದೇ ಆಗಿವೆ. ಧಾರವಾಡ ತಾಲೂಕಿನಲ್ಲಿ 30ರಷ್ಟು ಜನರಲ್ಲಿ ಕರೊನಾ ಖಚಿತವಾಗಿದೆ.

ಅಳ್ನಾವರದ ಬೆಣಚಿ ಲಕ್ಷ್ಮೀ ಗುಡಿ, ಆನಂದ ಭವನ, ಕುಂದಗೋಳ ತಾಲೂಕಿನ ಗುರುವಿನ ಹಳ್ಳಿ, ಕಲಘಟಗಿ ತಾಲೂಕಿನ ಮಿಶ್ರಿಕೋಟಿ, ನವಲಗುಂದ ಪೂಜಾರ ಗಲ್ಲಿ, ದಾಟನಾಳದಲ್ಲಿ ಸಹ ಕರೊನಾ ಸೋಂಕಿತರು ಪತ್ತೆಯಾಗಿದ್ದಾರೆ.

ಬೇರೆ ಜಿಲ್ಲೆಯ 10ಕ್ಕಿಂತ ಹೆಚ್ಚು ಜನರಿಗೆ ಧಾರವಾಡ ಜಿಲ್ಲೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಪೊಲೀಸ್ ಸೇರಿ 8 ಸಾವು: ಹುಬ್ಬಳ್ಳಿ ಘಂಟಿಕೇರಿ ಠಾಣೆ ಹೆಡ್ ಕಾನ್​ಸ್ಟೇಬಲ್ ಶಿವಾನಂದ ಲಮಾಣಿ (57) ಸೇರಿ ಜಿಲ್ಲೆಯಲ್ಲಿ ಕೋವಿಡ್ ಪಾಸಿಟಿವ್ ಹೊಂದಿದ್ದ 8 ಜನರು ಮೃತಪಟ್ಟಿದ್ದಾರೆ. ಕಲಘಟಗಿ ತಾಲೂಕಿನ ಹಿರೇಹೊನ್ನಳ್ಳಿ ಗ್ರಾಮದ ಗಣೇಶ ನಗರದ 62 ವರ್ಷದ ವೃದ್ಧ, ಹುಬ್ಬಳ್ಳಿ ಗಣೇಶ ಪೇಟೆಯ 70 ವರ್ಷದ ವೃದ್ಧ, ಗೋಕುಲ ರಸ್ತೆಯ 63 ವರ್ಷದ ವೃದ್ಧೆ, ಈಶ್ವರ ನಗರದ 55 ವರ್ಷದ ಪುರುಷ, ಕಾರವಾರ ರಸ್ತೆ ಪೊಲೀಸ್ ವಸತಿಗೃಹದ 57 ವರ್ಷದ ಪುರುಷ, ಗೋಕುಲ ರಸ್ತೆ ಭಾಸ್ಕರ್ ಭವನ ಬಳಿಯ 68 ವರ್ಷದ ವೃದ್ಧ, ಧಾರವಾಡ ರಸೂಲಪುರ ಓಣಿಯ 68 ವರ್ಷದ ವೃದ್ಧೆ ಹಾಗೂ ಧಾರವಾಡದ 45 ವರ್ಷದ ಪುರುಷ ಮೃತಪಟ್ಟಿದ್ದಾರೆ. ಕಾರವಾರ ರಸ್ತೆ ಪೊಲೀಸ್ ವಸತಿಗೃಹ ನಿವಾಸಿಯಾಗಿದ್ದ ಶಿವಾನಂದ ಲಮಾಣಿ ಅವರು ಕರ್ತವ್ಯದ ಮೇಲಿದ್ದಾಗ ಸೋಂಕು ತಗುಲಿತ್ತು. ಪಾಸಿಟಿವ್ ಖಚಿತವಾಗಿದ್ದರಿಂದ ಜು. 27ರಂದು ಅವರನ್ನು ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ಹಿಂದೆ ವಿದ್ಯಾನಗರ ಠಾಣೆ ಎಎಸ್​ಐ ಒಬ್ಬರು ಕರೊನಾದಿಂದ ತೀರಿಕೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net