ಲೀಟರ್​ ಹಾಲಿಗೆ 50 ಪೈಸೆ ಲಾಭ!

kochimul Head office kolar
Published on
ಸರ್ಕಾರ 3ರೂ. ಹೆಚ್ಚಿಸಿದರೂ 2.5 ರೂ. ಇಳಿಸಿದ ಕೋಚಿಮುಲ್

ಕೋಲಾರ: ರಾಜ್ಯ ಸರ್ಕಾರ ಆಗಸ್ಟ್​ ಒಂದರಿಂದ ಗ್ರಾಹಕರು ಕೊಳ್ಳುವ ಹಾಲಿನ ದರವನ್ನು ಲೀಟರಿಗೆ ಮೂರು ರೂಪಾಯಿ ಏರಿಸಿದೆ. ಈ ಮೂರು ರೂಪಾಯಿ ಸಂಪೂರ್ಣವಾಗಿ ರೈತರಿಗೇ ತಲುಪಬೇಕು. ಒಂದೇ ಒಂದು ಪೈಸೆ ಕಡಿಮೆಯಾದರೂ ಆಡಳಿತ ಮಂಡಳಿಯನ್ನೇ ರದ್ದುಪಡಿಸಬೇಕಾದೀತು ಎಂದು ಸಿಎಂ ಸಿದ್ದರಾಮಯ್ಯ ಕಟ್ಟಪ್ಪಣೆ ವಿಧಿಸಿದ್ದಾರೆ. ಆದರೆ ಕೋಲಾರ&ಚಿಕ್ಕಬಳ್ಳಾಪುರ ಜಿಲ್ಲೆಯ ರೈತರಿಗೆ ಸರ್ಕಾರ ಏರಿಸಿರುವ ಮೂರು ರೂಪಾಯಿ ದರದಲ್ಲಿ ಕೇವಲ 50 ಪೈಸೆ ಮಾತ್ರ ಲಾಭ ಆಗಲಿದೆ. ಏಕೆಂದರೆ ಕೋಚಿಮುಲ್​ ಜು.16ರಿಂದಲೇ ಜಾರಿಗೆ ಬರುವಂತೆ ಲೀಟರಿಗೆ 2.50ರೂ. ಇಳಿಸಿದೆ.
ಈ 15 ದಿನ ಕಳೆದುಕೊಂಡಿದ್ದ ಎರಡೂವರೆ ರೂಪಾಯಿಗೆ ಪರ್ಯಾಯವಾಗಿ ಆಗಸ್ಟ್​ 1ರಿಂದ ಏರಿಸಲಾದ ಮೂರು ರೂಪಾಯಿ ಬಂದರೂ ಉತ್ಪಾದಕರಿಗೆ ಸಿಗುವುದು ಲೀಟರಿಗೆ 50 ಪೈಸೆ ಮಾತ್ರ ಹೆಚ್ಚಳ. ಜುಲೈ 5ರಂದು ನಡೆದ ಕೋಚಿಮುಲ್​ ಆಡಳಿತ ಮಂಡಳಿ ಸಭೆಯಲ್ಲಿ ಇತ್ತೀಚಿನ ದಿನಗಳಲ್ಲಿ ಹಾಲು ಸಂಗ್ರಹಣೆ ಅಧಿಕವಾಗಿರುವ ಕಾರಣ ಒಕ್ಕೂಟದ ಆರ್ಥಿಕ ಪರಿಸ್ಥಿತಿ ಗಮನದಲ್ಲಿರಿಸಿ ಕೊಂಡು ಜು.16ರಿಂದ ಜಾರಿಗೆ ಬರುವಂತೆ ಹಾಲಿನ ದರವನ್ನು ಲೀಟರಿಗೆ 2.50ರೂ. ಇಳಿಸಲಾಗಿತ್ತು. ಇದರಿಂದ ಈವರೆಗೆ ರೈತರಿಗೆ ಲೀಟರಿಗೆ ದೊರಕುತ್ತಿದ್ದ 35.35ರೂ. ಬದಲಿಗೆ 32.85 ರೂಪಾಯಿ ಸಿಗುತ್ತಿದೆ. ಈ ಮೊದಲು ಹಾಲು ಸೊಸೈಟಿ ಗಳಿಂದ ರೈತರಿಗೆ ಲೀಟರಿಗೆ 33.90 ರೂಪಾಯಿ ಪಾವತಿ ಆಗುತ್ತಿದ್ದುದು ಜುಲೈ 17ರಿಂದ 31.40ರೂ. ಗಳಿಗೆ ಇಳಿದಿದೆ. ಹಾಗೂ ಸೊಸೈಟಿ ಗಳಲ್ಲಿ ಸ್ಥಳಿಯ ವಾಗಿ ಹಾಲು ಮಾರಾಟ ದರವನ್ನು 39ರೂ. ಗಳಿಗೆ ನಿಗದಿಪಡಿಸಲಾಗಿದೆ. ಜುಲೈ 16ರಿಂದ ರೈತರು ಪಡೆಯುತ್ತಿರುವ 32.85ರೂ. ಜತೆಗೆ ರಾಜ್ಯ ಸರ್ಕಾರ ಏರಿಸಿರುವ ಮೂರು ರೂ. ಸೇರಿದರೆ ಆಗಸ್ಟ್​ 1ರಿಂದ ರೈತರಿಗೆ 35.85ರೂ. ಆಗುತ್ತದೆ.

