50 ಜಾನುವಾರುಗಳ ರಕ್ಷಣೆ

nrp cow
ಎನ್.ಆರ್.ಪುರ ತಾಲೂಕು ಸಾಲೂರು ಗ್ರಾಮದ ಭದ್ರಾ ನದಿ ಮಧ್ಯದಲ್ಲಿದ್ದ ಜಾನುವಾರನ್ನು ಕರೆತರಲು ಗ್ರಾಮಸ್ಥರು ಬೋಟ್‌ನಲ್ಲಿ ತೆರಳಿದರು.
Published on

ಎನ್.ಆರ್.ಪುರ: ಹೊನ್ನೇಕೊಡಿಗೆ ಗ್ರಾಪಂ ಸಾಲೂರು ಗ್ರಾಮದಲ್ಲಿ ಭದ್ರಾ ನದಿ ಎರಡು ಭಾಗವಾಗಿ ಹರಿಯುತ್ತಿದ್ದು, ದ್ವೀಪದಂತಿರುವ ಅಂದಾಜು 100 ಎಕರೆ ಜಾಗದಲ್ಲಿ ಮೇಯಲು ಹೋಗಿ ಸಿಕ್ಕಿ ಹಾಕಿಕೊಂಡಿದ್ದ 45 ರಿಂದ 50 ಜಾನುವಾರುಗಳನ್ನು ಗ್ರಾಮಸ್ಥರು ರಕ್ಷಣೆ ಮಾಡಿದ್ದಾರೆ.

ಸಾಲೂರು ಗ್ರಾಮದಲ್ಲಿ ಭದ್ರಾ ನದಿ ಎರಡು ಭಾಗವಾಗಿ ಹರಿಯುತ್ತದೆ. ನಂತರ 1 ಕಿ.ಮೀ. ಮುಂದೆ ಹೋದಂತೆ ನದಿಯ ಕವಲುಗಳು ಒಂದಾಗಿ ಹರಿಯುತ್ತವೆ. ಕೆಲವು ದಿನಗಳ ಹಿಂದೆ ಸಾಲೂರು ಗ್ರಾಮದ ಜಾನುವಾರುಗಳು ನದಿ ದಾಟಿ ದ್ವೀಪದಂಥ ಜಾಗದಲ್ಲಿ ಮೇಯಲು ಹೋಗಿದ್ದವು. ವಿಷಯವನ್ನು ಗ್ರಾಮಸ್ಥರು ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಹಂಚಿನಮನೆ ರಾಘವೇಂದ್ರ ಅವರಿಗೆ ತಿಳಿಸಿದರು. ಅವರು ಭದ್ರಾ ವನ್ಯಜೀವಿ ವಿಭಾಗದ ಮುತ್ತೋಡಿ ವಿಭಾಗದ ಉಪ ವಲಯ ಅರಣ್ಯ ಸಂರಕ್ಷಣಾಧಿಕಾರಿ ಬೋಪಯ್ಯ ಅವರ ಗಮನಕ್ಕೆ ತಂದರು. ಅವರ ನಿರ್ದೇಶನದಂತೆ ಹೆಬ್ಬೆ ಉಪ ವಲಯ ಅರಣ್ಯಾಧಿಕಾರಿಗಳಾದ ದಯಾನಂದ್, ಉಪ ವಲಯ ಅರಣ್ಯಾಧಿಕಾರಿ ಶ್ರೀನಿವಾಸ್ ಹಾಗೂ ಅದೇ ಭಾಗದ ಅರಣ್ಯ ರಕ್ಷಕ ಸಂಪ್ರೀತ್ ಅವರ ಗಮನಕ್ಕೆ ತಂದು ಹೆಬ್ಬೆ ವಲಯ ಅರಣ್ಯ ಇಲಾಖೆಯ ಬೋಟು ಪಡೆದು ಗ್ರಾಮಸ್ಥರ ಸಹಕಾರದಿಂದ ಕಾರ್ಯಾಚರಣೆ ನಡೆಸಲಾಯಿತು.
ಬೋಟ್‌ನಲ್ಲಿ ಒಂದು ಹಸುವನ್ನು ಕಟ್ಟಿಕೊಂಡು ಬರಲಾಯಿತು. ಆ ಸಂದರ್ಭದಲ್ಲಿ ಉಳಿದ ಹಸುಗಳು ಬೋಟನ್ನು ಹಿಂಬಾಲಿಸಿಕೊಂಡು ಸಾಲೂರು ಗ್ರಾಮಕ್ಕೆ ಬಂದಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net