

ದೊಡ್ಡಬಳ್ಳಾಪುರ: ಭಾರತೀಯ ಸೇನಾಪಡೆಗಳು ಭಯೋತ್ಪಾದಕರ ವಿರುದ್ಧ ನಡೆಸಿದ ಆಪರೇಷನ್ ಸಿಂಧೂರ ಯಶಸ್ವಿಯಾದ ಹಿನ್ನೆಲೆಯಲ್ಲಿ ಸೇನಾ ಪಡೆಗಳ ಪರಾಕ್ರಮವನ್ನು ಸ್ಮರಿಸಿ ಹಾಗೂ ಉಗ್ರವಾದ ಖಂಡಿಸಿ ಇಲ್ಲಿನ ಆರ್.ಎಲ್.ಜಾಲಪ್ಪ ಸಮೂಹ ಶಿಕ್ಷಣ ಸಂಸ್ಥೆಗಳು ಹಾಗೂ ಲಯನ್ಸ್ ಕ್ಲಬ್ ಆಫ್ ಆರ್.ಎಲ್.ಜಾಲಪ್ಪ ಇನ್‌ಸ್ಟಿಟ್ಯೂಷನ್ಸ್ ನೇತೃತ್ವದಲ್ಲಿ ಶನಿವಾರ ಬೃಹತ್ ವಿದ್ಯಾರ್ಥಿ ಜಾಥಾ ಹಮ್ಮಿಕೊಳ್ಳಲಾಗಿತ್ತು.
ನೆಲದಾಂಜನೇಯಸ್ವಾಮಿ ದೇವಾಲಯ, ಬಸವ ಭವನ ವೃತ್ತ ಹಾಗೂ ಕೆಸಿಪಿ ವೃತ್ತದಿಂದ 3 ಪ್ರತ್ಯೇಕ ಜಾಥಾಗಳು ಹೊರಟು ಭಗತ್‌ಸಿಂಗ್ ಕ್ರೀಡಾಂಗಣದಲ್ಲಿ ಸುಮಾರು 2 ಸಾವಿರ ವಿದ್ಯಾರ್ಥಿಗಳು ಬಂದು ಸೇರಿದರು. ಬಳಿಕ, ಭಗತ್‌ಸಿಂಗ್ ಕ್ರೀಡಾಂಗಣದ ಸಮೀಪದಿಂದ ಆರ್.ಎಲ್.ಜಾಲಪ್ಪ ಸಮೂಹ ಶಿಕ್ಷಣ ಸಂಸ್ಥೆಗಳ ಆವರಣದ ಬಳಿಗೆ, ನಗರದ ಪ್ರಮುಖ ಬೀದಿಗಳಲ್ಲಿ ವಿದ್ಯಾರ್ಥಿಗಳು ರಾಷ್ಟ್ರಧ್ವಜ ಹಿಡಿದು, 500 ಮೀಟರ್ ಉದ್ದದ ತ್ರಿವರ್ಣ ಧ್ವಜದೊಂದಿಗೆ ಜಾಥಾ ನಡೆಸಿದರು. ಜಾಥಾದಲ್ಲಿ ದೇಶಭಕ್ತಿ ಸಾರುವ ಹಾಗೂ ಉಗ್ರವಾದವನ್ನು ಖಂಡಿಸುವ ಘೋಷಣೆಗಳು ಮೊಳಗಿದವು.
