ಚದುರಂಗದಾಟಕ್ಕೆ 50 ಸಾವಿರ ರೂ. ನೆರವು

CHESS
Published on

ಶಿರಸಿ: ಕ್ರೀಡೆಗಳು ದೈಹಿಕ ಸಾಮರ್ಥ್ಯವನ್ನು ವೃದ್ಧಿಸಿದರೆ ಚದುರಂಗ ಮಾನಸಿಕ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ. ವ್ಯಕ್ತಿ ದೈಹಿಕ ಹಾಗೂ ಮಾನಸಿಕವಾಗಿ ಪ್ರಬಲನಾಗಬೇಕಾದರೆ ಹೊರಾಂಗಣ ಮತ್ತು ಒಳಾಂಗಣ ಕ್ರೀಡೆಗಳಲ್ಲಿ ಪಾಲ್ಗೊಳ್ಳಬೇಕು ಎಂದು ಶಾಸಕ ಭೀಮಣ್ಣ ನಾಯ್ಕ ಹೇಳಿದರು.

ನಗರದ ಅಂಬೇಡ್ಕರ್ ಸಭಾಭವನದಲ್ಲಿ ಪದವಿಪೂರ್ವ ಶಾಲಾ ಶಿಕ್ಷಣ ಇಲಾಖೆ, ಉಪ ನಿರ್ದೇಶಕರ ಕಚೇರಿ ಹಾಗೂ ಶ್ರೀ ಮಾರಿಕಾಂಬಾ ಸರ್ಕಾರಿ ಪದವಿಪೂರ್ವ ಕಾಲೇಜಿನ ಸಹಯೋಗದಲ್ಲಿ ಎರಡು ದಿನಗಳ ರಾಜ್ಯ ಮಟ್ಟದ ಪದವಿಪೂರ್ವ ಕಾಲೇಜುಗಳ ಚೆಸ್ ಪಂದ್ಯಾವಳಿಗೆ ಮಂಗಳವಾರ ಚಾಲನೆ ನೀಡಿ ಅವರು ಮಾತನಾಡಿದರು. ಬುದ್ದಿವಂತಿಕೆ ಹಾಗೂ ತಾಳ್ಮೆಯ ಆಟವಾಗಿರುವ ಚದುರಂಗ ಭಾರತದಲ್ಲಿ ಪುರಾತನ ಕಾಲದಿಂದಲೂ ಹೆಸರು ಮಾಡಿದೆ. ವಿದ್ಯಾರ್ಥಿಗಳ ಭವಿಷ್ಯಕ್ಕೂ ಪೂರಕವಾಗಿದೆ ಎಂದ ಅವರು ಚೆಸ್ ಪಂದ್ಯಾವಳಿಗೆ 50ಸಾವಿರ ರೂ. ನೆರವು ನೀಡುವುದಾಗಿ ಪ್ರಕಟಿಸಿದರು.

ಕಬಡ್ಡಿ, ಖೋಖೋ, ಕುಸ್ತಿ ಮತ್ತಿತರ ಕ್ರೀಡೆಯಲ್ಲಿ ದೇಹ ದಂಡಿಸುವ ಕೆಲಸ ನಡೆಯುತ್ತದೆ. ಆದರೆ ಚೆಸ್ ಆಟದಲ್ಲಿ ತಲೆಗೆ ಹೆಚ್ಚಿನ ಕೆಲಸ ಸಿಗುತ್ತದೆ ಎಂದರು.

ಭಾರತೀಯ ಕೆಲ ಚೆಸ್ ಆಟಗಾರರು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿದ್ದಾರೆ. ಶಿಕ್ಷಣದಲ್ಲಿ ಓದುವುದು ಮಾತ್ರವಲ್ಲ, ಇಂತಹ ಕ್ರೀಡೆಗಳು ವ್ಯಕ್ತಿತ್ವ ರೂಪಿಸುತ್ತವೆ. ವರ್ತನೆಯಲ್ಲಿ ಪರಿವರ್ತನೆ ತರುತ್ತವೆ ಎಂದರು.

