ಶಕ್ತಿಗೆ 500 ಕೋಟಿ ಮೈಲಿಗಲ್ಲು

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಚನ್ನರಾಯಪಟ್ಟಣ ಬಸ್ ನಿಲ್ದಾಣದಲ್ಲಿ ಹಮ್ಮಿಕೊಂಡಿದ್ದ ಶಕ್ತಿ ಸ್ಕೀಂ 500 ಕೋಟಿ ಮೈಲುಗಲ್ಲು ಸಂಭ್ರಮಾಚರಣೆ ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ತಾಲೂಕು ಅಧ್ಯಕ್ಷ ಎಲ್.ಪಿ.ಪ್ರಕಾಶ್ ಗೌಡ ಬಸ್‌ಗೆ ಪೂಜೆ ಸಲ್ಲಿಸಿ ಮಹಿಳಾ ಪ್ರಯಾಣಿಕರಿಗೆ ಸಿಹಿ ಹಂಚಿ ಸಂಭ್ರಮಿಸಿದರು.
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಚನ್ನರಾಯಪಟ್ಟಣ ಬಸ್ ನಿಲ್ದಾಣದಲ್ಲಿ ಹಮ್ಮಿಕೊಂಡಿದ್ದ ಶಕ್ತಿ ಸ್ಕೀಂ 500 ಕೋಟಿ ಮೈಲುಗಲ್ಲು ಸಂಭ್ರಮಾಚರಣೆ ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ತಾಲೂಕು ಅಧ್ಯಕ್ಷ ಎಲ್.ಪಿ.ಪ್ರಕಾಶ್ ಗೌಡ ಬಸ್‌ಗೆ ಪೂಜೆ ಸಲ್ಲಿಸಿ ಮಹಿಳಾ ಪ್ರಯಾಣಿಕರಿಗೆ ಸಿಹಿ ಹಂಚಿ ಸಂಭ್ರಮಿಸಿದರು.
Published on

ಚನ್ನರಾಯಪಟ್ಟಣ: ರಾಜ್ಯ ಸರಕಾರದ ಐದು ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಶಕ್ತಿ ಯೋಜನೆ ಹೊಸ ಮೈಲಿಗಲ್ಲಿ ಸ್ಥಾಪಿಸಿದ್ದು, 500ನೇ ಕೋಟಿ ಟಿಕೆಟ್ ಉಚಿತ ವಿತರಣೆ ತಲುಪಲಿದೆ ಎಂದು ಕರ್ನಾಟಕ ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ತಾಲೂಕು ಅಧ್ಯಕ್ಷ ಎಲ್.ಪಿ.ಪ್ರಕಾಶ್ ಗೌಡ ತಿಳಿಸಿದರು.

ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ತಾಲೂಕು ಸಮಿತಿಯಿಂದ ಮಹಿಳಾ ಪ್ರಯಾಣಿಕರೊಂದಿಗೆ ಹಮ್ಮಿಕೊಂಡಿದ್ದ ಶಕ್ತಿ ಸ್ಕೀಂ 500 ಕೋಟಿ ಮೈಲಿಗಲ್ಲು ಸಂಭ್ರಮಾಚರಣೆಯಲ್ಲಿ ಅವರು ಮಾತನಾಡಿದರು.