ದೇಶ ಭಕ್ತಿ ತೋರಿಸಿ: ದೇಶದ ಮುಂದಿನ ಪ್ರಜೆಗಳಾದ ವಿದ್ಯಾರ್ಥಿಗಳಲ್ಲಿ ದೇಶಾಭಿಮಾನ ಮೂಡಬೇಕು. ಸೈನಿಕರು, ಹಗಲು ರಾತ್ರಿ, ಚಳಿ, ಮಳೆ ಎನ್ನದೇ ದೇಶವನ್ನು ಕಾಯುತ್ತಿದ್ದಾರೆ. ಅವರಿಗೆ ಇಡೀ ದೇಶ ನೀಡುತ್ತಿರುವ ಬೆಂಬಲ ರೋಮಾಂಚಕವಾಗಿದೆ. ದೇಶ ಸೇವೆ ಎಂದರೆ ಯುದ್ಧ ಭೂಮಿಯಲ್ಲಿಯೇ ಹೋರಾಟ ನಡೆಸಬೇಕೆಂದೇನಿಲ್ಲ. ನೀವಿರುವ ಸ್ಥಳದಲ್ಲಿಯೇ ದೇಶ ಭಕ್ತಿ ತೋರಿಸಬಹುದು ಎಂದು ನಿವೃತ್ತ ಸೇನಾನಿ ವಿಜಯೇಂದ್ರ ರಾವ್ ಹೇಳಿದರು. ನಮ್ಮ ದೇಶ ಎನ್ನುವ ಅಭಿಮಾನ ಪ್ರತಿಯೊಬ್ಬರಲ್ಲಿಯೂ ಮೂಡಬೇಕಿದ್ದು, ಇದು ಸೈನಿಕರಿಗೆ ಉತ್ಸಾಹ ತುಂಬಲಿದೆ. ಕಾರ್ಯಾಚರಣೆ ಹಾಗೂ ಯುದ್ಧಕ್ಕೆ ವ್ಯತ್ಯಾಸವಿದ್ದು, ಆಪರೇಷನ್ ಸಿಂಧೂರ, ಹಾಗೂ ಕಾರ್ಗಿಲ್ ಎನ್ನುವುದು ಕಾರ್ಯಾಚರಣೆಯಾಗಿದ್ದು, ದೇಶದ ಯೋಧರು ಉಗ್ರರನ್ನು ದಮನ ಮಾಡಿರುವುದು ನಾವು ಹಬ್ಬದಂತೆ ಸಂಭ್ರಮಿಸಬೇಕಿದೆ. ಈ ಹಿಂದೆ ನಾವು ಕಾರ್ಗಿಲ್ ಕಾರ್ಯಾಚರಣೆಯಲ್ಲಿ ಮೈನಸ್ 15 ಡಿಗ್ರಿ ಕೊರೆಯುವ ಚಳಿಯಲ್ಲಿ ಯುದ್ಧ ಭೂಮಿಯಲ್ಲಿ ಹೋರಾಟ ನಡೆಸಿದ್ದ ಘಟನೆಯನ್ನು ಸ್ಮರಿಸಿದ ಅವರು, ಇಂದು ದೇಶದ ಸೈನ್ಯ ಬಲಿಷ್ಠವಾಗಿದ್ದು, ಅತ್ಯಾಧುನಿಕ ಯುದ್ಧ ಸಾಮಗ್ರಿಗಳಿವೆ ಯಾವುದೇ ದೇಶ ಆಕ್ರಮಣ ಮಾಡಿದರು ಹಿಮ್ಮೆಟ್ಟಿಸುವ ಶಕ್ತಿ ಭಾರತಕ್ಕಿದೆ ಎಂದರು.ಭಗತ್‌ಸಿಂಗ್ ಕ್ರೀಡಾಂಗಣದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ನಿವೃತ್ತ ಸೇನಾನಿ ವಿಜಯೇಂದ್ರ ರಾವ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ದೈಹಿಕ ಶಿಕ್ಷಣ ನಿರ್ದೇಶಕ ದಾದಾಫೀರ್, ಆರ್.ಎಲ್.ಜಾಲಪ್ಪ ಸಮೂಹ ಶಿಕ್ಷಣ ಸಂಸ್ಥೆಗಳ ವಿವಿಧ ಶೈಕ್ಷಣಿಕ ಘಟಕಗಳ ಪ್ರಾಂಶುಪಾಲರು, ಪ್ರಾಧ್ಯಾಪಕರು, ವಿಭಾಗಗಳ ಮುಖ್ಯಸ್ಥರು, ಲಯನ್ಸ್ ಕ್ಲಬ್ ಪದಾಧಿಕಾರಿಗಳು, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಭಾಗವಹಿಸಿದ್ದರು.