50 ವರ್ಷಗಳ ಹಿಂದೆ ವಿ.ಶ್ರೀನಿವಾಸಪ್ರಸಾದ್ ಸೋಲಿಸುವುದೇ ಗುರಿಯಾಗಿತ್ತು: ಎಸ್.ಎಂ.ಕೃಷ್ಣ

mysore
Published on

ಮೈಸೂರು:ವಿ.ಶ್ರೀನಿವಾಸಪ್ರಸಾದ್ ಅವರು ಜನಮನ ಗೆದ್ದ ನೇರ ವ್ಯಕ್ತಿತ್ವದ ನಾಯಕ ಎಂದು ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಬಣ್ಣಿಸಿದರು.

ಮುಕ್ತಗಂಗೋತ್ರಿಯ ಘಟಿಕೋತ್ಸವ ಭವನದಲ್ಲಿ ಭಾನುವಾರ ಆಯೋಜಿಸಿದ್ದ ‘ಸಂಸದ ವಿ.ಶ್ರೀನಿವಾಸಪ್ರಸಾದ್ ಚುನಾವಣಾ ರಾಜಕೀಯ ಸುವರ್ಣ ಮಹೋತ್ಸವ ಅಭಿನಂದನಾ ಸಮಾರಂಭ’ದಲ್ಲಿ ಮಾತನಾಡಿದರು

ಇವರದ್ದು ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳುವ ಪ್ರವೃತ್ತಿ. ಸ್ನೇಹದ ಸೇತುವೆಯಾಗಿ ಜನ ಸೇವೆಗಾಗಿ ಅರ್ಪಣೆ ಮಾಡಿಕೊಂಡದ್ದು ವಿಶೇಷವಾದ ಗುಣ. ಚುನಾವಣಾ ರಾಜಕಾರಣದಿಂದ ನಿವೃತ್ತರಾಗುತ್ತಿರುವ ಪ್ರಸಾದ್ ಅವರ ಬದುಕು ತೆರೆದ ಪುಸ್ತಕದಂತಿದೆ ಎಂದರು.

50 ವರ್ಷಗಳ ಹಿಂದೆ ವಿ.ಶ್ರೀನಿವಾಸಪ್ರಸಾದ್ ಅವರನ್ನು ಸೋಲಿಸುವುದು ದೇವರಾಜ ಅರಸು ಮತ್ತು ನನ್ನ ಏಕೈಕ ಗುರಿಯಾಗಿತ್ತು. ಬಹಳ ಪ್ರಯತ್ನ ಮಾಡಿದೆವು. ಆದರೆ ಅಶೋಕಪುರಂನ ಪ್ರತಿ ಮನೆಯಲ್ಲೂ ಪ್ರಸಾದ್ ಬೆಂಬಲಿಗರಿದ್ದರು. ಪ್ರಸಾದ್ ಅವರಂತಹ ರಾಜಕೀಯ ಪ್ರಬುದ್ಧತೆಯನ್ನು ಬೆಂಬಲಿಸಿದ ಮೈಸೂರಿನ ಮಹಾಜನತೆಗೆ ಕೃತಜ್ಞತೆ ಸಲ್ಲಿಸಬೇಕು ಎಂದು ಹೇಳಿದರು.

ಚುನಾವಣಾ ವ್ಯವಸ್ಥೆ ಸುಧಾರಿಸಲಿ

ಪ್ರಧಾನಿ ನರೇಂದ್ರ ಮೋದಿ ಅವರು ಚುನಾವಣಾ ವ್ಯವಸ್ಥೆಯನ್ನು ಸುಧಾರಿಸಬೇಕು ಎಂದು ಎಸ್.ಎಂ.ಕೃಷ್ಣ ಸಲಹೆ ನೀಡಿದರು.

ಮೋದಿ ಅವರು ದೇಶವನ್ನು ಎತ್ತರಕ್ಕೆ ತೆಗೆದುಕೊಂಡು ಹೋಗುತ್ತಿದ್ದಾರೆ. ಅವರು 3ನೇ ಬಾರಿಗೆ ಪ್ರಧಾನಿ ಆಗುವ ಸಂಶಯ ಉಳಿದಿಲ್ಲ. ಚುನಾವಣೆಗೆ ಸುರಿಯುತ್ತಿರುವ ಹಣದಿಂದ ರಕ್ಷಿಸಲು ತಂತ್ರಗಾರಿಕೆಯನ್ನು ದೇಶದ ಮುಂದಿಡಬೇಕು ಎಂದರು.

ದೇಶದ ಪ್ರಜಾಪ್ರಭುತ್ವ ಯಾವ ದಿಕ್ಕಿನಲ್ಲಿ ಹೋಗುತ್ತಿದೆ. 1970-80ರಲ್ಲಿ ಚುನಾವಣೆಗಳಲ್ಲಿ ಹಣದ ಪ್ರಭಾವ ಇರಲಿಲ್ಲ. ಈಗ ಹಣದ ಮೇಲೆ ಚುನಾವಣೆ ನಿಂತಿದೆ. ಹಣದಿಂದ ಸಾಮಾಜಿಕ ನಿಯಂತ್ರಣ ಸಾಧ್ಯ ಇಲ್ಲ. ನನ್ನ ಪ್ರಕಾರ ನೈಜವಾದ ಪ್ರಜಾಪ್ರಭುತ್ವ ಎಂದು ಕರೆಸಿಕೊಳ್ಳಲು ಅನರ್ಹವಾಗಿದೆ ಎಂದರು.

ಟಿ.ಎನ್.ಶೇಷನ್ ಅವರು ಚುನಾವಣಾ ಆಯೋಗದ ಮುಖ್ಯಸ್ಥರಾಗಿದ್ದಾಗ ನಾವೆಲ್ಲ ನಡುಗುತ್ತಿದ್ದೆವು. ಹೆದರಿಕೆ, ಶಿಸ್ತು ಇತ್ತು. ಈಗ ವಿಧಾನಸಭೆ ಚುನಾವಣೆಯಲ್ಲಿ 200 ಕೋಟಿ ರೂ. ಖರ್ಚು ಮಾಡುವ ಪುಣ್ಯಾತ್ಮರು ಇದ್ದಾರೆ. ಇದೇ ನಮ್ಮ ಮೌಲ್ಯವೇ? ಎಂಬ ಪ್ರಶ್ನೆ ಕಾಡುತ್ತದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net