ಕೋಚಿಮುಲ್​ ಆಡಳಿತ ಮಂಡಳಿಯು ಮೊದಲಿನಿಂದಲೂ ಉತ್ಪಾದಕರ ಪರವಾಗಿದೆ. ಇಡೀ ರಾಜ್ಯದಲ್ಲಿ ಅತಿ ಹೆಚ್ಚು ಹಾಲಿನ ದರ ರೈತರಿಗೆ ನೀಡಲಾಗುತ್ತಿದೆ. ಮೂರು ತಿಂಗಳಿನಲ್ಲಿ ಹಾಲು ಉತ್ಪಾದನೆ ಹೆಚ್ಚಾಗಿದ್ದರೂ ರೈತರ ಹಿತದೃಷ್ಟಿಯಿಂದ ಹಾಲಿನ ದರ ಇಳಿಸಿರಲಿಲ್ಲ. ಒಕ್ಕೂಟಕ್ಕೆ ಆರ್ಥಿಕ ನಷ್ಟ ಉಂಟಾಗುತ್ತಿರುವ ಕಾರಣ ತಾತ್ಕಾಲಿಕವಾಗಿ ಎರಡೂವರೆ ರೂಪಾಯಿ ಇಳಿಸಲಾಗಿದೆ. ಒಂದೆರೆಡು ತಿಂಗಳಲ್ಲಿ ಮತ್ತೆ ಹಾಲಿನ ದರ ಏರಿಸಲಾಗುವುದು. ಅದುವರೆಗೆ ರೈತರು ಸಹಕರಿಸಬೇಕು.

|ಕೆ.ವೈ.ನಂಜೇಗೌಡ, ಕೋಚಿಮುಲ್​ ಅಧ್ಯಕ್ಷ

ಕೋಲಾರ&ಚಿಕ್ಕಬಳ್ಳಾಪುರ ಜಿಲ್ಲೆಯ ರೈತರು ಒಂದು ರೀತಿಯ ವಿಚಿತ್ರ ತೀರ್ಮಾನಕ್ಕೆ ತುತ್ತಾಗಿದ್ದಾರೆ. ಗ್ರಾಹಕರಿಗೆ ಅಗಸ್ಟ್​ 1ರಿಂದ ಮೂರು ರೂಪಾಯಿ ಬೆಲೆ ಏರಿಕೆ ಅಗುತ್ತದೆ. ಆದರೆ ಉತ್ಪಾದಕರಿಗೆ ಬೆಲೆ ಇಳಿಕೆಯಾಗಿದೆ. ಹಿಂದಿನ ಅನುಭವದ ಆಧಾರದ ಮೇಲೆ ಸರ್ಕಾರ ಬೆಲೆ ಏರಿಸಿರುವ ಬೆನ್ನ ಹಿಂದೆಯೇ ಪಶು ಆಹಾರದ ಬೆಲೆ ಏರಿಕೆ ಬಿಸಿ ಯಾವಾಗ ಆಗುತ್ತದೆಯೋ ಎಂಬ ಆತಂಕದಲ್ಲಿ ರೈತರು ಇದ್ದಾರೆ. ಯಾವಾಗಲೂ ರೈತರಿಗೆ ಬರೆ ಬೀಳುವುದು ಗ್ಯಾರಂಟಿ ಎಂಬಂತಾಗಿದೆ.

| ಗೋವಿಂದರಾಜು, ಎಂಪಿಸಿಎಸ್​ ನಿವೃತ್ತ ಕಾರ್ಯದರ್ಶಿ, ಅಪ್ಪೇಗೌಡನಹಳ್ಳಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net