ಕಾಂಗ್ರೆಸ್ ಸರಕಾರ 2023ರ ಜೂನ್ 11ರಂದು ಅನುಷ್ಠಾನಕ್ಕೆ ತಂದ ಶಕ್ತಿ ಗ್ಯಾರಂಟಿ ಯೋಜನೆಯಡಿ ಕಳೆದ 2 ವರ್ಷ ಒಂದು ತಿಂಗಳ ಅವಧಿಯಲ್ಲಿ ಕೆಎಸ್‌ಆರ್‌ಟಿಸಿ, ಬಿಎಂಟಿಸಿ ಸೇರಿದಂತೆ ಸರಕಾರಿ ಸಾರಿಗೆ ಸಂಸ್ಥೆಯ 4 ನಿಗಮಗಳ ಸಾಮಾನ್ಯ ಸಾರಿಗೆ ಬಸ್‌ಗಳಲ್ಲಿ ಇದುವರೆಗೆ ಮಹಿಳಾ ಪ್ರಯಾಣಿಕರಿಗೆ ವಿತರಣೆ ಮಾಡಿದ ಉಚಿತ ಟಿಕೆಟ್‌ಗಳ ಸಂಖ್ಯೆ 500 ಕೋಟಿ ತಲುಪಲಿದೆ. ತಾಲೂಕಿನಲ್ಲಿ ಕಳೆದ ಜೂನ್ 11, 2023 ರಿಂದ ಪ್ರಸಕ್ತ ಜೂನ್ 11, 2025ರವರೆಗೂ ಶಕ್ತಿ ಯೋಜನೆಯಡಿ ಮಹಿಳಾ ಪ್ರಯಾಣಿಕರು ಉಚಿತ ಟಿಕೆಟ್ ಪಡೆದು ಪ್ರಯಾಣಿಸಿದ ಟಿಕೆಟ್‌ಗಳ ಮೌಲ್ಯ ಅಂದಾಜು 6.31 ಕೋಟಿ ರೂ.ಗಳಾಗಿದೆ. ಇಲ್ಲಿಯವರೆಗೆ ಅಂದಾಜು 2 ಕೋಟಿಗೂ ಹೆಚ್ಚಿನ ಮಹಿಳಾ ಪ್ರಯಾಣಿಕರು ಶಕ್ತಿ ಯೋಜನೆಯಡಿ ಉಚಿತ ಟಿಕೆಟ್ ಪಡೆದು ಪ್ರಯಾಣಿಸುತ್ತಿದ್ದಾರೆ ಎಂದರು.

ಶಕ್ತಿ ಯೋಜನೆಯಲ್ಲಿ ಬಡವರು, ದುಡಿಯುವ ಮಹಿಳೆಯರು, ವಿದ್ಯಾರ್ಥಿನಿಯರು, ಹೆಚ್ಚಿನ ಸಂಖ್ಯೆಯಲ್ಲಿ ಯೋಜನೆಯ ಸದುಪಯೋಗ ಪಡೆದುಕೊಳ್ಳುತ್ತಿದ್ದಾರೆ. ರಾಜ್ಯದ ಪ್ರವಾಸಿ ತಾಣಗಳು ಮತ್ತು ಧಾರ್ಮಿಕ ಕ್ಷೇತ್ರಗಳಿಗೆ ಭೇಟಿ ನೀಡುವವರ ಸಂಖ್ಯೆಯೂ ಅಧಿಕಗೊಂಡಿದೆ ಎಂದರು.

