ಮೈಸೂರು ಮುಡಾದಲ್ಲಿ 5,000 ನಿವೇಶನಗಳು ಅಕ್ರಮ ಹಂಚಿಕೆ

muda mysore
Published on

ಮೈಸೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ)ದಲ್ಲಿ 5000ಕ್ಕೂ ಹೆಚ್ಚು ನಿವೇಶನಗಳನ್ನು ಅಕ್ರಮವಾಗಿ ಹಂಚಿ ಭೂ ದರೋಡೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ತನಿಖಾ ತಂಡ ರಚಿಸಿ ತನಿಖೆ ನಡೆಸಿ ತಪ್ಪಿತಸ್ಥರನ್ನು ಜೈಲಿಗಟ್ಟಬೇಕು. ಇಲ್ಲದಿದ್ದಲ್ಲಿ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ ದಾಖಲಿಸಲಾಗುವುದು ಎಂದು ಬಿಜೆಪಿ ರಾಜ್ಯ ಒಬಿಸಿ ಮೋರ್ಚಾ ಅಧ್ಯಕ್ಷ ರಘು ಕೌಟಿಲ್ಯ ಎಚ್ಚರಿಸಿದ್ದಾರೆ.

ಅಕ್ರಮವಾಗಿ ಹಂಚಿಕೆ ಮಾಡಿರುವ ನಿವೇಶನಗಳನ್ನು ಕೂಡಲೇ ಮುಟ್ಟುಗೋಲು ಹಾಕಿಕೊಳ್ಳಬೇಕು. ಹಗರಣದ ಕುರಿತು ಜಿಲ್ಲಾಧಿಕಾರಿ ಹಾಗೂ ಸರ್ಕಾರದ ಮಟ್ಟದ ಅಧಿಕಾರಿಗಳು ತನಿಖೆ ನಡೆಸಲು ಮುಂದಾದ ಸಂದರ್ಭ ಕಾಣದ ಕೈಯೊಂದು ತಡೆಯುತ್ತಿದೆ. ಹಾಗಾಗಿ ಮುಖ್ಯಮಂತ್ರಿ ಮಧ್ಯಪ್ರವೇಶಿಸಿ ಹಣಗರಣವನ್ನು ಸಿಬಿಐಗೆ ವಹಿಸಿಬೇಕು ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.