ನಗರಸಭೆ ಅಧ್ಯಕ್ಷ ಶರ್ಮಿಳಾ ಮಾದನಗೇರಿ ಮಾತನಾಡಿ, ಚದುರಂಗ ಆಟದಲ್ಲಿ ಶಕ್ತಿಗಿಂತ ಹೆಚ್ಚಾಗಿ ಯುಕ್ತಿಯ ಅವಶ್ಯಕತೆಯಿದೆ. ಅದೃಷ್ಟ, ಪರಿಶ್ರಮಕ್ಕಿಂತ ಬುದ್ಧಿವಂತಿಕೆ ಕೆಲಸ ಮಾಡುತ್ತದೆ ಎಂದರು.

ಉಪವಿಭಾಗಾಧಿಕಾರಿ ಕೆ. ಕಾವ್ಯಾರಾಣಿ ಮಾತನಾಡಿದರು. ಪದವಿಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ರಾಜಪ್ಪ ಕೆ.ಎಚ್, ಜಿಲ್ಲಾ ಪಪೂ ಕಾಲೇಜುಗಳ ಪ್ರಾಚಾರ್ಯರ ಸಂಘದ ಅಧ್ಯಕ್ಷ ಸತೀಶ ನಾಯ್ಕ, ಕಾರ್ಯದರ್ಶಿ ಎ.ಬಿ.ರಾಮರಥ, ಪದವಿಪೂರ್ವ ಕಾಲೇಜುಗಳ ಉಪನ್ಯಾಸಕರ ಸಂಘದ ಅಧ್ಯಕ್ಷ ದಿವಾಕರ ನಾಯ್ಕ, ಜಿಲ್ಲಾ ಕ್ರೀಡಾ ಸಂಯೋಜಕ ಪ್ರಶಾಂತ ರಾಣೆ, ಸತೀಶ ನಾಯ್ಕ, ಸುಕೇಶ ಶೆಟ್ಟಿ, ತಿಪ್ಪೇಸ್ವಾಮಿ, ಶ್ರೀಪಾದ ಶೆಟ್ಟಿ, ನವೀನ ಹೆಗಡೆ ಇತರರು ಪಾಲ್ಗೊಂಡರು. ಶ್ರೀ ಮಾರಿಕಾಂಬಾ ಸರ್ಕಾರಿ ಪದವಿಪೂರ್ವ ಕಾಲೇಜು ಪ್ರಾಚಾರ್ಯ ಬಾಲಚಂದ್ರ ಭಟ್ಟ ಸ್ವಾಗತಿಸಿದರು. ರಾಜಶ್ರೀ ನಾಯಕ ನಿರೂಪಿಸಿದರು.

ರಾಜ್ಯಮಟ್ಟದ ಪಂದ್ಯಾವಳಿಯ ನಡೆಯುವ ಎಲ್ಲ ಟೇಬಲ್‌ಗಳನ್ನು ಪರಿಶೀಲಿಸಿದ ಶಾಸಕ ಭೀಮಣ್ಣ ನಾಯ್ಕ ವಿವಿಧೆಡೆಯಿಂದ ಆಗಮಿಸಿದ ವಿದ್ಯಾರ್ಥಿಗಳೊಂದಿಗೆ ಕುಶಲೋಪರಿ ವಿಚಾರಿಸಿದರು. ನಂತರ ಕೆಲ ನಿಮಿಷ ಕಾಯಿಗಳನ್ನು ಚಲಿಸಿ ಗಮನ ಸೆಳೆದರು.

ಎರಡು ದಿನಗಳ ಚೆಸ್ ಪಂದ್ಯಾವಳಿಯಲ್ಲಿ ರಾಜ್ಯದ 32 ಜಿಲ್ಲೆಗಳ ಪಪೂ ಕಾಲೇಜು ವಿದ್ಯಾರ್ಥಿಗಳು ಭಾಗವಹಿಸಿದ್ದಾರೆ. 320 ವಿದ್ಯಾರ್ಥಿಗಳು ಪೈಪೋಟಿ ನೀಡುತ್ತಿದ್ದು ಅದರಲ್ಲಿ ತಲಾ 160 ಗಂಡು-ಹೆಣ್ಣು ಮಕ್ಕಳಿದ್ದಾರೆ. ಇದಕ್ಕಾಗಿ 75 ಟೇಬಲ್‌ಗಳನ್ನು ಅಳವಡಿಸಲಾಗಿದೆ. ಪ್ರತಿ ಟೇಬಲ್‌ನಲ್ಲಿ 3 ಚೆಸ್ ಬೋರ್ಡ್‌ಗಳಲ್ಲಿ ವಿದ್ಯಾರ್ಥಿಗಳು ಸೆಣಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net