

ಬೆಂಗಳೂರು: ಆತ್ಮ ನಿರ್ಭರ ಯೋಜನೆಯ ಅನುಷ್ಠಾನದಲ್ಲಿ ದೇಶದಲ್ಲಿಯೇ ಕರ್ನಾಟಕ ರಾಜ್ಯವು ಮುಂದಿದೆ. ಈ ಮೂಲಕ ಪ್ರಥಮ ಸ್ಥಾನದಲ್ಲಿ ಈ ಯೋಜನೆಯನ್ನು ಅನುಷ್ಠಾನಗೊಳಿಸಿದ್ದು, ಇದಕ್ಕೆ ಕೇಂದ್ರ ಹಾಗೂ ನಬಾರ್ಡ್ ಸಹ ಶ್ಲಾಘನೆ ವ್ಯಕ್ತಪಡಿಸಿದೆ ಎಂದು ಸಹಕಾರ ಸಚಿವರಾದ ಎಸ್.ಟಿ.ಸೋಮಶೇಖರ್ ಹೇಳಿದರು.
ವಿಧಾನಸೌಧ ಸಮ್ಮೇಳನ ಸಭಾಂಗಣದಲ್ಲಿ ಮಂಗಳವಾರ ಏರ್ಪಡಿಸಲಾಗಿದ್ದ ಆರ್ಥಿಕ ಸ್ಪಂದನ ಹಾಗೂ ಡಿಸಿಸಿ ಬ್ಯಾಂಕುಗಳ ಪ್ರಗತಿ ಪರಿಶೀಲನಾ ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಆತ್ಮನಿರ್ಭರ ಯೋಜನೆಯಡಿ 1 ಸಾವಿರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಿಗೆ ಪ್ರತಿ ಸಂಘಕ್ಕೆ 2 ಕೋಟಿ ರೂಪಾಯಿಯಂತೆ ಸಾಲ ನೀಡಿಕೆಗೆ ಅವಕಾಶವಿದ್ದು, ಈ ಪೈಕಿ 1549 ಸಹಕಾರ ಸಂಘಗಳನ್ನು ಗುರುತಿಸಿ, 949 ಪ್ಯಾಕ್ಸ್ ಗಳಿಗೆ ಪ್ರಸ್ತಾವನೆ ಸಲ್ಲಿಕೆಯಾಗಿತ್ತು. ಇದರಲ್ಲಿ 614 ಪ್ಯಾಕ್ಸ್ ಗಳಿಗೆ 198.96 ಕೋಟಿ ರೂಪಾಯಿ ಮಂಜೂರಾಗಿರುತ್ತದೆ ಎಂದು ತಿಳಿಸಿದರು.
ಹೀಗಾಗಿ ಇದರ ಅನುಷ್ಠಾನಕ್ಕಾಗಿ 21 ಡಿಸಿಸಿ ಬ್ಯಾಂಕ್, ಅಪೆಕ್ಸ್ ಬ್ಯಾಂಕ್ ಹಾಗೂ ಪ್ಯಾಕ್ಸ್ ಗಳ ಮುಖಾಂತರ ಸಮರ್ಪಕವಾಗಿ ಕಾರ್ಯನಿರ್ವಹಿಸಿವೆ. ಇದಕ್ಕೋಸ್ಕರ ಅಧಿಕಾರಿಗಳ ಹಾಗೂ ಆಡಳಿತ ಮಂಡಳಿಗಳಿಗೆ ಅಭಿನಂದನೆ ಸಲ್ಲಿಸುವುದಾಗಿ ಸಚಿವರಾದ ಸೋಮಶೇಖರ್ ಹೇಳಿದರು.
