ದ್ವಿಚಕ್ರ ವಾಹನ ಸವಾರರೇ ಹುಷಾರ್!; ಬೈಕ್‌ಗಳಿಗೆ ಮಿರರ್- ಇಂಡಿಕೇಟರ್ ಲೈಟ್​ ಇಲ್ಲದಿದ್ದರೆ 500 ರೂ. ದಂಡ

BIke
Published on

ಬೆಂಗಳೂರು: ಸಿಲಿಕಾನ್ ಸಿಟಿ ರಸ್ತೆಗೆ ಬೈಕ್ ಓಡಿಸಬೇಕಾದರೆ ವಾಹನಕ್ಕೆ ಎರಡೂ ಕಡೆ ಸೈಡ್ ಮಿರರ್ ಮತ್ತು ಇಂಡಿಕೇಟರ್ ಲೈಟ್​ ಕಡ್ಡಾಯ. ಇಲ್ಲವಾದರೆ, ಶನಿವಾರದಿಂದ 500 ರೂಪಾಯಿ ದಂಡ ಖಚಿತ. ಹೀಗೊಂದು ನಗರ ಸಂಚಾರ ವಿಭಾಗದ ಪೊಲೀಸರು ಎಚ್ಚರಿಕೆ ನೀಡಿದ್ದಾರೆ.

ರಸ್ತೆ ಅಪಘಾತಗಳಿಂದ ಅಮಾಯಕರ ಪ್ರಾಣಹಾನಿ ಮತ್ತು ಶಾಶ್ವತ ಅಂಗವೈಕಲ್ಯ ಉಂಟಾಗುತ್ತಿದೆ. ಇದನ್ನು ತಡೆಗಟ್ಟುವ ಸಲುವಾಗಿ ಸಂಚಾರ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲು ನಿರ್ಧರಿಸಲಾಗಿದೆ. ಹೆಲ್ಮೆಟ್ ರಹಿತ ದ್ವಿಚಕ್ರ ವಾಹನ ಸವಾರರು ಹೆಚ್ಚಾಗಿ ರಸ್ತೆ ಅಪಘಾತದಲ್ಲಿ ಅಸುನೀಗುತ್ತಿದ್ದಾರೆ. ಇದನ್ನು ಅರಿತು ಹೆಲ್ಮೆಟ್ ರಹಿತ ಸವಾರರಿಗೆ ದಂಡ ವಿಧಿಸಲಾಗುತ್ತಿದೆ.

ರಸ್ತೆ ಅಪಘಾತಗಳ ಅಧ್ಯಯ ನಡೆಸಿದಾಗ ದ್ವಿಚಕ್ರ ವಾಹನ ಸವಾರರು ಸೈಡ್ ಮಿರರ್ ಮತ್ತು ಇಂಡಿಕೇಟರ್ ಲೈಟ್​ ಬಳಸದೆ ಅಡ್ಡಾದಿಡ್ಡಿ ಚಲಾಯಿಸಿದಾಗ ಹಿಂದಿನಿಂದ ಬರುವ ವಾಹನಗಳು ಡಿಕ್ಕಿ ಹೊಡೆದು ಅಪಘಾತ ಸಂಭವಿಸುತ್ತಿರುವುದು ಹೆಚ್ಚಾಗಿ ಕಂಡುಬರುತ್ತಿವೆ.

ಅಲ್ಲದೆ, ಬೈಕ್ ಓಡಿಸುತ್ತಿದ್ದಾಗ ಎಡ ಅಥವಾ ಬಲಗಡೆ ತಿರುವು ಪಡೆಯಲು ಹಿಂದೆ ತಲೆ ತಿರುಗಿಸಿ ನೋಡುವುದು ಅಥವಾ ನೋಡದೆ ಏಕಾಏಕಿ ತಿರುವು ಪಡೆಯುವುದರಿಂದ ಅಪಘಾತಗಳು ಸಂಭವಿಸುತ್ತಿವೆ. ಅಲ್ಲದೆ, ಇಂಡಿಕೇಟರ್ ಬಳಸದೆ ಏಕಾಏಕಿ ತಿರುವು ಪಡೆದಾಗ ಹಿಂಬದಿ ಬರುತ್ತಿರುವ ವಾಹನಗಳು ದಿಕ್ಕು ತೋಚದೆ ಮುಂದಿನ ವಾಹನಕ್ಕೆ ಗುದ್ದಿ ಪ್ರಾಣ ಹಾನಿ ಉಂಟಾಗುತ್ತಿದೆ. ಇದನ್ನು ಗಂಭೀರವಾಗಿ ಪರಿಗಣಿಸಿ ದ್ವಿಚಕ್ರ ವಾಹನಗಳಿಗೆ ಸೈಡ್ ಮಿರರ್ ಮತ್ತು ಇಂಡಿಕೇಟರ್ ಇಲ್ಲದೆ ಇರುವ ಬೈಕ್‌ಗಳಿಗೆ ತಲಾ 500 ರೂ. ದಂಡ ವಿಧಿಸುವುದಾಗಿ ಜಂಟಿ ಪೊಲೀಸ್ ಆಯುಕ್ತ (ಸಂಚಾರ) ಡಾ.ಬಿ.ಆರ್. ರವಿಕಾಂತೇಗೌಡ ಆದೇಶ ಹೊರಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net