5 ಸಾವಿರ ಶಿವಲಿಂಗ ಶುಭ್ರಗೊಳಿಸಿ, ಪೂಜೆ

Five Thousand Shivalingas purified and worshipped
Published on

ಲಕ್ಷ್ಮೇಶ್ವರ: ಪಟ್ಟಣದ ಅಗಡಿ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳು ಸಮೀಪದ ಶ್ರೀ ಮುಕ್ತಿಮಂದಿರ ಧರ್ಮ ಕ್ಷೇತ್ರದಲ್ಲಿ ತ್ರಿಕೋಟಿ ಲಿಂಗ ಸ್ಥಾಪನೆಗಾಗಿ ಸಿದ್ಧಗೊಂಡಿರುವ 5 ಸಾವಿರ ಶಿವಲಿಂಗಗಳನ್ನು ಶುಭ್ರಗೊಳಿಸಿ, ಪೂಜೆ ಸಲ್ಲಿಸುವ ಮೂಲಕ ಶ್ರದ್ಧಾಭಕ್ತಿಯಿಂದ ಶಿವರಾತ್ರಿ ಹಬ್ಬದಲ್ಲಿ ಪಾಲ್ಗೊಂಡರು.

ಪ್ರಾಚಾರ್ಯರಾದ ಡಾ.ಪರಶುರಾಮ ಬಾರ್ಕಿ ಮಾರ್ಗದರ್ಶನ ಮತ್ತು ಎನ್‌ಎಸ್‌ಎಸ್ ಘಟಕದ ಅಧಿಕಾರಿ ಪ್ರೊ. ಸೋಮಶೇಖರ ಕೆರಿಮನಿ ನೇತೃತ್ವದಲ್ಲಿ ನೂರಾರು ವಿದ್ಯಾರ್ಥಿಗಳು ಧರ್ಮಕ್ಷೇತ್ರಕ್ಕೆ ಆಗಮಿಸಿ ಶಿವಲಿಂಗಗಳನ್ನು ನೀರಿನಿಂದ ಶುಭ್ರಗೊಳಿಸಿ ವಿಭೂತಿ ಲೇಪಿಸಿ, ಪುಷ್ಪ, ಬಿಲ್ವಪತ್ರೆಗಳಿಂದ ಅಲಂಕರಿಸಿದರು. ಪೂಜಿತಗೊಂಡ ಶಿವಲಿಂಗಗಳನ್ನು ಆಗಮಿಸಿದ ಅಪಾರ ಭಕ್ತರು ಸ್ಪರ್ಶಿಸಿ ಭಕ್ತಿಯಿಂದ ನಮಿಸಿದರು.

ಕಾಲೇಜಿನ ಮುಖ್ಯ ಆಡಳಿತಾಧಿಕಾರಿ ಪ್ರೊ.ವಿಕ್ರಂ ಶಿರೋಳ, ಪ್ರೊ.ಷಣ್ಮುಖ ಗಡ್ಡೆಣ್ಣವರ, ಪ್ರೊ.ಅರುಣ ಕುಂಬಿ, ಪ್ರೊ.ರವಿ ದುರಗಣ್ಣವರ, ಪ್ರೊ.ಸೋಮು ನವಲಗುಂದ, ಪ್ರೊ.ಸತೀಶ ಕುಮಾರ, ಪ್ರೊ.ಸಾವಿತ್ರಿ ವಾಲಿ, ಶಿವಲಿಂಗಪ್ಪ ಮತ್ತು ಸಿಬ್ಬಂದಿ, ವಿದ್ಯಾರ್ಥಿಗಳು ಸೇವಾ ಕಾರ್ಯದಲ್ಲಿ ಪಾಲ್ಗೊಂಡಿದ್ದರು.

ಶಿವರಾತ್ರಿ ದಿನ ಕ್ಷೇತ್ರದಲ್ಲಿನ ಶಿವಲಿಂಗಗಳನ್ನು ಶುಭ್ರಗೊಳಿಸಿ ಪೂಜಿಸಲಾಗುತ್ತದೆ. ಪ್ರತಿ ವರ್ಷ ಶಿವರಾತ್ರಿ ದಿನ ಉಪವಾಸ ವ್ರತಾಚರಣೆಯೊಂದಿಗೆ ಶಿವಲಿಂಗ ಪೂಜಾ ಸೇವೆ ಮಾಡುವುದು ತಮ್ಮ ಭಾಗ್ಯವೆಂದು ಕಾಲೇಜಿನ ವಿದ್ಯಾರ್ಥಿಗಳು ಸಂತಸ ವ್ಯಕ್ತಪಡಿಸಿದರು.

ಪ್ರತಿವರ್ಷ ಶಿವರಾತ್ರಿ ಹಬ್ಬದ ದಿನ ಅಗಡಿ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳು ಸ್ವಯಂಪ್ರೇರಣೆ ಮತ್ತು ಭಕ್ತಿಯಿಂದ ಕ್ಷೇತ್ರದಲ್ಲಿನ ಸಾವಿರಾರು ಶಿವಲಿಂಗಗಳಿಗೆ ಜಲ ಪ್ರೋಕ್ಷಣೆ ಮಾಡಿ ಅಲಂಕರಿಸುವ ಮೂಲಕ ಶಿವರಾತ್ರಿ ಜಾತ್ರಾಮಹೋತ್ಸವಕ್ಕೆ ಜೀವಕಳೆ ನೀಡುತ್ತಿರುವುದು ನಮಗೆ ಸಂತಸ ತಂದಿದೆ ಎಂದು ಕ್ಷೇತ್ರದ ಪಟ್ಟಾಧ್ಯಕ್ಷರಾದ ಶ್ರೀ ವಿಮಲ ರೇಣುಕ ಶ್ರೀಗಳು ಹೇಳಿದರು.

ಶಿವರಾತ್ರಿಯ ನಿಮಿತ್ತ ಅಪಾರ ಭಕ್ತರು ಮುಕ್ತಿಮಂದಿರ ಧರ್ಮಕ್ಷೇತ್ರಕ್ಕೆ ಆಗಮಿಸಿ ಲಿಂ.ವೀರಗಂಗಾಧರ ಜಗದ್ಗುರುಗಳ ಕರ್ತೃ ಗದ್ದುಗೆ, ಶಿವಲಿಂಗ ದರ್ಶನ ಮತ್ತು ಕ್ಷೇತ್ರದ ಪಟ್ಟಾಧ್ಯಕ್ಷರ ದರ್ಶನಾಶೀರ್ವಾದ ಪಡೆದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net