ಸಹಕಾರ ಕ್ಷೇತ್ರದಲ್ಲಿ 5 ಸಾವಿರ ಹುದ್ದೆಗಳ ನೇಮಕಕ್ಕೆ ಸೂಚನೆ: ನಿರುದ್ಯೋಗಿಗಳಿಗೆ ಉದ್ಯೋಗ ಸಿಗಬೇಕು, ಎಲ್ಲರಿಗೂ ಅನುಕೂಲವಾಗಬೇಕು ಎಂಬ ನಿಟ್ಟಿನಲ್ಲಿ ಎಲ್ಲ ಹಾಲು ಒಕ್ಕೂಟಗಳು, ಕ್ರೆಡಿಟ್ ಯೂನಿಯನ್ ಗಳು ಸೇರಿದಂತೆ ಸಹಕಾರ ಇಲಾಖೆಗಳ ಎಲ್ಲ ಸಂಘ ಸಂಸ್ಥೆಗಳಿಗೂ ಮನವಿ ಮಾಡಿದ್ದು, 5 ಸಾವಿರ ಹುದ್ದೆಗಳನ್ನು ಸೃಜಿಸಲು ತೀರ್ಮಾನಿಸಲಾಗಿದೆ. ಈ ನಿಟ್ಟಿನಲ್ಲಿ ಈಗಾಗಲೇ ಕೆಲವು ಕಡೆ ಅರ್ಜಿ ಕರೆಯಲಾಗಿದೆ ಎಂದು ಸಚಿವರಾದ ಸೋಮಶೇಖರ್ ತಿಳಿಸಿದರು.
ಕೃಷಿ ಸಾಲದಲ್ಲಿ ಶೆ. 90.56 ಸಾಧನೆ; ಇಲ್ಲಿಯವರೆಗೆ ಒಟ್ಟು ರೂ. 14979.73 ಸಾಲ ವಿತರಣೆ: 25-02-2021 ರವರೆಗೆ ಒಟ್ಟು 21.64 ಲಕ್ಷ ರೈತರಿಗೆ ರೂ.14179.22 ಕೋಟಿಗಳ ಅಲ್ಪಾವಧಿ ಕೃಷಿ ಸಾಲ ಮತ್ತು 0.36 ಲಕ್ಷ ರೈತರಿಗೆ ರೂ.800.51 ಕೋಟಿಗಳ ಮಧ್ಯಮಾವಧಿ/ದೀರ್ಘವಧಿ ಸಾಲ ವಿತರಣೆ ಮಾಡಿದ್ದು, ಒಟ್ಟು ರೂ. 14979.73 ವಿತರಿಸಲಾಗಿದೆ ಹಾಗೂ ಶೇ.90.56 ರ ಪ್ರಗತಿ ಸಾಧಿಸಲಾಗಿದೆ ಎಂದು ಸಹಕಾರ ಸಚಿವರಾದ ಎಸ್.ಟಿ.ಸೋಮಶೇಖರ್ ಮಾಹಿತಿ ನೀಡಿದರು.
ಅಲ್ಪಾವಧಿ ಸಾಲ ಶೇ.107, ಮಧ್ಯಾವಧಿ ಸಾಲ ಶೇ. 111, ದೀರ್ಘಾವಧಿ ಸಾಲ ಶೇ.76, ಸ್ವಸಹಾಯ ಗುಂಪುಗಳ ಸಾಲ ಶೇ.71, ಕಾಯಕ ಯೊಜನೆಯಡಿ ಶೇ. 61, ಬಡವರಬಂಧು ಯೋಜನೆಯಡಿ ಶೇ. 52, ಹೈನುಗಾರಿಕೆ / ಮೀನುಗಾರಿಕೆ ಯೋಜನೆಯಡಿ ಶೇ.97, ಕೃಷಿಯೇತರ ಸಾಲದಲ್ಲಿ ಶೇ. 92, ಪಟ್ಟಣ ಬ್ಯಾಂಕ್ ಗಳಲ್ಲಿ ಶೇ. 87, ಕ್ರೆಡಿಟ್ ಸೊಸೈಟಿಯಲ್ಲಿ ಶೇ. 92 ಹಾಗೂ ವಿವಿಧೋದ್ದೇಶ ಯೋಜನೆಗಳಡಿ ಶೇ.90ರಷ್ಟು ಸಾಲ ನೀಡಲಾಗಿದ್ದು, ಒಟ್ಟಾರೆಯಾಗಿ ಶೇ. 96 ಸಾಲವಿತರಣೆಯಲ್ಲಿ ಗುರಿ ಮುಟ್ಟಲಾಗಿದೆ. ಹಾಕಿ ಗುರಿಯನ್ನು ಈ ತಿಂಗಳೊಳಗೆ ಮುಟ್ಟುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದು ಸಚಿವರು ತಿಳಿಸಿದರು. (ವಿಜಯವಾಣಿ)