

ಇಂಡಿ: ಏಪ್ರಿಲ್ ತಿಂಗಳಿನಲ್ಲಿ ನಡೆಯಲಿರುವ ಲೋಕಸಭಾ ಚುನಾವಣೆಯಲ್ಲಿ ಇಂಡಿ ಕ್ಷೇತ್ರದಲ್ಲಿ ಯಾವುದೇ ಅಕ್ರಮಗಳು ನಡೆಯದಂತೆ ಚುನಾವಣೆ ಆಯೋಗದ ನಿಯಮಗಳನ್ನು ಜಾರಿಗೊಳಿಸಿ ಅಧಿಕಾರಿಗಳು ಮತ್ತು ನೌಕರರು ಕಟ್ಟುನಿಟಾಗಿ ಕೆಲಸ ನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿ ಟಿ.ಭೂಬಾಲನ್ ಹೇಳಿದರು.
ತಾಲೂಕಿನ ಚಿಕ್ಕಮಣೂರ, ಅಗರಖೇಡ ಚೆಕ್‌ಪೋಸ್ಟ್, ಹಿಂಗಣಿ ಬ್ಯಾರೇಜ್ ಮತ್ತು ಪಟ್ಟಣದ ಆದರ್ಶ ಶಾಲೆಯ ಚುನಾವಣೆ ಭದ್ರತಾ ಕೋಣೆ ಮತ್ತು ಮಿನಿ ವಿಧಾನಸೌಧಕ್ಕೆ ಗುರುವಾರ ಭೇಟಿ ನೀಡಿ ಪರಿಶೀಲಿಸಿ ಅವರು ಮಾತನಾಡಿದರು.
ತಾಲೂಕಿನಲ್ಲಿ ಚೆಕ್‌ಪೋಸ್ಟ್‌ಗಳನ್ನು ತೆರೆಯಲಾಗಿದೆ. ಧೂಳಖೇಡ, ಚಿಕ್ಕಮಣೂರ ಸೇರಿದಂತೆ ಇನ್ನಿತರ ಕಡೆ ಚೆಕ್‌ಪೋಸ್ಟ್ ತೆರೆದಿದ್ದು, ಈ ಭಾಗದಲ್ಲಿ ಸಂಚರಿಸುವ ವಾಹನಗಳನ್ನು ನಿರಂತರವಾಗಿ ತಪಾಸಣೆ ಮಾಡಲಾಗುತ್ತಿದೆ ಎಂದರು.
ಒಬ್ಬ ವ್ಯಕ್ತಿಯು 50 ಸಾವಿರ ರೂ. ಗಳಿಗಿಂತ ಹೆಚ್ಚು ಹಣ ಒಯ್ಯುವುದಿದ್ದರೆ ಅದಕ್ಕೆ ಪೂರಕ ದಾಖಲೆಗಳನ್ನು ಹೊಂದಿರಬೇಕು. ದಾಖಲೆಗಳಿಲ್ಲದೆ ಇದ್ದಲ್ಲಿ ಸೀಜ್ ಮಾಡಲಾಗುತ್ತದೆ. ನಂತರ ಸೂಕ್ತ ದಾಖಲೆಗಳನ್ನು ಒದಗಿಸಿ ತಮ್ಮ ಹಣವನ್ನು ಬಿಡಿಸಿಕೊಂಡು ಹೋಗಬಹುದು ಎಂದು ತಿಳಿಸಿದರು.
ಮದುವೆ ಮತ್ತು ಮನೆಗಳಲ್ಲಿ ನಡೆಯುವ ಶುಭ ಸಮಾರಂಭಗಳಿಗೆ ಒಪ್ಪಿಗೆಯ ಅಗತ್ಯವಿರುವುದಿಲ್ಲ. ಆದರೆ ಬೇರೆ ಕಾರ್ಯಕ್ರಮಗಳನ್ನು ಗ್ರಾಮದಲ್ಲಾಗಲಿ, ಸಮುದಾಯ ಭವನದಲ್ಲಾಗಲಿ ನಡೆಸಬೇಕಾದರೆ ಸಂಬಂಧ ಪಟ್ಟ ಪೊಲೀಸ್ ಇಲಾಖೆ ಮತ್ತು ಕಂದಾಯ ಇಲಾಖೆ ವತಿಯಿಂದ ಕಡ್ಡಾಯವಾಗಿ ಅನುಮತಿ ಪಡೆಯಬೇಕು ಎಂದರು.
ಗ್ರಾಮಗಳ ಜಾತ್ರೆಗಳಲ್ಲಿ ಚುನಾವಣೆಗೆ ಸಂಬಂಧಿಸಿದಂತೆ ಯಾವುದೇ ಚಟುವಟಿಕೆ ನಡೆಸುವಂತಿಲ್ಲ. ಪಕ್ಷದ ಅಭ್ಯರ್ಥಿಗಳ ಮುಖಂಡರ ಭಾವಚಿತ್ರ ಇರುವ ಬ್ಯಾನರ್‌ಗಳನ್ನು ಅಳವಡಿಸುವಂತಿಲ್ಲ. ಜಾತ್ರೆಗಳನ್ನು ನಡೆಸುವ ಸಂದರ್ಭದಲ್ಲಿ ಗ್ರಾಮದ ಮುಖಂಡರು ಚುನಾವಣೆ ಅಧಿಕಾರಿಗಳಿಗೆ ಮಾಹಿತಿ ನೀಡಬೇಕು ಎಂದರು.
ಕಂದಾಯ ಉಪವಿಭಾಗಾಧಿಕಾರಿ ಅಬೀದ್ ಗದ್ಯಾಳ, ತಹಸೀಲ್ದಾರ್ ಮಂಜುಳಾ ನಾಯಕ, ಇಒ ನೀಲಗಂಗಾ, ಡಿವೈಎಸ್‌ಪಿ ಜಗದೀಶ ಎಚ್.ಎಸ್., ಇಂಡಿಯ ಪಟ್ಟಣ ಸಿಪಿಐ ರತನಕುಮಾರ ಜಿರಗಿಹಾಳ, ಇಂಡಿ ಗ್ರಾಮೀಣ ಪಿಎಸ್‌ಐ ಮಂಜುನಾಥ ಹುಲಕುಂಡ, ಚುನಾವಣೆ ಶಿರಸ್ತೆದಾರ ಆರ್.ಎಸ್. ಮೂಗಿ, ಎಚ್.ಎಸ್. ಗುನ್ನಾಪೂರ ಇತರರಿದ್ದರು.