

ಶಿಡ್ಲಘಟ್ಟ : ರಾಷ್ಟ್ರಕವಿ ಜಿಎಸ್‌ಎಸ್ ಹೇಳುವಂತೆ, ಹಣತೆ ಹಚ್ಚುತ್ತೇನೆ ನಾನೂ, ಕತ್ತಲೆಯನ್ನು ದಾಟುತ್ತೇನೆಂಬ ಭ್ರಮೆಯಿಂದಲ್ಲ, ಇರುವಷ್ಟು ಹೊತ್ತು ನಿನ್ನ ಮುಖ ನಾನು ನನ್ನ ಮುಖ ನೀನು, ನೋಡಬಹುದೆಂಬ ಒಂದೇ ಒಂದು ಆಸೆಯಿಂದ ಎಂಬ ಮಾತನ್ನು ನೆನೆಯೋಣ. ಪಟಾಕಿ ಬಿಡಿ, ದೀಪ ಬೆಳಗಿಸಿ ಎಂಬ ಸಂದೇಶ ಸಾರೋಣ ಎಂದು ತಾಲೂಕು ಕಸಾಪ ಅಧ್ಯಕ್ಷ ಎ.ಎಂ.ತ್ಯಾಗರಾಜ್ ತಿಳಿಸಿದರು.
ತಾಲೂಕಿನ ಹರಳಹಳ್ಳಿ ತಿರುಮಲ ನಾರಾಯಣಸ್ವಾಮಿ ದೇವಾಲಯದ ಆವರಣದಲ್ಲಿ ಶನಿವಾರ ಶಿಡ್ಲಘಟ್ಟ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಹಾಗೂ ಅಶ್ವಿನಿ ಗೋವರ್ಧನ್ ಚಾರಿಟಬಲ್ ಟ್ರಸ್ಟ್ ( ರಿ.) ದೀಪಾವಳಿ ಪ್ರಯುಕ್ತ ಆಯೋಜಿಸಿದ್ದ 500 ಮಣ್ಣಿನ ದೀಪಗಳ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಈ ಬಾರಿ ಮಕ್ಕಳಿಗೆ ಪಟಾಕಿ ಬದಲಾಗಿ ಮಣ್ಣಿನ ಹಣತೆ ಬೆಳಗಿಸಲು ಮನವೊಲಿಸಿ. ಮಣ್ಣಿನ ಹಣತೆಯಿಂದ ಮನೆ ಮುಂದೆ ಅಲಂಕಾರ ಮಾಡಿಸಿ, ಸಂಭ್ರಮದಿಂದ ದೀಪಾವಳಿ ಆಚರಿಸಿ. ದೇಶಿ ಮಣ್ಣಿನ ದೀಪ ಖರೀದಿಸಿ ಕುಂಬಾರಿಕೆ ಮಾಡುವವರನ್ನು ಸಂಕಷ್ಟದಿಂದ ಪಾರು ಮಾಡಬೇಕು ಎಂದರು.
ಹರಳಹಳ್ಳಿ ಗ್ರಾಮಸ್ಥರಿಗೆ ಕಸಾಪದಿಂದ 500 ಮಣ್ಣಿನ ದೀಪಗಳನ್ನು ವಿತರಣೆ ಮಾಡಲಾಯಿತು.ಗ್ರಾಮದ ಎಚ್.ಸೊಣ್ಣೇಗೌಡ, ಕೆ.ವಿ.ನಾರಾಯಣಸ್ವಾಮಿ, ಶಿಕ್ಷಕ ದೇವರಾಜ್, ಎಚ್.ಎಂ.ಶ್ರೀನಿವಾಸ್, ಎಚ್.ಎಂ.ಶ್ರೀನಾಥ್, ಎಚ್.ಆರ್.ಶಿವಕುಮಾರ್, ಎಚ್.ಪಿ.ಮನೋಜ್, ಪ್ರದೀಪ್, ಭುವನೇಶ್ವರಿ ಕನ್ನಡ ಯುವಕರ ಸಂಘದ ಪದಾಧಿಕಾರಿಗಳು ಹಾಜರಿದ್ದರು.