ತೀರ್ಥಹಳ್ಳಿ ಪಿಎಲ್‌ಡಿ ಬ್ಯಾಂಕ್‌ಗೆ 50 ಲಕ್ಷ ರೂ. ಲಾಭ

07 tth 01
ತೀರ್ಥಹಳ್ಳಿ ತಾಲೂಕು ಪ್ರಾಥಮಿಕ ಕೃಷಿ ಮತ್ತು ಭೂ ಅಭಿವೃದ್ಧಿ ಬ್ಯಾಂಕ್ ಅಧ್ಯಕ್ಷ ಎಚ್.ಎನ್.ವಿಜಯದೇವ್ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದರು. ಉಪಾಧ್ಯಕ್ಷ ಕೆ.ಎಸ್.ಸತೀಶ್, ಕಾರ್ಯದರ್ಶಿ ಕೃಷ್ಣಮೂರ್ತಿ ಇದ್ದರು.
Published on

ತೀರ್ಥಹಳ್ಳಿ: ತಾಲೂಕಿನ ಪ್ರಾಥಮಿಕ ಕೃಷಿ ಮತ್ತು ಭೂ ಅಭಿವೃದ್ಧಿ ಬ್ಯಾಂಕ್ ಜಿಲ್ಲೆಯಲ್ಲೇ ಪ್ರಥಮ ಸ್ಥಾನದಲ್ಲಿದ್ದು ನಬಾರ್ಡ್ ಪ್ರಶಸ್ತಿಗೆ ಭಾಜನವಾಗಿದೆ. ಜನಸ್ನೇಹಿ ಆರ್ಥಿಕ ಸಂಸ್ಥೆಯಾಗಿ ಕಾರ್ಯನಿರ್ವಹಿಸುತ್ತಿದ್ದು 2022-23ನೇ ಸಾಲಿನಲ್ಲಿ 36.22 ಕೋಟಿ ರೂ. ಸಾಲ ವಿತರಿಸಿ, 50 ಲಕ್ಷ ರೂ. ಲಾಭ ಗಳಿಸಿದೆ. ಷೇರುದಾರರಿಗೆ ಈ ವರ್ಷ ಶೇ.10 ಡಿವಿಡೆಂಡ್ ನೀಡುತ್ತಿದ್ದೇವೆ ಎಂದು ಬ್ಯಾಂಕಿನ ಅಧ್ಯಕ್ಷ ಎಚ್.ಎನ್.ವಿಜಯದೇವ್ ಹೇಳಿದರು.

ಕಳೆದ ಮೂರು ವರ್ಷಗಳಿಂದ ಸಾಲಮನ್ನಾ ಯೋಜನೆ, ಕರೊನಾ ಹಿನ್ನೆಲೆಯಲ್ಲಿ ಉಂಟಾಗಿದ್ದ ಆರ್ಥಿಕ ಅಸಮತೋಲನದ ನಡುವೆಯೂ ಸಾಲ ಪಡೆದ ರೈತರ ಸಹಕಾರದಿಂದ ಲಾಭ ಗಳಿಸಿದ ರಾಜ್ಯದ ಕೆಲವೇ ಬ್ಯಾಂಕ್‌ಗಳಲ್ಲಿ ನಮ್ಮದು ಒಂದಾಗಿದೆ. ಆಡಿಟ್ ವರ್ಗೀಕರಣದಲ್ಲಿ ಕಳೆದ 17 ವರ್ಷಗಳಿಂದ ಎ ಗ್ರೇಡ್ ಪಡೆಯುತ್ತಿದೆ. ಸೆಪ್ಟೆಂಬರ್ 12ರಂದು ಬ್ಯಾಂಕಿನ ಸರ್ವ ಸದಸ್ಯರ ಸಭೆ ನಡೆಯಲಿದೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
5,098 ಷೇರುದಾರರಿರುವ ಬ್ಯಾಂಕಿನಿಂದ ವಿವಿಧ ಯೋಜನೆಗಳ ಮೂಲಕ ಷೇರುದಾರರಿಗೆ ದೀರ್ಘಾವಧಿ ಹಾಗೂ ಅಲ್ಪಾವಧಿ ಮೂಲಕ 2,109 ಷೇರುದಾರರಿಗೆ 36.22 ಕೋಟಿ ರೂ. ಸಾಲ ಒದಗಿಸಲಾಗಿದೆ. ಕಳೆದ ಆರ್ಥಿಕ ವರ್ಷದಲ್ಲಿ ಶೇ.70.14 ವಸೂಲು ಮಾಡಲಾಗಿದೆ. ಸಕಾಲದಲ್ಲಿ ಮರು ಪಾವತಿ ಮಾಡದ 65 ಸುಸ್ತಿದಾರ ಷೇರುದಾರರ ವಿರುದ್ಧ ದಾವೆ ಹೂಡಲಾಗಿದೆ. 85 ಲಕ್ಷ ರೂ. ಫಿಕ್ಸೆಡ್ ಡಿಪಾಸಿಟ್ ಇದೆ ಎಂದರು.
ಷೇರುದಾರ ಸದಸ್ಯರ ಮಕ್ಕಳ ಶೈಕ್ಷಣಿಕ ಸಾಧನೆಯನ್ನು ಗುರುತಿಸಿ ಉತ್ತೇಜಿಸುವ ಸಲುವಾಗಿ ಪ್ರತಿವರ್ಷದಂತೆ ಈ ವರ್ಷವೂ ಬ್ಯಾಂಕಿನ ಸರ್ವ ಸದಸ್ಯರ ಸಭೆಯಲ್ಲಿ ಎಸ್‌ಎಸ್‌ಎಲ್‌ಸಿ, ದ್ವೀತಿಯ ಪಿಯುಸಿ ಮತ್ತು ಪದವಿ ವಿಭಾಗದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಗುವುದು ಎಂದು ಹೇಳಿದರು. ಉಪಾಧ್ಯಕ್ಷ ಕೆ.ಎಸ್.ಸತೀಶ್, ಕಾರ್ಯದರ್ಶಿ ಕೃಷ್ಣಮೂರ್ತಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net