ಸೂರು ರಹಿತರಿಗೆ ಬಡಾವಣೆ ನಿರ್ಮಿಸಲು 2009ರ ನಿಯಮಾವಳಿಗಳಿಗೆ ತಿದ್ದುಪಡಿ ತಂದು 2015ರಲ್ಲಿ ಹಂಚಿಕೆಯ ನಿಯಮವನ್ನು ಸರ್ಕಾರ ರೂಪಿಸಿತ್ತು. ಇದರ ಉದ್ದೇಶವೇನಂದರೆ ರೈತರಿಗೂ ನಷ್ಟವಾಗದೇ ಸೂರು ರಹಿತರಿಗೂ ನಿವೇಶನ ನೀಡಿ ಯೋಜಿತವಾಗಿ ಉತ್ತಮ ಬಡಾವಣೆ ನಿರ್ಮಿಸುವ ಉದ್ದೇಶ ಹೊಂದಿತ್ತು. ಆದರೆ, ಈ ಉದ್ದೇಶಕ್ಕೆ ವಿರುದ್ಧವಾಗಿ 14 ಸೆಪ್ಟೆಂಬರ್ 2020ರ ಪ್ರಾಧಿಕಾರದ ಸಭೆಯಲ್ಲಿ ತೆಗೆದುಕೊಂಡ ನಿರ್ಣಯದಲ್ಲಿ ಈ ಹಿಂದೆ ಭೂ ಸ್ವಾಧೀನಗೊಂಡ ಪ್ರಕರಣಗಳಿಗೆ ಅನ್ವಯಿಸುವಂತೆ ನಿರ್ಣಯ ಕೈಗೊಳ್ಳಲಾಯಿತು. ಈ ನಿರ್ಣಯ ಕಾನೂನು ಬಾಹಿರ ಎಂದು 27 ಅಕ್ಟೋಬರ್ 2023 ರಂದು ಸರ್ಕಾರ ನಿರ್ಣಯವನ್ನು ರದ್ದುಪಡಿಸಿತು. ಆದಾಗ್ಯೂ ಸರ್ಕಾರದ ಆದೇಶ ಉಲ್ಲಂಘಿಸಿ ಎಗ್ಗಿಲ್ಲದೆ 50 ವರ್ಷಕ್ಕೂ ಹಿಂದೆ ಭೂ ಸ್ವಾಧೀನಗೊಂಡ ಜಮೀನುಗಳಿಗೂ ರದ್ದತಿಯಾದ ಪ್ರಾಧಿಕಾರದ ನಿರ್ಣಯ ಬಳಸಿಕೊಂಡು ಶೇ.50ರ ಅನುಪಾತದ ನಿವೇಶನಗಳ ಹಂಚಿಕೆ ಮಾಡಿ ಅವ್ಯವಹಾರ ಎಸಗಲಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಕಳೆದ 5 ವರ್ಷಗಳಿಂದ ಶೇ.50-50ರ ಅನುಪಾತ ಒಂದು ಬಹುದೊಡ್ಡ ದಂಧೆಯಾಗಿದ್ದು, ಈ ಅವಧಿಯ ಮುಡಾ ಅವ್ಯವಹಾರ ವನ್ನು ಅಮೂಲಾಗ್ರವಾಗಿ ಪರಿಶೀಲಿಸಿ ತನಿಖೆ ನಡೆಸಬೇಕು. ಬದಲಿ ನಿವೇಶನ ಹಂಚಿಕೆಯಲ್ಲಿ ಬಹುದೊಡ್ಡ ಹಗರಣ ನಡೆದಿದ್ದು, ಇದರಿಂದ ಪ್ರಾಧಿಕಾರಕ್ಕೆ ಕೋಟ್ಯಾಂತರ ರೂ. ನಷ್ಟ ಸಂಭವಿಸಿದೆ. ಮುಡಾದಲ್ಲಿ ಈ ಹಿಂದೆಯೂ ಅನೇಕ ಹಗರಣಗಳು ನಡೆದಿದ್ದು, ಇದುವರೆಗೆ ತಪ್ಪಿತಸ್ಥರಿಗೆ ಶಿಕ್ಷೆಯಾದ ಉದಾಹರಣೆ ಇಲ್ಲ. ಈಗ ನಡೆದಿರುವ ಬಹುದೊಡ್ಡ ಹಗರಣವನ್ನು ಸರ್ಕಾರ ಲಘುವಾಗಿ ಪರಿಗಣಿಸಬಾರದು. ಸ್ವತಃ ಮುಡಾ ಅಧ್ಯಕ್ಷರೇ ಅವ್ಯವಹಾರ ನಡೆದಿರುವ ಕುರಿತು ಹೇಳಿಕೆ ನೀಡಿದ್ದಾರೆ. ಹೀಗಾಗಿ ಸರ್ಕಾರ ಸೂಕ್ತ ರೀತಿಯಲ್ಲಿ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರವು ನಿವೇಶನ ರಹಿತರಿಗೆ ಸೂರು ಕಲ್ಪಿಸಿ ನಗರವನ್ನು ಯೋಜಿತವಾಗಿ ಬೆಳೆಸಬೇಕು ಎಂಬ ಉದ್ದೇಶದಿಂದ ಮೈಸೂರು ಸಂಸ್ಥಾನದ ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ್ ನಗರಾಭಿವೃದ್ಧಿ ವಿಶ್ವಸ್ಥ ಮಂಡಳಿ (ಈಗಿನ ಮುಡಾ) ರಚಿಸಿದರು. ಆದರೆ, ಕಳೆದ ಕೆಲವು ದಶಕಗಳಿಂದ ನಿವೇಶನ ಮತ್ತು ಮನೆಗಳನ್ನು ಹಂಚುವುದನ್ನು ಮರೆತೇ ಹೋಗಿರುವ ಮುಡಾ ಖಾಸಗಿ ಬಡಾವಣೆ ನಿರ್ಮಾಣಕಾರರ ಏಜೆನ್ಸಿಯಂತೆ ಕೆಲಸ ಮಾಡುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಸುದ್ದಿಗೋಷ್ಠಿಯಲ್ಲಿ ವಕೀಲ ಅರುಣ್ ಕುಮಾರ್ ಹಾಗೂ ನಗರ ಪಾಲಿಕೆ ಮಾಜಿ ಸದಸ್ಯ ಪ್ರಶಾಂತ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net