ಶಕ್ತಿ ಯೋಜನೆಯಿಂದ ಸಾಕಷ್ಟು ಮಹಿಳೆಯರಿಗೆ ಅನುಕೂಲವಾಗಿದೆ. ನಾನಾ ಕೆಲಸಗಳಿಗೆ ಹೋಗುವ ಮಹಿಳೆಯರಿಗೆ ಹಣದ ಉಳಿತಾಯವಾಗಿದೆ. ಶಾಲಾ, ಕಾಲೇಜಿಗೆ ಹೋಗುವ ವಿದ್ಯಾರ್ಥಿನಿಯರಿಗೂ ಇದರಿಂದ ಪ್ರಯೋಜನವಾಗಿದೆ. ರಾಜ್ಯದಾದ್ಯಂತ ಸಂಚಾರಕ್ಕೆ ಅವಕಾಶ ಸಿಕ್ಕಿರುವುದರಿಂದ ಧಾರ್ಮಿಕ ಸ್ಥಳಗಳಿಗೆ ಹೋಗುವ ಮಹಿಳೆಯರ ಸಂಖ್ಯೆಯೂ ಹೆಚ್ಚಾಗಿದೆ. ಆದರೆ ಪ್ರಯಾಣಿಕರ ಸಂಖ್ಯೆ ಹೆಚ್ಚಾದರೂ ಪೂರಕವಾಗಿ ಬಸ್‌ಗಳ ಸಂಖ್ಯೆ ಹೆಚ್ಚಾಗದಿರುವುದು ವಿಪರ್ಯಾಸ. ವಾರಾಂತ್ಯಗಳಲ್ಲಿ ಹಾಸನದಿಂದ ಬೆಂಗಳೂರಿಗೆ ಮತ್ತು ಬೆಂಗಳೂರಿಂದ ಹಾಸನಕ್ಕೆ ಬರುವ ಬಸ್‌ಗಳು ಬಹುತೇಕ ತುಂಬಿರುತ್ತವೆ. ವೃದ್ಧರು ವಿದ್ಯಾರ್ಥಿಗಳಿಗೆ ಹೆಚ್ಚಿನ ಸಮಸ್ಯೆಯಾಗುತ್ತಿದೆ. ತಾಲೂಕಿನ 25,000 ಜನ ಬೆಂಗಳೂರಿನಲ್ಲಿ ನೆಲೆಸಿದ್ದು, ವಾರಾಂತ್ಯದಲ್ಲಿ ಬೆಂಗಳೂರಿಂದ ಇಲ್ಲಿಗೆ ಆಗಮಿಸಲು ಮತ್ತು ಇಲ್ಲಿಂದ ಬೆಂಗಳೂರಿಗೆ ತೆರಳಲು ಹೆಚ್ಚಿನ ಸಮಸ್ಯೆ ಆಗುತ್ತಿದ್ದು, ಪ್ರಯಾಣಿಕರ ಸಂಖ್ಯೆಗೆ ಅನುಗುಣವಾಗಿ ಬಸ್‌ಗಳ ಸಂಖ್ಯೆ ಹೆಚ್ಚಿಸಿದರೆ ಯೋಜನೆಯ ಪೂರ್ಣ ಪ್ರಮಾಣದ ಸೌಲಭ್ಯ ಎಲ್ಲರಿಗೂ ದೊರೆತಾಗುತ್ತದೆ. ಸರ್ಕಾರ ಕೂಡಲೇ ವಾರಾಂತ್ಯದಲ್ಲಿ ಬಸ್‌ಗಳ ಸಂಖ್ಯೆಯನ್ನು ಹೆಚ್ಚಿಸಬೇಕೆಂದು ಶಾಸಕ ಸಿ.ಎನ್.ಬಾಲಕೃಷ್ಣ ಮನವಿ ಮಾಡಿದರು.

ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ತಾಲೂಕು ಸಮಿತಿ ಸದಸ್ಯರಾದ ನಾಗೇಶ್, ಗಣೇಶ್, ಕೆಂಪೇಗೌಡ, ಕೆ.ಎನ್.ನಾಗೇಶ್, ಮಧು, ಜನಾರ್ದನ್, ನಿಶ್ಚಲ್, ರಂಗಸ್ವಾಮಿ, ಟಿಎಪಿಸಿಎಂಎಸ್‌ನ ಅಧ್ಯಕ್ಷ ಅನಿಲ್ ಮರಗೂರು, ಕೆಎಸ್ಸಾರ್ಟಿಸಿ ಚನ್ನರಾಯಪಟ್ಟಣ ಘಟಕದ ವ್ಯವಸ್ಥಾಪಕ ಅಲೀಮುಲ್ಲಾ ಖಾನ್, ತಾಪಂ ಇಒ ಜಿ.ಆರ್.ಹರೀಶ್, ಸಹಾಯಕ ನಿರ್ದೇಶಕ ಎನ್.ಗಿರೀಶ್, ವಕೀಲ ನವೀನ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net